Vikasit Bharat 2047: 350 ಕಿ.ಮೀ ವೇಗದ ಬುಲೆಟ್ ಟ್ರೈನ್, 7,000 ಕಿ.ಮೀ ಹೈ-ಸ್ಪೀಡ್ ಕಾರಿಡಾರ್: ಸಚಿವ ಅಶ್ವಿನಿ ವೈಷ್ಣವ್
Vikasit Bharat 2047: ಭಾರತೀಯರಿಗೆ ಅಚ್ಛೇದಿನದ ಭರವಸೆಯ ನಂತರ ಬಿಜೆಪಿ ಸರ್ಕಾರವು ವಿಕಸಿತ ಭಾರತದ ಭರವಸೆ ನೀಡಿದೆ. ಇದರ ಭಾಗವಾಗಿ 2047ರ ವೇಳೆಗೆ ದೇಶದಲ್ಲಿ ಹಲವು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದಾಗಿ ಹೇಳಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, 2047ರ ವೇಳೆಗೆ ಭಾರತವು 350 ಕಿಮೀ/ಗಂಟೆಗೆ ವೇಗದಲ್ಲಿ ಚಲಿಸುವ ರೈಲುಗಳೊಂದಿಗೆ 7,000 ಕಿಲೋಮೀಟರ್ ಹೈ-ಸ್ಪೀಡ್ ಪ್ಯಾಸೆಂಜರ್ ಕಾರಿಡಾರ್ಗಳನ್ನು ನಿರ್ಮಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ಆಧುನೀಕರಣ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ಅಭೂತಪೂರ್ವ ಅಭಿವೃದ್ಧಿಯನ್ನು ಸಾಧಿಸಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಭಾರತೀಯ ರೈಲ್ವೆಯಲ್ಲಿ 35,000 ಕಿ.ಮೀ ರೈಲ್ವೆ ಹಳಿಗಳನ್ನು ನಿರ್ಮಿಸಲಾಗಿದೆ. ಅಲ್ಲದೆ 46,000 ಕಿ.ಮೀಗಿಂತ ಹೆಚ್ಚು ವಿದ್ಯುದ್ಧೀಕರಣ ಮಾಡಲಾಗಿದೆ. ಇದರೊಂದಿಗೆ ವಾರ್ಷಿಕವಾಗಿ 7,000 ಕೋಚ್ಗಳನ್ನು ಉತ್ಪಾದಿಸಲಾಗಿದೆ, ಇದು ಅನೇಕ ದೇಶಗಳಿಗಿಂತ ಹಲವು ಪಟ್ಟು ಹೆಚ್ಚಾಗಿದೆ ಎಂದಿದ್ದಾರೆ.

ಮುಂದುವರಿದು ದೇಶದಲ್ಲಿ 156 ವಂದೇ ಭಾರತ್ ಸೇವೆಗಳು ಮತ್ತು 30 ಅಮೃತ್ ಭಾರತ್ ರೈಲುಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ನಾಲ್ಕು ನಮೋ ಭಾರತ್ ಸೇವೆಗಳು ಸೇರಿವೆ, ಆದರೆ ಭಾರತೀಯ ನಿರ್ಮಿತ ರೋಲಿಂಗ್ ಸ್ಟಾಕ್ ಮತ್ತು ವಿದ್ಯುತ್ ಉಪಕರಣಗಳನ್ನು ಆಫ್ರಿಕಾ ಮತ್ತು ಯುರೋಪ್ಗೆ ರಫ್ತು ಮಾಡಲಾಗುತ್ತಿದೆ. 2024-25ನೇ ಹಣಕಾಸು ವರ್ಷದಲ್ಲಿ, ಭಾರತೀಯ ರೈಲ್ವೆ ದಾಖಲೆಯ 1,681 ಲೋಕೋಮೋಟಿವ್ಗಳನ್ನು ಉತ್ಪಾದಿಸಿ, ಯುರೋಪ್, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ಒಟ್ಟು ಉತ್ಪಾದನೆಯನ್ನು ಮೀರಿಸಿದೆ.
ಪ್ರತಿದಿನ 24,000 ರೈಲುಗಳು ಓಡುತ್ತಿರುವುದರಿಂದ, ಸಾಂಪ್ರದಾಯಿಕ ಟ್ರ್ಯಾಕ್ ನವೀಕರಣಗಳು ಮತ್ತು ಮೀಸಲಾದ ಪ್ರಯಾಣಿಕರ ಕಾರಿಡಾರ್ಗಳ ಮೂಲಕ ಮತ್ತಷ್ಟು ಸಾಮರ್ಥ್ಯ ವಿಸ್ತರಣೆಯ ಅಗತ್ಯವಿದೆ. ಭಾರತೀಯ ರೈಲ್ವೆಯಲ್ಲಿ ತ್ವರಿತ ಆಧುನೀಕರಣಕ್ಕಾಗಿ 2,65,200 ಕೋಟಿ ರೂ. ಒಟ್ಟು ಬಂಡವಾಳ ವೆಚ್ಚವನ್ನು ಮೀಸಲಿರಿಲಾಗಿದೆ. ಭಾರತೀಯ ರೈಲ್ವೆಯ ಆಧುನೀಕರಣವು ಕೇವಲ ಮೂಲಸೌಕರ್ಯದ ವಿಚಾರ ಮಾತ್ರವಲ್ಲ. ಇದರೊಂದಿಗೆ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವುದು ಸಹ ಆಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಹೇಳಿದ್ದಾರೆ.
ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ
ಇನ್ನು ದೇಶದಲ್ಲಿ ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಇದರೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಅನುಭವ ನೀಡುವ ವಿಷಯವನ್ನು ಸಹ ಆದ್ಯತೆಯಾಗಿ ಪರಿಗಣಿಸಲಾಗಿದೆ. ಮುಂದುವರಿದು ಪ್ರತಿಯೊಂದು ಪ್ರಯಾಣವು ಸುರಕ್ಷಿತ, ವೇಗ ಮತ್ತು ಹೆಚ್ಚು ಆರಾಮದಾಯಕವಾಗುವಂತೆ ಕಲ್ಪಿಸಲಾಗಿದೆ. ಕವಚ್ 4.0ರ ಅನುಷ್ಠಾನ ಮತ್ತು ಹೈ-ಸ್ಪೀಡ್ ರೈಲುಗಳಿಗಾಗಿ ಕವಚ್ 5.0 ಅಭಿವೃದ್ಧಿಪಡಿಸಲಾಗುತ್ತಿದೆ.
ಇದರೊಂದಿಗೆ ಹೊಸ ರೈಲು ವಿನ್ಯಾಸಗಳ ಪರಿಚಯ ಮತ್ತು ದಾಖಲೆಯ ಹೂಡಿಕೆಗಳೊಂದಿಗೆ, ಭಾರತೀಯ ರೈಲ್ವೆ ವಿಶ್ವದ ಅತ್ಯಂತ ಆಧುನಿಕ ಜಾಲಗಳಲ್ಲಿ ಒಂದನ್ನು ನಿರ್ಮಿಸುತ್ತಿದೆ. ಮುಂದಿನ ಪೀಳಿಗೆಯ ಅಮೃತ್ ಭಾರತ್ ಲೋಕೋಮೋಟಿವ್ಗಳು ಮತ್ತು ಕೋಚ್ಗಳ ಅಭಿವೃದ್ಧಿ (ಅಮೃತ್ ಭಾರತ್ 4.0) 36 ತಿಂಗಳ ರೋಲ್ಔಟ್ ಗುರಿಯನ್ನು ಹಾಕಿಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಾಹಿತಿ ನೀಡಿದ್ದಾರೆ.


Click it and Unblock the Notifications
