Wayanad landslides: ಭೂಕುಸಿತಕ್ಕೆ 47 ಮಂದಿ ಬಲಿ, ನೂರಾರು ಮಂದಿ ಸಿಲುಕಿರುವ ಭೀತಿ
ತಿರುವನಂತಪುರಂ, ಜುಲೈ. 30: ಭಾರೀ ಮಳೆಯ ಕಾರಣ ಮಂಗಳವಾರ ಬೆಳಗ್ಗೆ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಭೂಕುಸಿತದಲ್ಲಿ ಕನಿಷ್ಠ 47 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಸಿಲುಕಿರುವ ಶಂಕೆ ಇದೆ.
ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ಮತ್ತು ಸೇನೆ ಸೇರಿದಂತೆ ಹಲವು ಏಜೆನ್ಸಿಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳು ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ. ಚಾಲಿಯಾರ್ ನದಿಯಲ್ಲಿ ಹಲವರು ಕೊಚ್ಚಿಹೋಗಿರುವ ಆತಂಕವಿದೆ.

ಘಟನಾ ಸ್ಥಳದಲ್ಲಿ ವೈದ್ಯಕೀಯ ತಂಡಗಳು ಸೇರಿದಂತೆ 225 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಭಾರತೀಯ ಸೇನೆ ಹೇಳಿಕೆಯಲ್ಲಿ ತಿಳಿಸಿದೆ. ಎರಡು ವಾಯುಪಡೆಯ ಹೆಲಿಕಾಪ್ಟರ್‌ಗಳು, ಎಂಐ-17 ಮತ್ತು ಎಎಲ್‌ಹೆಚ್ (ಅಡ್ವಾನ್ಸ್‌ಡ್ ಲೈಟ್ ಹೆಲಿಕಾಪ್ಟರ್) ಸಹ ರಕ್ಷಣಾ ಕಾರ್ಯಾಚರಣಗೆ ಕರೆಸಲಾಗಿದೆ.
ಭಾರತೀಯ ನೌಕಾಪಡೆಯ ತಂಡವೊಂದು ರಕ್ಷಣಾ ಕಾರ್ಯದಲ್ಲಿ ನೆರವಾಗಲಿದೆ ಎಂದು ಕೇರಳ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಪೀಡಿತ ಪ್ರದೇಶಗಳನ್ನು ಸಮೀಪದ ಚೂರಲ್ಮಲಾ ಪಟ್ಟಣಕ್ಕೆ ಸಂಪರ್ಕಿಸುವ ಜಿಲ್ಲೆಯ ಸೇತುವೆಯೂ ಕೊಚ್ಚಿಹೋಗಿದೆ. ಸುಮಾರು 70 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆಯನ್ನು ನಾವು ನೀಡುತ್ತಿದ್ದೇವೆ ಎಂದು ಸಚಿವೆ ಹೇಳಿದ್ದಾರೆ.

ವಯನಾಡ್ ಭೂಕುಸಿತ: ಪರಿಹಾರ ಘೋಷಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಮಾತನಾಡಿದ್ದಾರೆ ಮತ್ತು ಈ ಬಿಕ್ಕಟ್ಟನ್ನು ಎದುರಿಸಲು ಕೇಂದ್ರದಿಂದ ಎಲ್ಲಾ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಭೂಕುಸಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪ್ರಧಾನಿ ಕಾರ್ಯಾಲಯ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಗಾಯಗೊಂಡವರಿಗೆ 50,000 ರೂಪಾಯಿ ಘೋಷಿಸಿದೆ.
ಪ್ರವಾಹದಲ್ಲಿ ಕೊಚ್ಚಿಹೋದ ವಾಹನಗಳು ಮರಗಳ ಬುಡದಲ್ಲಿ ಸಿಲುಕಿಕೊಂಡಿರುವುದು ಕಂಡು ಬಂದಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯುಂಟಾಗಿದ್ದು, ರಕ್ಷಣಾ ಕಾರ್ಯಕರ್ತರ ಮಾರ್ಗವನ್ನು ಬೃಹತ್ ಬಂಡೆಗಳು ತಡೆಯುತ್ತಿರುವುದರಿಂದ ಕೆಲವು ಪ್ರದೇಶಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಯಲ್ಲಿ, ಪ್ರಸ್ತುತ ನಡೆಯುತ್ತಿರುವ ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಐವರು ಸಚಿವರ ನಿಯೋಗವನ್ನು ವಯನಾಡ್‌ಗೆ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. "ಎಲ್ಲ ಸರ್ಕಾರಿ ಸಂಸ್ಥೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಒಟ್ಟಾಗಿ ಸೇರಿಕೊಂಡಿವೆ. ಸಚಿವರು ವಯನಾಡಿಗೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಳ್ಳುತ್ತಾರೆ" ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಭೂಕುಸಿತದ ಹಿನ್ನೆಲೆಯಲ್ಲಿ ಸಹಾಯವಾಣಿ ಮತ್ತು ಆಶ್ರಯ ಕೊಠಡಿ ತೆರೆಯಲಾಗಿದೆ. ತುರ್ತು ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9656938689 ಮತ್ತು 8086010833 ಅನ್ನು ಸಹ ನೀಡಲಾಗಿದೆ. ಜಿಲ್ಲೆಯ ಅಧಿಕಾರಿಗಳ ಪ್ರಕಾರ, ಹಲವಾರು ಕುಟುಂಬಗಳನ್ನು ವಿವಿಧ ಶಿಬಿರಗಳಿಗೆ ಅಥವಾ ಅವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ರಾಹುಲ್ ಗಾಂಧಿ ಸಂತಾಪ
ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಭೂಕುಸಿತಗಳು ಮತ್ತು ಅದರಿಂದ ಉಂಟಾದ ಜೀವಹಾನಿಗೆ ತೀವ್ರ ದುಃಖಿತನಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. "ನಾನು ಕೇರಳ ಮುಖ್ಯಮಂತ್ರಿ ಮತ್ತು ವಯನಾಡ್ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಅವರು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ ಎಂದು ನನಗೆ ಭರವಸೆ ನೀಡಿದರು. ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯವನ್ನು ಸಾಧಿಸಲು, ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲು ಮತ್ತು ಪರಿಹಾರ ಕಾರ್ಯಗಳಲ್ಲಿ ಅಗತ್ಯವಿರುವ ಯಾವುದೇ ಸಹಾಯ ಬೇಕಿದ್ದರೆ ನಮಗೆ ತಿಳಿಸಲು ನಾನು ಅವರಿಗೆ ಮನವಿ ಮಾಡಿದ್ದೇನೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಕೇರಳದಲ್ಲಿ ರೆಡ್ ಅಲರ್ಟ್
ಭಾರತೀಯ ಹವಾಮಾನ ಇಲಾಖೆಯು ಕೇರಳದ ಉತ್ತರ ಜಿಲ್ಲೆಗಳಲ್ಲಿ ಮಂಗಳವಾರ ರೆಡ್ ಅಲರ್ಟ್ ಘೋಷಿಸಿದೆ. ಕಾಸರಗೋಡು, ಕಣ್ಣೂರು, ವಯನಾಡು, ಕೋಝಿಕ್ಕೋಡ್ ಮತ್ತು ಮಲಪ್ಪುರಂನಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸ್ಥಳೀಯರು ಮತ್ತು ಪ್ರವಾಸಿಗರು ತೀವ್ರ ಮುಂಜಾಗ್ರತೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.












Click it and Unblock the Notifications