ಕಾರ್ಗಿಲ್ ಹುತಾತ್ಮ ಸೈನಿಕರ ನೆನಪಿಗಾಗಿ ಯುದ್ಧ ಸ್ಮಾರಕ
ನವದೆಹಲಿ, ಜು.26: ಕಾರ್ಗಿಲ್ ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ನೆನಪಿಗಾಗಿ ಯುದ್ಧ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವನ್ನು ನಿರ್ಮಾಣ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಾರ್ಗಿಲ್ ಯುದ್ಧ ವಿಜಯದ 15ನೇ ವರ್ಷಾಚರಣೆಯ ಅಂಗವಾಗಿ ಇಂಡಿಯಾ ಗೇಟ್‌ನ ಅಮರ ಜವಾನ್ ಜ್ಯೋತಿ ಬಳಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿ ಅರುಣ್ ಜೇಟ್ಲಿ ಈ ವಿಚಾರ ತಿಳಿಸಿದರು.[ಕಾರ್ಗಿಲ್ ವಿಜಯ್ ದಿವಸ: ಪಾಕ್ ಗುಂಡಿನ ದಾಳಿ]

ಕೇಂದ್ರ ಸರ್ಕಾರ ಈ ಯುದ್ಧ ಸ್ಮಾರಕ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ನಿಗದಿಪಡಿಸಿದ್ದು ಸದ್ಯದಲ್ಲೇ ಜಾಗವನ್ನು ಅಂತಿಮಗೊಳಿಸಿದ ಬಳಿಕ ನಿರ್ಮಾಣ ಕೆಲಸ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಉತ್ತಮ ಸೌಲಭ್ಯಗಳನ್ನು ಹೊಂದುವ ಮೂಲಕ ನಮ್ಮ ಸೇನೆ ಶಕ್ತಿಶಾಲಿ ಸೇನೆಯಾಗಿ ರೂಪುಗೊಳ್ಳುತ್ತಿದೆ. ಈ ಕಾರಣಕ್ಕೆ ಪ್ರತಿವರ್ಷ ರಕ್ಷಣೆಗಾಗಿ ಹೆಚ್ಚು ಹೆಚ್ಚು ಹಣವನ್ನು ವಿನಿಯೋಗಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ರಕ್ಷಣಾ ಸಚಿವ ಅರುಣ್ ಜೇಟ್ಲಿ ಜೊತೆಗೆ ವಾಯುಸೇನೆ, ಭೂ ಸೇನೆ, ನೌಕಾಸೇನೆ ಮುಖ್ಯಸ್ಥರು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ವೀರಯೋಧರಿಗೆ ನಮನ ಸಲ್ಲಿಸಿದರು.
ಕಾರ್ಗಿಲ್ ವಿಜಯ ದಿವಸ ಸರಣಿಯ ಎಲ್ಲಾ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ: ಕಾರ್ಗಿಲ್ ವಿಜಯ್ ದಿವಸ











Click it and Unblock the Notifications