ಶಾರುಖ್ ತನ್ನ ಮಗಳೊಂದಿಗೆ ಕುಳಿತು ಪಠಾಣ್ ಚಿತ್ರ ವೀಕ್ಷಿಸಲಿ: ಮಧ್ಯಪ್ರದೇಶ ಸ್ಪೀಕರ್
ಭೋಪಾಲ್, ಡಿಸೆಂಬರ್ 19: ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಚಿತ್ರದ ವಿವಾದವು ತಣ್ಣಗಾಗುವಂತೆ ಕಾಣುತ್ತಿಲ್ಲ. ಕಳೆದ ವಾರ ಬಿಡುಗಡೆಯಾದ 'ಬೇಷರಮ್ ರಂಗ್' ಹಾಡು ಬಿಜೆಪಿ ಹಾಗೂ ಸಂಘ ಪರಿವಾರದವರ ಕೆಂಗಣ್ಣಿಗೆ ಗುರಿಯಾಗಿದೆ.
ಬೇಷರಮ್ ರಂಗ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ತುಂಡುಡುಗೆ ತೊಟ್ಟಿರುವ ವಿಚಾರವು ದೇಶದಾದ್ಯಂತ ವಿವಾದವನ್ನು ಸೃಷ್ಟಿಸಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಪಠಾಣ್ ಚಿತ್ರ ನಿಷೇಧದ ಕುರಿತು ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಪಠಾಣ್ ಪರ-ವಿರೋಧದ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿದೆ.

ಪಠಾಣ್ ಚಿತ್ರಕ್ಕೆ ಮಧ್ಯಪ್ರದೇಶ ಸ್ಪೀಕರ್ ವಿರೋಧ
ಮುಂದಿನ ವರ್ಷದ ಜನೆವರಿಯಲ್ಲಿ ಬಿಡುಗಡೆಯಾಗಲಿರುವ ಪಠಾಣ್ ಚಿತ್ರದ ವಿರುದ್ಧ ಮಧ್ಯಪ್ರದೇಶ ಸ್ಪೀಕರ್ ಗಿರೀಶ್ ಗೌತಮ್ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಶಾರುಖ್ ಅವರು ತಮ್ಮ ಮಗಳ ಜೊತೆ ಈ ಚಿತ್ರವನ್ನು ನೋಡಬೇಕು. ಈ ಚಿತ್ರವನ್ನು ಮಗಳ ಜೊತೆಗೇ ಕುಳಿತು ಅಪ್ಲೋಡ್ ಮಾಡಬೇಕು. ಅದನ್ನು ತಮ್ಮ ಮಗಳ ಜೊತೆ ನೋಡುತ್ತಿದ್ದಾರೆ ಎಂಬುದಾಗಿ ಜಗತ್ತಿಗೆ ತಿಳಿಸಬೇಕು' ಎಂದು ಹೇಳಿದ್ದಾರೆ.
ಪ್ರವಾದಿ ಕುರಿತು ಇದೇ ರೀತಿಯ ಚಿತ್ರವನ್ನು ನಿರ್ಮಿಸಿ ಬಿಡುಗಡೆ ಮಾಡಿ ಎಂದು ಶಾರುಖ್‌ಗೆ ಸವಾಲು ಹಾಕಿದ್ದಾರೆ.
ಐದು ದಿನಗಳ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಗೌತಮ್ ಈ ಹೇಳಿಕೆ ನೀಡಿದ್ದಾರೆ. ಈ ವಿಚಾರವನ್ನು ಆಡಳಿತಾರೂಢ ಬಿಜೆಪಿಯು ವಿಧಾನಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

ವಿರೋಧ ಪಕ್ಷದ ನಾಯಕರಿಂದಲೂ ವಿರೋಧ
ಪಠಾಣ್ ಚಿತ್ರವನ್ನು ಮಧ್ಯಪ್ರದೇಶ ವಿರೋಧ ಪಕ್ಷದ ನಾಯಕರಾದ ಡಾ.ಗೋವಿಂದ್ ಸಿಂಗ್ ಮತ್ತು ಮಾಜಿ ಕೇಂದ್ರ ಸಚಿವ ಸುರೇಶ್ ಪಚೌರಿ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಈ ಚಿತ್ರವನ್ನು ವಿರೋಧಿಸಿದ್ದಾರೆ. ಇದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
'ಇದು ಪಠಾಣ್ ಬಗ್ಗೆ ಅಲ್ಲ, ಆದರೆ, ಪರಿಧಾನ್ (ಬಟ್ಟೆ) ಬಗ್ಗೆ' ಎಂದು ಸುರೇಶ್ ಪಚೌರಿ ತಿಳಿಸಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ, ಯಾವುದೇ ಮಹಿಳೆ ಅಂತಹ ಬಟ್ಟೆಗಳನ್ನು ಧರಿಸುವುದು ಮತ್ತು ಆ ದೃಶ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಯಾರೂ ಅನುಮತಿಸುವುದಿಲ್ಲ. ಅದು ಹಿಂದೂಗಳು, ಮುಸ್ಲಿಮರು ಅಥವಾ ಯಾವುದೇ ಧರ್ಮದ ಅನುಯಾಯಿಗಳು ಇದನ್ನು ಒಪ್ಪುವುದಿಲ್ಲ' ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಆಕ್ಷೇಪ
ಕಳೆದ ಬುಧವಾರ ನರೋತ್ತಮ್ ಮಿಶ್ರಾ ಚಿತ್ರದ ಹಾಡಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. 'ಹಾಡಿನಲ್ಲಿರುವ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. ಹಾಡು ಕೊಳಕು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ' ಎಂದು ಅವರು ಹೇಳಿದ್ದರು.
'ಪಠಾನ್' ನಿರ್ಮಾಪಕರು 'ಬೇಷರಂ ರಂಗ್' ಹಾಡನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ನರೋತ್ತಮ್ ಮಿಶ್ರಾ ಈ ಹೇಳಿಕೆ ನೀಡಿದ್ದರು.
'ಹಾಡಿನ ಆಕ್ಷೇಪಾರ್ಹ ದೃಶ್ಯಗಳನ್ನು ಸರಿಪಡಿಸಲು ನಾನು ಚಿತ್ರದ ನಿರ್ಮಾಪಕರಿಗೆ ಸಲಹೆ ನೀಡುತ್ತೇನೆ. ಈ ಹಿಂದೆ ದೀಪಿಕಾ ಪಡುಕೋಣೆ ಜೆಎನ್‌ಯುನಲ್ಲಿ 'ತುಕ್ಡೆ ತುಕ್ಡೆ ಗ್ಯಾಂಗ್' ಬೆಂಬಲಕ್ಕೆ ನಿಂತಿದ್ದರು. ಅದು ಅವರ ಮನಸ್ಥಿತಿಯನ್ನು ಬಹಿರಂಗಪಡಿಸಿತು. ಹಾಡಿನಲ್ಲಿ ಕೇಸರಿ ಮತ್ತು ಹಸಿರು ಬಣ್ಣಗಳನ್ನು ಬಳಸಿರುವುದು ಆಕ್ಷೇಪಾರ್ಹವಾಗಿದೆ. ಇದನ್ನು ಬದಲಿಸದೇ ಹೋದರೆ, ಚಿತ್ರವನ್ನು ಮಧ್ಯಪ್ರದೇಶದಲ್ಲಿ ಪ್ರದರ್ಶನ ಮಾಡುವುದರ ಕುರಿತು ಯೋಚಿಸುತ್ತೇವೆ' ಎಂದು ಹೇಳಿದ್ದರು.

ಯಶ್ ರಾಜ್ ಬ್ಯಾನರ್‌ನಲ್ಲಿ ಮೂಡಿಬಂದಿರುವ ಚಿತ್ರ
ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ನಟಿಸಿರುವ ಪಠಾಣ್ ಚಿತ್ರವು ಯಶ್ ರಾಜ್ ಬ್ಯಾನರ್‌ನಲ್ಲಿ ಮೂಡಿಬಂದಿದೆ. ಆದಿತ್ಯ ಛೋಪ್ರಾ ನಿರ್ಮಿಸಿರುವ ಚಿತ್ರವು ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಗೊಳ್ಳಲಿದೆ. ಮುಂದಿನ ವರ್ಷದ ಜನೆವರಿ 25 ರಂದು ಬಿಡುಗಡೆಗೊಳ್ಳಲಿರುವ ಚಿತ್ರವನ್ನು ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿದ್ದಾರೆ. ಜಾನ್ ಅಬ್ರಾಹಿಂ, ಅಶುತೋಷ್ ರಾಣಾ, ಡಿಂಪಲ್ ಕಪಾಡಿಯಾ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ.












Click it and Unblock the Notifications