Vande Mataram Row: ವಂದೇ ಮಾತರಂನ ಎಲ್ಲ ಚರಣ ಹಾಡುವುದನ್ನು ಪ್ರಶ್ನಿಸಿದ ಗಾಯಕ ಟಿ.ಎಂ ಕೃಷ್ಣ: ಸುಪ್ರೀಂ ಕೋರ್ಟ್ ಹೇಳಿದ್ದೇನು
Vande Mataram Row: ವಂದೇ ಮಾತರಂಗೆ ಸಂಬಂಧಿಸಿದಂತೆ ದೇಶದಾದ್ಯಂತ ಮಹತ್ವದ ಚರ್ಚೆ ನಡೆದಿದೆ. ಇದೀಗ ಬಿಜೋ ಇಮ್ಯಾನುಯೆಲ್ ತೀರ್ಪು ಇನ್ನೂ ದೇಶದ ಕಾನೂನಾಗಿದೆ. ವಂದೇ ಮಾತರಂ ಕಾನೂನಿನ ವಿಚಾರದಲ್ಲೂ ಇದೇ ತೀರ್ಪು ಅನ್ವಯಿಸಬೇಕು ಎಂದು ಸುಪ್ರೀಂ ಕೋರ್ಟ್ ಮೌಖಿಕವಾಗಿ ಹೇಳಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971ಕ್ಕೆ 2026ರಲ್ಲಿ ಮಾಡಲಾದ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಗಾಯಕ ಟಿ.ಎಂ. ಕೃಷ್ಣ ಅವರು ಸಲ್ಲಿಸಿರುವ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಕೇಳಿದೆ.
ಈ ತಿದ್ದುಪಡಿಯ ಮೂಲಕ ರಾಷ್ಟ್ರೀಯ ಗೀತೆ ವಂದೇ ಮಾತರಂಗೆ ದಂಡಾತ್ಮಕ ಕಾನೂನು ರಕ್ಷಣೆಯನ್ನು ವಿಸ್ತರಿಸಲಾಗಿದೆ. ಅಲ್ಲದೆ, ಸರ್ಕಾರಿ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವ ಕೇಂದ್ರ ಗೃಹ ಸಚಿವಾಲಯದ ನಿರ್ದೇಶನಗಳನ್ನೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯ ಮಾಡಿ ಸುತ್ತೋಲೆ ಹೊರಡಿಸಿದೆ. ವಂದೇ ಮಾತರಂಗೆ ರಾಷ್ಟ್ರೀಯ ಸ್ಥಾನ ನೀಡುವ ತಿದ್ದುಪಡಿಯನ್ನು ಗಾಯಕ ಟಿ.ಎಂ ಕೃಷ್ಣ ಅವರು ಪ್ರಶ್ನಿಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ ಮೋಹನ ಅವರನ್ನೊಳಗೊಂಡ ಪೀಠವು ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿತು. ವಿಚಾರಣೆಯ ಸಮಯದಲ್ಲಿ, "ರಾಷ್ಟ್ರೀಯ ಗೀತೆ' ಯಾವುದೆಂದು ನಿರ್ಧರಿಸುವುದು ನ್ಯಾಯಾಲಯದ ಅಧಿಕಾರ ವ್ಯಾಪ್ತಿಯಲ್ಲಿ ಇಲ್ಲ ಎಂದು ನ್ಯಾಯಪೀಠ ಗಮನಿಸಿತು; ಆದಾಗ್ಯೂ, ಬಿಜೋ ಇಮ್ಯಾನುಯೆಲ್ ಪ್ರಕರಣದಲ್ಲಿ ಗುರುತಿಸಲ್ಪಟ್ಟಂತೆ ಅದನ್ನು ಹಾಡದಿರಲು ಆತ್ಮಸಾಕ್ಷಿಯ ಆಕ್ಷೇಪಣೆದಾರರ ಹಕ್ಕನ್ನು ರಕ್ಷಿಸಲಾಗಿದೆಯೇ ಎಂದು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿದೆ.
ವಂದೇ ಮಾತರಂನ ಆರು ಚರಣಗಳಲ್ಲಿ ಕೊನೆಯ ನಾಲ್ಕರ ಮೇಲೆ ಈ ಸವಾಲು ಕೇಂದ್ರೀಕೃತವಾಗಿದೆ. ಈ ಚರಣಗಳಲ್ಲಿ ದುರ್ಗಾ, ಲಕ್ಷ್ಮಿ ಮತ್ತು ಸರಸ್ವತಿ ಸೇರಿದಂತೆ ಹಿಂದೂ ದೇವತೆಗಳ ಬಗ್ಗೆ ಸ್ಪಷ್ಟ ಉಲ್ಲೇಖಗಳಿವೆ ಮತ್ತು ನಾಗರಿಕರು ಅವುಗಳನ್ನು ಹಾಡಲು ಒತ್ತಾಯಿಸುವುದು ಸಂವಿಧಾನದ ಜಾತ್ಯತೀತ ಪಾತ್ರಕ್ಕೆ ವಿರುದ್ಧವಾಗಿ ಬಲವಂತದ ಧಾರ್ಮಿಕ ಮತ್ತು ಸೈದ್ಧಾಂತಿಕ ದೃಢೀಕರಣಕ್ಕೆ ಸಮಾನವಾಗಿದೆ ಎಂದು ಕೃಷ್ಣ ಅವರು ವಾದಿಸಿದ್ದರೆ. ಆಕ್ಷೇಪಾರ್ಹ ಕ್ರಮಗಳು ಸಂವಿಧಾನದ ಮೂಲ ಲಕ್ಷಣವಾದ ಜಾತ್ಯತೀತತೆಯ ಸಾಂವಿಧಾನಿಕ ತತ್ವವನ್ನು ಉಲ್ಲಂಘಿಸುತ್ತವೆ ಎಂದು ಅದು ವಾದಿಸಿದ್ದಾರೆ.
Vande Mataram Row: ವಂದೇ ಮಾತರಂ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೇಳಿದ್ದೇನು ?
ವಂದೇ ಮಾತರಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ತಿದ್ದುಪಡಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇನ್ನು ವಂದೇ ಮಾತರಂ ರಾಷ್ಟ್ರಗೀತೆಯಾಗಿ ಮುಂದುವರಿದಿದ್ದರೂ, ಸಹ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ನ್ಯಾಯಸಮ್ಮತ ಧಾರ್ಮಿಕ ಆಕ್ಷೇಪಣೆಗಳನ್ನು ಹೊಂದಿರುವವರು, ಅದರ ವಿವಾದಿತ ಸಾಲುಗಳನ್ನು ಹಾಡದೆ ಇರುವುದ್ದಕ್ಕಾಗಿ ಯಾವುದೇ ದಂಡನಾತ್ಮಕ ಕ್ರಮ ಎದುರಿಸಬೇಕಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ.
Vande Mataram Row: ಗಾಯಕ ಟಿ.ಎಂ ಕೃಷ್ಣ ಅವರ ವಾದವೇನು
ಇನ್ನು ವಂದೇ ಮಾತರಂ ಗೀತೆಯ ಆರು ಚರಣಗಳನ್ನು ಹಾಡಬೇಕು ಎನ್ನುವುದನ್ನು ಕಡ್ಡಾಯ ಮಾಡಿರುವುದನ್ನು ಪ್ರಶ್ನಿಸಿ, ಗಾಯಕ ಟಿ.ಎಂ ಕೃಷ್ಣ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ವಂದೇ ಮಾತರಂ ಗೀತೆಯ ನಾಲ್ಕು ಚರಣಗಳು ಸ್ಪಷ್ಟವಾಗಿ ಹಿಂದೂ ದೇವತೆಗಳ ಮೇಲಿನ ಭಕ್ತಿಯನ್ನು ವ್ಯಕ್ತಪಡಿಸುತ್ತವೆ. ಹೀಗಾಗಿ, ಆ ನಿರ್ದಿಷ್ಟ ಚರಣಗಳನ್ನು ಹಾಡುವುದನ್ನು ಕಡ್ಡಾಯ ಮಾಡುವುದು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತದೆ ಎಂದು ಗಾಯಕ ಟಿ.ಎಂ ಕೃಷ್ಣ ಅವರು ಹೇಳಿದ್ದಾರೆ.
ಅಲ್ಲದೆ, ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆಯ ವ್ಯಾಪ್ತಿಗೆ ವಂದೇ ಮಾತರಂ ಗೀತೆಗೆ ತಿದ್ದುಪಡಿ ತರುವ ವಿಚಾರವು ಏಕಪಕ್ಷೀಯವಾಗಿದೆ. ಇದರಿಂದ ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ ಎಂದೂ ಅವರು ವಾದಿಸಿದ್ದಾರೆ.


Click it and Unblock the Notifications
