Waqf Bill: ವಕ್ಫ್ ಮಸೂದೆ ಸಂಸತ್ತಿನ ಸ್ಥಾಯಿ ಸಮಿತಿಗೆ ರವಾನೆ
ದೆಹಲಿ ಆಗಸ್ಟ್ 8: ವಕ್ಫ್ ತಿದ್ದುಪತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿದ ಬಳಿಕ ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ. ವಕ್ಫ್ ತಿದ್ದುಪತಿ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.
ಮುಸೂದೆಯನ್ನು ಸಂವಿಧಾನ ಸಮಿತಿಗೆ ಕಳುಹಿಸುವ ಬಗ್ಗೆ ಗುರುವಾರ ನಿರ್ಧರಿಸಲಾಗುವುದು ಎಂದು ಪ್ರಮುಖ ಪಕ್ಷಗಳ ನಾಯಕರನ್ನೊಳಗೊಂಡ ಸಮಿತಿಯ ಸಭೆಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದರು.

ಕೆಲ ಮುಸ್ಲಿಂ ಸಂಘಟನೆಗಳಿಂದ ವಿರೋಧ ಹೊಂದಿರುವ ಪ್ರಸ್ತಾವಿತ ಮುಸೂದೆಯನ್ನು ಸರ್ಕಾರ ಪರಿಶೀಲನೆಗಾಗಿ ಸಂಸದೀಯ ಸಮಿತಿಗೆ ಕಳುಹಿಸುವ ಸಾಧ್ಯತೆ ಹೆಚ್ಚಾಗಿತ್ತು. ಇಂದು ಪರಿಶೀಲನೆಗಾಗಿ ಸಂಸತ್ತಿನ ಸ್ಥಾಯಿ ಸಮಿತಿಗೆ ವಕ್ಫ್ ತಿದ್ದುಪತಿ ಮಸೂದೆಯನ್ನು ಕಳುಹಿಸಲಾಗಿದೆ.
ಸಿದ್ದರಾಮಯ್ಯ ವಿರೋಧ
ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿ ತರಲು ಮುಂದಾಗಿರುವ ಕೇಂದ್ರದ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧಿಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಎಸ್‌ಡಿಎಯವರಿಗೆ ಅಲ್ಪಸಂಖ್ಯಾತರ ಮೇಲೆ ಕೋಪವಿರುವಂತಿದೆ. ಬಿಜೆಪಿಯವರು ಎಂದಿಗೂ ಜಾತ್ಯಾತೀತತೆ, ಸಾಮಾಜಿಕ ನ್ಯಾಯದ ಪರವಾಗಿ ನಿಂತವರಲ್ಲ. ಬಿಜೆಪಿ ಮೊದಲಿನಿಂದಲೂ ಕೋಮುವಾದಿ ಪಕ್ಷವಗಿಯೇ ಗುರುತಿಸಿಕೊಂಡಿದ್ದು, ಜಾತ್ಯಾತೀತ ತತ್ವವನ್ನು ನಂಬುವುದಿಲ್ಲ ಎಂದು ಟೀಕಿಸಿದರು.

ಗೋಹತ್ಯೆ ತಿದ್ದುಪಡಿಗಳನ್ನು ಜಾರಿಗೆ ತಂದ ಬಿಜೆಪಿಯವರು ಇಂದು ವಕ್ಫ್ ಬೋರ್ಡ್ ತಿದ್ದುಪಡಿ ಪ್ರಯತ್ನಕ್ಕೂ ಕೈಹಾಕಿದ್ದಾರೆ. ವಕ್ಫ್ ಬೋರ್ಡ್ ಕಾನೂನು ಆ ಸಮುದಾಯದ ವೈಯಕ್ತಿಕ ಕಾನೂನಾಗಿದ್ದು, ಅದರಲ್ಲಿ ಮಧ್ಯ ಪ್ರವೇಶಿಸುವುದು ಸಂವಿಧಾನ ಬಾಹಿರ. ಸಂವಿಧಾನದ ತತ್ವಗಳಲ್ಲಿ ನಂಬಿಕೆಯಿರಿಸಿರುವ ಕಾಂಗ್ರೆಸ್ ಹಾಗೂ ಇಂಡಿಯಾ ಒಕ್ಕೂಟ ಕೇಂದ್ರದ ಈ ನಿಲುವನ್ನು ಸಂಪೂರ್ಣವಾಗಿ ವಿರೋಧಿಸುತ್ತೇವೆ ಎಂದರು.
ಇನ್ನೂ ಮುಡಾ ಹಗರಣದಲ್ಲಿ ತಮ್ಮ ವಿರುದ್ಧ ದೂರ ದಾಖಲಾಗಿರುವ ಬಗ್ಗೆ ಮಾತನಾಡಿದ ಅವರು, ಸುಳ್ಳು ಕೇಸುಗಳನ್ನು ದಾಖಲಿಸಿದರೆ, ಅವು ಕಾನೂನಿನ ದೃಷ್ಟಿಯಲ್ಲಿ ಮಾನ್ಯವಾಗುವುದಿಲ್ಲ ಎಂದರು.
ದೇಶಾದ್ಯಂತ ಭಾರೀ ಚರ್ಚೆ ಹುಟ್ಟಿಸಿದ ವಕ್ಫ್ ಮಸೂದೆ
ಲೊಕಸಭೆಯಲ್ಲಿ ಗುರುವಾರ ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆ ಇದೀಗ ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದೆ. ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಖಾತೆ ಸಚಿವ ಕಿರಿಣ್ ರಿಜಿಜು ಅವರು ಮಂಡನೆ ಮಾಡಿರುವ ಈ ಮಸೂದೆ ವಿರುದ್ಧ ಸಂಸತ್‌ನಲ್ಲಿ ವಿಪಕ್ಷಗಳು ಆಕ್ರೋಶ ಹೊರ ಹಾಕುತ್ತಿದ್ದರೆ, ಸಂಸತ್ ಹೊರಗೆ ಮುಸ್ಲಿಂ ಸಂಘಟನೆಗಳು ಕೆಂಡ ಕಾರುತ್ತಿವೆ.
ಮೋದಿ 3.0 ಸರ್ಕಾರ ಮಾತ್ರ ವಕ್ಫ್ ತಿದ್ದುಪಡಿ ಮಸೂದೆಯಿಂದ ವಕ್ಫ್ ಮಂಡಳಿ ಕಾರ್ಯ ವೈಖರಿ, ಆಡಳಿತದಲ್ಲಿ ಸಾಕಷ್ಟು ಬದಲಾವಣೆ ಆಗಲಿದೆ ಎಂದು ವಾದಿಸುತ್ತಿದೆ. ವಕ್ಫ್ ಆಸ್ತಿಗಳ ಸುಧಾಕರಣೆ ಹಾಗೂ ನೋಂದಣಿ ಪ್ರಕ್ರಿಯೆ ಸುಧಾರಣೆಗೆ ಈ ಮಸೂದೆ ನೆರವಾಗಲಿದೆ ಎಂದು ಸರ್ಕಾರ ಹೇಳಿದೆ.
ಇಸ್ಲಾಮಿಕ್ ಕಾನೂನುಗಳ ಪ್ರಕಾರ ಧಾರ್ಮಿಕ ಕಾರ್ಯಕ್ಕೆ ಬಳಕೆ ಮಾಡುವ ಅಥವಾ ದಾನ ನೀಡಿದ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಕರೆಯಲಾಗುತ್ತದೆ. ಒಮ್ಮೆ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಮದು ಗುರುತಿಸಿದರೆ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಒಟ್ಟು 30 ವಕ್ಫ್ ಮಂಡಳಿಗಳಿದ್ದು, ಒಟ್ಟು ಒಂಬತ್ತು ಲಕ್ಷ ಎಕರೆ ಭೂಮಿಯನ್ನು ನಿರ್ವಹಿಸುತ್ತಿವೆ. ಈ ಭೂಮಿಯ ಒಟ್ಟು ಮೌಲ್ಯ ಸುಮಾರು 1.2 ಲಕ್ಷ ಕೋಟಿ ರೂಪಾಯಿ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ವಕ್ಫ್ ಬೋರ್ಡ್ ಇಡೀ ಭಾರತದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ಮೂರನೇ ಸಂಸ್ಥೆಯಾಗಿದೆ.
ರೈಲ್ವೆ ಇಲಾಖೆ ಹಾಗೂ ರಕ್ಷಣಾ ಇಲಾಖೆ ಬಳಿಕ ವಕ್ಫ್ ಮಂಡಳಿ ಬಳಿಯಲ್ಲೇ ಹೆಚ್ಚು ಭೂಮಿ ಇದೆ. ಈ ಹಿನ್ನೆಲೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.












Click it and Unblock the Notifications