Wayanad landslides updates: 89ಕ್ಕೆ ಏರಿದ ವಯನಾಡ್ ಭೂಕುಸಿತದ ಸಾವಿನ ಸಂಖ್ಯೆ, ಕೇರಳದಲ್ಲಿ ಎರಡು ದಿನ ಶೋಕಾಚರಣೆ
ತಿರುವನಂತಪುರಂ, ಜುಲೈ. 30: ಕೇರಳದ ವಯನಾಡಿನಲ್ಲಿ ಆಗಿರುವ ಭೂಕುಸಿತಗಳು ದೇಶವನ್ನೇ ರಾಜ್ಯದತ್ತ ನೋಡುವಂತೆ ಮಾಡಿದೆ. ಭಾರಿ ಮಳೆಯಿಂದ ಉಂಟಾಗಿರುವ ಅನಾಹುತದಲ್ಲಿ ಈಗಾಗಲೇ ಸಾವಿನ ಸಂಖ್ಯೆ 89 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಜುಲೈ 30, 31 ರಂದು ರಾಜ್ಯದಲ್ಲಿ ಶೋಕಾಚರಣೆ ಘೋಷಿಸಲಾಗಿದೆ.
ಜುಲೈ 30 ಮತ್ತು 31 ಎರಡು ದಿನಗಳನ್ನು ರಾಜ್ಯ ಶೋಕಾಚರಣೆಯಾಗಿ ಆಚರಿಸಲಾಗುವುದು ಎಂದು ಕೇರಳ ಸರ್ಕಾರ ಘೋಷಿಸಿದೆ. ರಾಜ್ಯ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಕೇರಳದ ಗುಡ್ಡಗಾಡು ಜಿಲ್ಲೆ ವಯನಾಡ್‌ನಲ್ಲಿ ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಈ ಹಿಂದೆಯೇ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿತ್ತು.

ಪ್ರವಾಹ ಪೀಡಿತ ಪ್ರದೇಶದಲ್ಲಿ ಭಾರಿ ಮಳೆ ಹತ್ತಿರದ ಪಟ್ಟಣಕ್ಕೆ ಸಂಪರ್ಕಿಸುವ ತಾತ್ಕಾಲಿಕ ಸೇತುವೆಯನ್ನು ಸಹ ನಾಶಪಡಿಸಿದೆ. ರಕ್ಷಣಾ ಕಾರ್ಯಾಚರಣೆಗೆ ಭಾರತೀಯ ಸೇನೆ ಕೂಡ ಇಳಿದಿದೆ. ಸೈನ್ಯವು ನಾಲ್ಕು ತಂಡಗಳನ್ನು ಸಜ್ಜುಗೊಳಿಸಿದೆ, ಇದರಲ್ಲಿ ಎರಡು ಕಾಲಮ್‌ಗಳು ಎಕ್ಸ್ 122 ಇನ್‌ಫೆಂಟ್ರಿ ಬೆಟಾಲಿಯನ್ (ಟೆರಿಟೋರಿಯಲ್ ಆರ್ಮಿ) ಮತ್ತು ಎರಡು ಕಣ್ಣೂರಿನ ಮಾಜಿ ಡಿಎಸ್‌ಸಿ ಸೆಂಟರ್‌ಗೆ ಕಳುಹಿಸಲಾಗಿದೆ.
ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ಸಜ್ಜುಗೊಳಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸಂಪರ್ಕವಿಲ್ಲದ ಕಾರಣ ರಕ್ಷಣಾ ಪ್ರಯತ್ನಗಳು ಸವಾಲಾಗಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಿರುವನಂತಪುರಂನಲ್ಲಿರುವ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ವಿಶೇಷ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿಹೋಗಿರುವ ಆತಂಕವಿದೆ.

ಕೇರಳದ ರಕ್ಷಣಾ ಕಾರ್ಯಗಳಲ್ಲಿ ಸಹಾಯ ಮಾಡಲಿದೆ ಕರ್ನಾಟಕ ಮತ್ತು ತಮಿಳುನಾಡು
ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕೇರಳಕ್ಕೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. "ಕೇರಳದಲ್ಲಿ ಸಂಭವಿಸಿದ ಗುಡ್ಡ ಕುಸಿತ ಅವಘಡದಲ್ಲಿ 70ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು, ಹಲವರು ಕಣ್ಮರೆಯಾಗಿರುವ ಸುದ್ದಿ ಕೇಳಿ ಎದೆ ನಲುಗಿತು. ಇಂತಹ ಸಂಕಷ್ಟದ ಸಮಯದಲ್ಲಿ ನೆರೆಯ ಕೇರಳ ಜನರ ಜೊತೆ ನಾವು ನಿಲ್ಲಲಿದ್ದೇವೆ. ಕೇರಳಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನಮ್ಮ ಸರ್ಕಾರ ನೀಡಲಿದೆ" ಎಂದು ತಿಳಿಸಿದ್ದಾರೆ.
ಭಾರೀ ಮಳೆಯಿಂದ ಉಂಟಾದ ಭೂಕುಸಿತದ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಮಂಗಳವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತಮಿಳುನಾಡಿನ ಸಂಪೂರ್ಣ ಬೆಂಬಲ ನೀಡುವ ಬಗ್ಗೆ ಭರವಸೆ ನೀಡಿದ್ದಾರೆ.
ಕೇರಳಕ್ಕೆ ಸಹಾಯ ಮಾಡಲು ತಂಡವನ್ನು ತಕ್ಷಣವೇ ಕಳುಹಿಸುವುದಾಗಿ ಸ್ಟಾಲಿನ್ ಘೋಷಿಸಿದ್ದಾರೆ. ಕೇರಳದ ಪರಿಹಾರ ಚಟುವಟಿಕೆಗಳಿಗೆ 5 ಕೋಟಿ ಬಿಡುಗಡೆ ಮಾಡುವಂತೆ ತಮಿಳುನಾಡು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಕೇರಳಕ್ಕೆ ಸಹಾಯ ಮಾಡಲು ರಕ್ಷಣಾ ತಂಡವನ್ನು ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.












Click it and Unblock the Notifications