Maharashtra Election 2024: ಏಕನಾಥ್ ಶಿಂಧೆ ಸತಾರಾ ಭೇಟಿ ರಹಸ್ಯ ಬಯಲು, ಇಂದು ಮಹತ್ವದ ಘೋಷಣೆ!
ಮುಂಬೈ, ನವೆಂಬರ್ 30: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿ 7 ದಿನ ಕಳೆದಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 145. 230 ಶಾಸಕರ ಬಲ ಹೊಂದಿರುವ 'ಮಹಾಯತಿ' ಮೈತ್ರಿಕೂಟ ಸರ್ಕಾರ ರಚನೆ ಮಾಡಬೇಕಿದೆ. ಆದರೆ ನೂತನ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದ್ದು, ಸರ್ಕಾರ ರಚನೆ ವಿಳಂಬವಾಗುತ್ತಿದೆ. ಶುಕ್ರವಾರ ನಡೆಯಬೇಕಿದ್ದ 'ಮಹಾಯತಿ' ಮೈತ್ರಿಕೂಟದ ಮಹತ್ವದ ಸಭೆ ರದ್ದಾಗಿದೆ. ರಾಜ್ಯದ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ತವರು ಜಿಲ್ಲೆ ಸತಾರಾ ಪ್ರವಾಸಕ್ಕೆ ತೆರಳಿದ್ದಾರೆ.
2024ರ ವಿಧಾನಸಭೆ ಚುನಾವಣೆಯಲ್ಲಿ 132 ಸೀಟುಗಳನ್ನು ಗೆದ್ದಿರುವ ಬಿಜೆಪಿ 'ಮಹಾಯತಿ' ಮೈತ್ರಿಕೂಟದ ನೆರವಿನಿಂದ ಸರ್ಕಾರನ್ನು ರಚನೆ ಮಾಡಲಿದೆ. ಮೈತ್ರಿಕೂಟದಲ್ಲಿ ಶಿವಸೇನೆ (ಏಕನಾಥ್ ಶಿಂಧೆ ಬಣ) 57, ಎನ್‌ಸಿಪಿ (ಅಜಿತ್ ಪವಾರ್ ಬಣ) 41 ಸೀಟು ಹೊಂದಿದ್ದು, ಸರ್ಕಾರ ರಚನೆಗೆ ಸ್ಪಷ್ಟವಾದ ಬಹುಮತವಿದೆ.

ವಿಧಾನಸಭೆ ಚುನಾವಣೆಯಲ್ಲಿ 132 ಸೀಟುಗೆದ್ದು ಅತಿ ದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆ ಸಿಗಲಿದೆ. ಆದರೆ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸತಾರಾ ಭೇಟಿಯ ಹಿಂದಿನ ರಹಸ್ಯ ಏನು?, ಶನಿವಾರ ಮಹತ್ವದ ಘೋಷಣೆಯೊಂದು ಹೊರಬೀಳಲಿದೆಯೇ?. ಈ ಕುರಿತು ಶಿವಸೇನೆ ಸಣ್ಣ ಸುಳಿವು ನೀಡಿದೆ.
ಉದಯ್ ಸಾಮಂತ್ ಹೇಳಿಕೆ: ಶಿವಸೇನೆ (ಏಕನಾಥ್ ಶಿಂಧೆ ಬಣ)ದ ನಾಯಕ ಉದಯ್ ಸಾಮಂತ್ ಹಂಗಾಮಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸತಾರಾ ಭೇಟಿ ಬಗ್ಗೆ ಮಾತನಾಡಿದ್ದಾರೆ. "ಏಕನಾಥ್ ಶಿಂಧೆ ರಾಜಕೀಯ ಬೆಳವಣಿಗೆ ಕುರಿತು ಅಸಮಾಧಾನಗೊಂಡಿಲ್ಲ. ಶೀತ ಮತ್ತು ಜ್ವರದ ಕಾರಣ ಅವರು ತವರು ಜಿಲ್ಲೆಗೆ ಹೋಗಿದ್ದಾರೆ" ಎಂದು ಹೇಳಿದ್ದಾರೆ.
ಈಗಾಗಲೇ ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆ ಎಂದು ಸ್ಪಷ್ಟಪಡಿಸಿರುವ ಏಕನಾಥ್ ಶಿಂಧೆ, ತಾವು ಉಪ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಮಹಾರಾಷ್ಟ್ರ ಸರ್ಕಾರದಲ್ಲಿ ಮಹತ್ವದ ಖಾತೆಗಳ ಮೇಲೆ ಶಿವಸೇನೆ ಕಣ್ಣಿಟ್ಟಿದೆ. ಗೃಹ, ನಗರಾಭಿವೃದ್ಧಿ, ಲೋಕೋಪಯೋಗಿ ಇಲಾಖೆಗಳು ಬೇಕು ಎನ್ನುವುದು ಬೇಡಿಕೆಯಾಗಿದೆ.
ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಎರಡು ಸಚಿವ ಸ್ಥಾನಕ್ಕಾಗಿ ಶಿವಸೇನೆ (ಏಕನಾಥ್ ಶಿಂಧೆ ಬಣ) ಬೇಡಿಕೆ ಇಟ್ಟಿದೆ. ಇದರಿಂದಾಗಿ ಹೊಸ ಸರ್ಕಾರ ರಚನೆ ಕಗ್ಗಂಟಾಗಿದ್ದು, ಸೋಮವಾರ ದೆಹಲಿಯಲ್ಲಿ ಈ ಕುರಿತು ಅಂತಿಮ ತೀರ್ಮಾನವಾಗಲಿದೆ ಎಂದು ಅಂದಾಜಿಸಲಾಗಿದೆ.
ಶಿವಸೇನೆಯ ಮತ್ತೊಬ್ಬ ನಾಯಕ ಸಂಜಯ್ ಶಿರ್ಸಾಟ್ ಮಾತನಾಡಿ, "ಯಾವುದಾದರೂ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಏಕನಾಥ್ ಶಿಂಧೆ ತವರು ಜಿಲ್ಲೆ ಭೇಟಿ ಕೈಗೊಳ್ಳುತ್ತಾರೆ. ಶನಿವಾರ ಸಂಜೆ ಅವರು ವಾಪಸ್ ಆಗಲಿದ್ದು, ಬಳಿಕ ದೊಡ್ಡ ನಿರ್ಧಾರ ಕೈಗೊಳ್ಳಲಿದ್ದಾರೆ" ಎಂದು ಹೇಳಿದ್ದು, ಕುತೂಹಲ ಹುಟ್ಟುಹಾಕಿದ್ದಾರೆ.
"ಈಗಾಗಲೇ ಬಿಜೆಪಿ ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಎರಡು ದಿನದಲ್ಲಿ ಅಂತಿಮಗೊಳಿಸಲಾಗುತ್ತದೆ ಎಂದು ಹೇಳಿದೆ. ಈ ಮೂಲಕ ಸರ್ಕಾರ ರಚನೆಯ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ" ಎಂದು ಅವರು ಹೇಳಿದ್ದಾರೆ.
"ನನಗೆ ಇರುವ ಮಾಹಿತಿ ಪ್ರಕಾರ ಡಿಸೆಂಬರ್ 2ರಂದು ಹೊಸ ಸರ್ಕಾರ ರಚನೆ ಆಗಲಿದ್ದು, ಪ್ರಮಾಣ ವಚನ ಸಮಾರಂಭ ನಡೆಯಲಿದೆ" ಎಂದು ಸಂಜಯ್ ಶಿರ್ಸಾಟ್ ತಿಳಿಸಿದ್ದಾರೆ.
ಆದರೆ ಬಿಜೆಪಿ ಮತ್ತು ಶಿವಸೇನೆಯ ಮೂಲಗಳು ದಿ ಹಿಂದೂ ಪತ್ರಿಕೆಗೆ ನೀಡಿರುವ ಮಾಹಿತಿಯಂತೆ ಡಿಸೆಂಬರ್ 5ರಂದು ಅಜಾದ್ ಮೈದಾನದಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ಬಿಜೆಪಿಯಿಂದ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದೆ. ಆದರೆ ಶಿವಸೇನೆ, ಎನ್‌ಸಿಪಿಗೆ ಉಪ ಮುಖ್ಯಮಂತ್ರಿ ಹುದ್ದೆ ಸಿಗಲಿದೆಯೇ? ಅಥವ ಪ್ರಮುಖ ಖಾತೆಗಳನ್ನು ಮಾತ್ರ ನೀಡಲಾಗುತ್ತದೆಯೇ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ, ಖಾತೆ ಹಂಚಿಕೆ ಕುರಿತು ದೆಹಲಿಯಲ್ಲಿ ಸೋಮವಾರ ನಡೆಯಲಿರುವ ಸಭೆಯಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಅಮಿತ್ ಶಾ ನೇತೃತ್ವದಲ್ಲಿ ನಡೆಯಲಿರುವ ಸಭೆಯಲ್ಲಿ ಏಕನಾಥ್ ಶಿಂಧೆ, ಅಜಿತ್ ಪವಾರ್ ಮತ್ತು ಬಿಜೆಪಿ ನಾಯಕರು ಪಾಲ್ಗೊಳ್ಳಲಿದ್ದಾರೆ.












Click it and Unblock the Notifications