Vande Bharat express: ಆಂಧ್ರಪ್ರದೇಶದಲ್ಲಿ ವಂದೇ ಭಾರತ್ ಮೇಲೆ ಕಲ್ಲು ತೂರಾಟ ನಡೆಸಿದ್ದ ಮೂವರ ಬಂಧನ
ವಿಶಾಖಪಟ್ಟಣಂ, ಜ. 12: ಪ್ರಧಾನಿ ನರೇಂದ್ರ ಮೋದಿ ಮುಂದಿನ ಭಾನುವಾರದಂದು ವರ್ಚುವಲ್ ಆಗಿ ಚಾಲನೆ ನೀಡಲು ಉದ್ದೇಶಿಸಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಿದ ಆರೋಪದಲ್ಲಿ ಮೂವರನ್ನು ಬಂಧಿಸಲಾಗಿದೆ. ವಿಶಾಖಪಟ್ಟಣಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬುಧವಾರ ರಾತ್ರಿ ಆರೋಪಿಗಳು ಹೊಚ್ಚಹೊಸ ಹೈಸ್ಪೀಡ್ ರೈಲಿನ ಕೋಚ್ ಒಂದರ ಮೇಲೆ ಕಲ್ಲು ತೂರಾಟ ನಡೆಸಿ ಕಿಟಕಿಗಳನ್ನು ಒಡೆದು ಹಾಕಿದ್ದರು. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ಕಲ್ಲು ತೂರಾಟದಿಂದಾಗಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೋಚ್‌ನ ವಿಂಡ್‌ಶೀಲ್ಡ್ ಹಾನಿಯಾಗಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನೂಪ್ ಕುಮಾರ್ ಸತ್ಪತಿ ತಿಳಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಗುರುವಾರದಂದು ಆರೋಪಿಗಳನ್ನು ಬಂಧಿಸಿದ್ದಾರೆ. ವಂದೇ ಭಾರತ್ ರೈಲಿನಲ್ಲಿ ಕಿಟಕಿಗಳನ್ನು ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಶ್ರೀಕಾಂತ್ ಮಾಹಿತಿ ನೀಡಿದ್ದಾರೆ.

"ಬಂಧಿತ ಆರೋಪಿಗಳು ಘಟನೆ ನಡೆದ ದಿನದಂದು ಮದ್ಯಪಾನ ಮಾಡಿದ್ದರು. ಆದ್ದರಿಂದ ಈ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ" ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಮೂವರು ಆರೋಪಿಗಳ ವಿರುದ್ಧ ರೈಲ್ವೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಪ್ರಕರಣದ ವಿಚಾರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನು, ಘಟನೆ ಬೆಳಕಿಗೆ ಬಂದ ಕೂಡಲೇ, ಪ್ರಕರಣದ ಮಾಹಿತಿ ನೀಡಿದ್ದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅನೂಪ್ ಕುಮಾರ್ ಸತ್ಪತಿ, "ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದ 2 ಕಿಟಕಿ ಗಾಜುಗಳು ಸಂಪೂರ್ಣ ಒಡೆದು ಹೋಗಿದ್ದು, ಅವುಗಳನ್ನು ಬದಲಾಯಿಸಬೇಕಾಗಿದೆ . ಇದು ಅತ್ಯಂತ ದುರದೃಷ್ಟಕರ. ನಾವು ಕೆಲವು ಶಂಕಿತರನ್ನು ಗುರುತಿಸಿದ್ದೇವೆ. ಆರ್‌ಪಿಎಫ್ ಅವರ ಮೇಲೆ ನಿಗಾ ಇರಿಸಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದರು.

ಇನ್ನು, ನಿರ್ವಹಣೆ ತಪಾಸಣೆ ಮತ್ತು ಪ್ರಾಯೋಗಿಕ ಓಡಾಟಕ್ಕಾಗಿ ವಂದೇ ಭಾರತ್ ರೈಲು ಬುಧವಾರ ಚೆನ್ನೈನಿಂದ ವಿಶಾಖಪಟ್ಟಣಕ್ಕೆ ಆಗಮಿಸಿತ್ತು. ಘಟನೆ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಜನವರಿ 19 ರಂದು ಹೈದರಾಬಾದ್‌ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಬೇಕಿತ್ತು. ಆದರೆ, ಅವರ ಭೇಟಿಯನ್ನು ಮುಂದೂಡಲಾಗಿದೆ. ಜನವರಿ 19ರ ಬದಲು ಜನವರಿ 15 ರಂದು ಪ್ರಧಾನಿ ಮೋದಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ವರ್ಚುವಲ್ ಆಗಿ ಚಾಲನೆ ನೀಡಲಿದ್ದಾರೆ. ಇದು ಆಂದ್ರಪ್ರದೇಶದ ಜನರಿಗೆ ಮಕರ ಸಂಕ್ರಾಂತಿ ಉಡುಗೊರೆಯಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ. ಕಿಶನ್ ರೆಡ್ಡಿ ಹೇಳಿದ್ದಾರೆ.
ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್, ಕಿಶನ್ ರೆಡ್ಡಿ ಮತ್ತು ಹಿರಿಯ ರೈಲ್ವೇ ಅಧಿಕಾರಿಗಳು ಸಿಕಂದರಾಬಾದ್ ನಿಲ್ದಾಣದಲ್ಲಿ ವರ್ಚುವಲ್ ಲಾಂಚ್‌ಗೆ ಹಾಜರಾಗಲಿದ್ದಾರೆ.












Click it and Unblock the Notifications