ಉಪರಾಷ್ಟ್ರಪತಿ ಚುನಾವಣೆ, ಆಗಸ್ಟ್ 5 ಸಂಜೆ ಫಲಿತಾಂಶ
ನವದೆಹಲಿ, ಆಗಸ್ಟ್ 4: ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 5 ರಂದು ಚುನಾವಣೆ ನಡೆಯಲಿದೆ. ಸಂಜೆ ವೇಳೆಗೆ ಮತದಾನದ ಫಲಿತಾಂಶ ಹೊರ ಬೀಳಲಿದ್ದು ನೂತನ ಉಪರಾಷ್ಟ್ರಪತಿ ಯಾರು ಎಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಎನ್.ಡಿ.ಎ ಬೆಂಬಲದೊಂದಿಗೆ ಮಾಜಿ ಸಚಿವ ವೆಂಕಯ್ಯ ನಾಯ್ಡು ಕಣದಲ್ಲಿದ್ದರೆ, ವಿಪಕ್ಷಗಳು ತಮ್ಮ ಒಮ್ಮತದ ಅಭ್ಯರ್ಥಿಯಾಗಿ ಮಹಾತ್ಮಾ ಗಾಂಧಿ ಮೊಮ್ಮಗ ಹಾಗೂ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲ ಕೃಷ್ಣ ಗಾಂಧಿಯವರನ್ನು ಕಣಕ್ಕಿಳಿಸಿದೆ.

ಲೋಕಸಭೆಯಲ್ಲಿ ಬಹುಮತ ಹೊಂದಿರುವ ಹಾಗೂ ರಾಜ್ಯಸಭೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಎನ್.ಡಿ.ಎ ಹೊಂದಿರುವುದರಿಂದ ವೆಂಕಯ್ಯ ನಾಯ್ಡು ಸುಲಭ ಗೆಲುವು ಸಾಧಿಸಲಿದ್ದಾರೆ ಎಂದುಕೊಳ್ಳಲಾಗಿದೆ.
ಇನ್ನು ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ರಾಮನಾಥ್ ಕೋವಿಂದ್ ರನ್ನು ಬೆಂಬಲಿಸಿದ್ದ ಜೆಡಿಯು ಮತ್ತು ಬಿಜೆಪಿ ಈ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿ ಗೋಪಾಲ ಕೃಷ್ಣ ಗಾಂಧಿಯವರನ್ನು ಬೆಂಬಲಿಸಿರುವುದು ವಿಶೇಷ.
ಮತದಾನ
ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರಗೆ ಮತದಾನ ನಡೆಯಲಿದೆ. ಸಂಸತ್ ಸದಸ್ಯರು ವಿಶೇಷ ಪೆನ್ ನಿಂದ ಬ್ಯಾಲಟ್ ಪೇಪರ್ ನಲ್ಲಿ ಮತದಾನ ಮಾಡಲಿದ್ದಾರೆ.
ಮತದಾನ ಮುಗಿಯುತ್ತಿದ್ದಂತೆ ಮತ ಎಣಿಕೆ ಆರಂಭವಾಲಿದೆ, ಸಂಜೆ 7 ಗಂಟೆ ಸುಮಾರಿಗೆ ಚುನಾವಣಾ ಆಯೋಗ ವಿಜೇತರನ್ನು ಘೋಷಣೆ ಮಾಡಲಿದೆ.
ಯಾವುದೇ ಕಾರಣಕ್ಕೂ ಪಕ್ಷಗಳು ತಮ್ಮ ಪಕ್ಷದ ಸಂಸತ್ ಸದಸ್ಯರಿಗೆ ವಿಪ್ ಜಾರಿ ಮಾಡಲು ಅವಕಾಶ ಇರುವುದಿಲ್ಲ. ಇನ್ನು ಹಾಲಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಕಳೆದ ಎರಡು ಅವಧಿಗೆ ಉಪರಾಷ್ಟ್ರಪತಿಗಳಾಗಿ ಕಾರ್ಯ ನಿರ್ವಹಿಸಿ ಇದೀಗ ನಿರ್ಗಮಿಸುತ್ತಿದ್ದಾರೆ.












Click it and Unblock the Notifications