Viral Video: Vande Bharat Express ರೈಲಿನ ಕಿಟಕಿ ಒಡೆದಿದ್ದು ನಿಜವೇ?
ಬೆಂಗಳೂರು, ಸೆಪ್ಟೆಂಬರ್ 11: ವಂದೇ ಭಾರತ್ ಎಕ್ಸ್‌ಪ್ರೆಸ್ ಭಾರತೀಯ ರೈಲ್ವೆಯ ಐಷಾರಾಮಿ ಸೆಮಿ-ಹೈಸ್ಪೀಡ್ ರೈಲು. ದೇಶದಲ್ಲಿ 50ಕ್ಕೂ ಅಧಿಕ ಮಾರ್ಗದಲ್ಲಿ ಬಿಳಿ ಮತ್ತು ಕೇಸರಿ ಬಣ್ಣದ ಈ ಮಾದರಿಯ ರೈಲುಗಳು ಸಂಚಾರವನ್ನು ನಡೆಸುತ್ತಿವೆ. ಸೆಪ್ಟೆಂಬರ್ 15ರಂದು 10 ರೈಲುಗಳ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಮಂಗಳವಾರ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇಸರಿ ಬಣ್ಣದ ರೈಲಿನ ವಿಡಿಯೋವೊಂದು ವೈರಲ್ ಆಗಿದೆ.
ಸಾಮಾಜಿಕ ಜಾಲತಾಣ x ನಲ್ಲಿ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವಿಡಿಯೋ ವೈರಲ್ ಆಗಿದೆ. ಯುವಕನೊಬ್ಬ ಸುತ್ತಿಗೆಯಿಂದ ರೈಲಿನ ಕಿಟಕಿ ಗಾಜನ್ನು ಒಡೆಯುತ್ತಿದ್ದಾನೆ. ಈ ವಿಡಿಯೋವನ್ನು ಸಾವಿರಾರು ಜನರು ಹಂಚಿಕೊಂಡಿದ್ದು, ಯುವಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋವನ್ನು ನೋಡಿದ ಜನರು ಸಹ ಐಷಾರಾಮಿ ರೈಲಿನ ಕಿಟಿಕಿ ಗಾಜು ಏಕೆ ಒಡೆಯಲಾಗುತ್ತಿದೆ?, ವಿಡಿಯೋ ಮಾಡಿದವರು ಇದನ್ನು ತಡೆಯಬೇಕಿತ್ತು, ಅಧಿಕಾರಿಗಳು ಏನು ಮಾಡುತ್ತಿದ್ದಾರೆ?, ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಅಸಲಿ ಸತ್ಯ ಬಯಲು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆಸಿದ ಹಲವಾರು ಘಟನೆಗಳು ದೇಶದಲ್ಲಿ ನಡೆದಿವೆ. ಇಂತಹ ಸಮಯದಲ್ಲಿಯೇ ಕೆಲವು ತಿಂಗಳ ಹಿಂದೆ ಚಾಲನೆಗೊಂಡಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಕೇಸರಿ ಬಣ್ಣದ ರೈಲಿನ ಕಿಟಕಿ ಗಾಜು ಒಡೆಯುವ ವಿಡಿಯೋ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೆ ಅಸಲಿ ಸತ್ಯವೇ ಬೇರೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯಾವ ಮಾರ್ಗದ್ದು?, ವಿಡಿಯೋ ಮಾಡಿದವರು ಯಾರು?, ಏಕೆ ಕಿಟಕಿಯನ್ನು ಸುತ್ತಿಗೆಯಿಂದ ಒಡೆಯಲಾಗುತ್ತಿದೆ? ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ ಯುವಕನ ವಿರುದ್ಧ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ಸಾಮಾಜಿಕ ಜಾಲತಾಣ x ನಲ್ಲಿಯೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಿಟಕಿ ಒಡೆಯುವ ವಿಡಿಯೋಗೆ ಸ್ಪಷ್ಟನೆಯನ್ನು ಕೊಡಲಾಗಿದೆ. ಆದರೆ ಬುಧವಾರ ಬೆಳಗ್ಗೆ ಸಹ ವಿಡಿಯೋವನ್ನು ಜನರು ಮರು ಹಂಚಿಕೆ ಮಾಡಿಕೊಂಡು ಯುವಕನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸುತ್ತಿದ್ದಾರೆ.
ಯುವಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಿಟಕಿ ಒಡೆಯುತ್ತಿಲ್ಲ. ಒಡೆದ ಕಿಟಕಿಯನ್ನು ರಿಪೇರಿ ಮಾಡಲು ಸಂಪೂರ್ಣ ಗ್ಲಾಸ್ ತೆರವುಗೊಳಿಸಬೇಕಿದೆ. ಅದಕ್ಕಾಗಿ ಅದನ್ನು ತೆಗೆಯುತ್ತಿದ್ದೇನೆ. ರೈಲಿನ ಹೊರಗೆ ಯುವಕ ಸುತ್ತಿಗೆ ಹಿಡಿದು ಕಿಟಕಿ ಗಾಜು ತೆಗೆಯುತ್ತಿದ್ದು, ಒಳಗೆ ಮೂವರು ಕಾರ್ಮಿಕರು ಆತನಿಗೆ ಸಹಾಯವನ್ನು ಮಾಡುತ್ತಿದ್ದಾರೆ.
ಈ ಘಟನೆ ನಡೆದಿರುವುದು ರೈಲು ನಿಲ್ದಾಣದ ಪ್ಲಾಟ್ ಫಾರಂನಲ್ಲಿ ಅಲ್ಲ. ವಂದೇ ಭಾರತ್ ಎಕ್ಸ್‌ಪ್ರೆಸ್ ನಿರ್ವಹಣೆ ಮಾಡುವ ಡಿಪೋದಲ್ಲಿ. ಆದರೆ ಯಾರೋ ಒಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಹಂಚಿಕೊಂಡ ವಿಡಿಯೋ ಸಮಾಜದಲ್ಲಿ ತಪ್ಪು ಸಂದೇಶ ರವಾನೆಗೆ ಕಾರಣವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ಹೊಡೆದು ಗಾಜನ್ನು ಹಾನಿ ಮಾಡಿದ ಪ್ರಕರಣಗಳು ಕರ್ನಾಟಕ, ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ನಡೆದಿದೆ. ಇಂತಹ ಕೆಲಸ ಮಾಡಬೇಡಿ ಎಂದು ರೈಲ್ವೆ ಇಲಾಖೆ ಮನವಿ ಮಾಡಿದೆ. ಅಲ್ಲದೇ ಕಲ್ಲು ಹೊಡೆಯುವವರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುತ್ತಿದೆ.
ರೈಲ್ವೆಯ ಕಾಯ್ದೆಯ 153ರ ನಿಯಮದ ಅಡಿ ರೈಲುಗಳಿಗೆ ಕಲ್ಲು ಎಸೆಯುವುದು ಶಿಕ್ಷಾರ್ಹ ಅಪರಾಧ. ಇಂತಹ ದಾಳಿಕೋರರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗುತ್ತದೆ ಮತ್ತು 5 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲು ಸಹ ಅವಕಾಶವಿದೆ. ಇದುವರೆಗೂ ಹೀಗೆ ವಂದೇ ಭಾರತ್ ರೈಲಿಗೆ ಕಲ್ಲು ತೂರಿದ 39 ಜನರನ್ನು ರೈಲ್ವೆ ರಕ್ಷಣಾ ಪಡೆ ಬಂಧಿಸಿದೆ.












Click it and Unblock the Notifications