Vande Bharat Express: ಬೆಂಗಳೂರಿಂದ ಕೇರಳದ ಈ ಮಹಾನಗರಕ್ಕೆ ವಂದೇ ಭಾರತ್ ರೈಲು- ದಿನಾಂಕ, ಸಮಯ, ಮಾಹಿತಿ, ವಿವರ ತಿಳಿಯಿರಿ
ಬೆಂಗಳೂರು, ಅಕ್ಟೋಬರ್ 28: ಬೆಂಗಳೂರಿಗೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಿಗುವ ಸಾಧ್ಯತೆಯಿದೆ. ವಾರಾಂತ್ಯದಲ್ಲಿ ವಿಪರೀತ ದಟ್ಟಣೆ ಆಗುತ್ತಿರುವುದರಿಂದ ಬೆಂಗಳೂರು ಹಾಗೂ ಕೇರಳ ನಡುವೆ ವಂದೇ ಭಾರತ್ ರೈಲನ್ನು ಓಡಿಸಲು ದಕ್ಷಿಣ ರೈಲ್ವೆ ಪ್ರಸ್ತಾಪಿಸಿದೆ.
ಮುಂಬರುವ ದೀಪಾವಳಿ ಸಮಯದಲ್ಲಿ ವಿಪರೀತ ದಟ್ಟಣೆ ಇರಲಿದ್ದು, ಇದನ್ನು ಕಡಿಮೆ ಮಾಡಿಮೆ ಮಾಡುವ ದೃಷ್ಟಿಯಿಂದ ವಾರಾಂತ್ಯದಲ್ಲಿ ರೈಲನ್ನು ಓಡಿಸಲು ರೈಲ್ವೆ ಇಲಾಖೆ ಮುಂದಾಗಿದೆ.

ವಾರಾಂತ್ಯದಲ್ಲಿ ಬೆಂಗಳೂರು ಮತ್ತು ಎರ್ನಾಕುಲಂ ನಡುವೆ ವಂದೇ ಭಾರತ್ ರೈಲನ್ನು ಓಡಿಸುವ ಪ್ರಸ್ತಾಪವನ್ನು ದಕ್ಷಿಣ ರೈಲ್ವೆ ಇರಿಸಿದೆ. ಇದು ಬೆಂಗಳೂರು - ಚೆನ್ನೈ ಮತ್ತು ಚೆನ್ನೈ - ಬೆಂಗಳೂರು ಸೇವೆಗಳ ವಿಸ್ತರಣೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿಗಳ ಪ್ರಕಾರ, ರೈಲು ಶುಕ್ರವಾರ ಬೆಳಿಗ್ಗೆ 4 ಗಂಟೆಗೆ ಬೆಂಗಳೂರಿನಿಂದ ಎರ್ನಾಕುಲಂಗೆ ಹೊರಡಲಿದೆ. ರೈಲು ಮಧ್ಯಾಹ್ನ 1.30 ಕ್ಕೆ ಎರ್ನಾಕುಲಂ ಜಂಕ್ಷನ್‌ಗೆ ತಲುಪುತ್ತದೆ. ಅದು 2 ಗಂಟೆಗೆ ಎರ್ನಾಕುಲಂನಿಂದ ಹಿಂತಿರುಗುತ್ತದೆ. ಅದೇ ದಿನ ರಾತ್ರಿ 10 ಗಂಟೆಗೆ ರೈಲು ಬೆಂಗಳೂರು ತಲುಪಲಿದೆ.
ಉನ್ನತ ಅಧಿಕಾರಿಗಳಿಂದ ಅನುಮತಿ ದೊರೆತರೆ ಶನಿವಾರ ಮತ್ತು ಭಾನುವಾರವೂ ವಂದೇ ಭಾರತ್ ರೈಲಿನ ಸೇವೆ ಇರಲಿದೆ.

ಚೆನ್ನೈನಲ್ಲಿರುವ ವಂದೇ ಭಾರತ್ ಸ್ಪೇರ್ ರೇಕ್ ಬಳಸಿ ಈ ಸೇವೆಯನ್ನು ನಡೆಸಲಾಗುವುದು. ಇದು ಎಂಟು ಕೋಚ್‌ಗಳನ್ನು ಹೊಂದಿರುತ್ತದೆ. ದಕ್ಷಿಣ ರೈಲ್ವೆ ನೀಡಿರುವ ಶಿಫಾರಸನ್ನು ನೈಋತ್ಯ ರೈಲ್ವೆ ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ವಂದೇ ಭಾರತ್ ಸೇವೆಗಳಿಂದಾಗಿ ಇತರ ರೈಲುಗಳು ವಿಳಂಬವಾಗುತ್ತಿವೆ ಎಂಬ ಆರೋಪಗಳ ಬಗ್ಗೆ ದಕ್ಷಿಣ ರೈಲ್ವೆ ಸ್ಪಷ್ಟನೆ ನೀಡಿದೆ. 'ಕೇರಳದಲ್ಲಿ ವಂದೇ ಭಾರತ್ ರೈಲುಗಳು ರಾಜ್ಯದಲ್ಲಿ ಚಲಿಸುವ ಇತರ ರೈಲುಗಳ ಸಮಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ' ಎಂದು ಅಧಿಕಾರಿಗಳು ಹೇಳಿದ್ದಾರೆ.
ತಿರುವನಂತಪುರಂ-ಕಾಸರಗೋಡು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದಾಗ, ವಾಯನಾಡು ಎಕ್ಸ್‌ಪ್ರೆಸ್ ಮತ್ತು ಇತರ ರೈಲುಗಳ ವೇಗವನ್ನು ಹೆಚ್ಚಿಸಲಾಯಿತು. ವಂದೇ ಭಾರತ್ ಎಕ್ಸ್‌ಪ್ರೆಸ್ ಎರ್ನಾಕುಲಂ ಮತ್ತು ಅಂಬಲಪುಳ (69 ಕಿಮೀ) ನಡುವಿನ ವಿಭಾಗದ ಮೂಲಕ ಚಲಿಸುತ್ತದೆ. ಅಲಪ್ಪುಳ-ಎರ್ನಾಕುಲಂ ಜೆಎನ್ ಪ್ಯಾಸೆಂಜರ್ ಮತ್ತು ಎರ್ನಾಕುಲಂ ಜೆಎನ್-ಕಾಯಂಕುಲಂ ಪ್ಯಾಸೆಂಜರ್‌ಗೆ ನಿಗದಿತ ಕ್ರಾಸಿಂಗ್ ಅನ್ನು ನೀಡಲಾಗಿದೆ. ಅವುಗಳನ್ನು ವೇಗವನ್ನು ಹೆಚ್ಚಿಸಲಾಗಿದೆ.

ಕೋಝಿಕ್ಕೋಡ್-ತಿರುವನಂತಪುರಂ ಜನಶತಾಬ್ದಿ ಎಕ್ಸ್‌ಪ್ರೆಸ್ ಚೆರ್ಟಾಲೈನಲ್ಲಿ ನಿಗದಿತ ಕ್ರಾಸಿಂಗ್ ಅನ್ನು ಹೊಂದಿದೆ, ಆದರೂ ಅದು ರಾತ್ರಿ 9.25 ರ ನಿಗದಿತ ಆಗಮನದ ಸಮಯದಲ್ಲಿ ತಿರುವನಂತಪುರವನ್ನು ತಲುಪುತ್ತದೆ. ಹೀಗಾಗಿ, ವಂದೇ ಭಾರತ್ ನಿಮಿತ್ತ ಈ ರೈಲು ಓಡಾಟಕ್ಕೆ ಯಾವುದೇ ವಿಳಂಬವಾಗಿಲ್ಲ ಎಂದು ತಿಳಿದುಬಂದಿದೆ.
ಮಂಗಳೂರು ಮತ್ತು ಗೋವಾ ನಡುವೆ ಕರ್ನಾಟಕಕ್ಕೆ ಮತ್ತೊಂದು ವಂದೇ ಭಾರತ್ ಎಕ್ಸ್‌ಪ್ರೆಸ್ ಬರುವ ಸಾಧ್ಯತೆಯಿದೆ. ಈ ವರ್ಷಾಂತ್ಯಕ್ಕೆ ಇದು ಸಂಚಾರ ಆರಂಭಿಸುವ ಸಾಧ್ಯತೆ ಇದೆ.
ಕರಾವಳಿ ಕರ್ನಾಟಕಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ನೀಡಲು ರೈಲ್ವೇ ಸಚಿವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಮತ್ತು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಈ ಹಿಂದೆ ಹೇಳಿದ್ದಾರೆ.
ನವದೆಹಲಿಯಲ್ಲಿ ರೈಲ್ವೇ ಸಚಿವರೊಂದಿಗೆ ನಡೆದ ಸಭೆಯಲ್ಲಿ ಗೋವಾ-ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಕುರಿತು ಭರವಸೆ ಸಿಕ್ಕಿದೆ. ಬೆಂಗಳೂರು-ಕಣ್ಣೂರು ರೈಲನ್ನು ಕೊಚ್ಚಿವರೆಗೆ ವಿಸ್ತರಿಸಬೇಕೆಂಬ ಕೇರಳದ ಬೇಡಿಕೆಗೆ ಮಣಿಯಬಾರದು ಎಂದು ಸಚಿವರಿಗೆ ಮನವಿ ಮಾಡಿದ್ದೇನೆ. ಅವರು ಸಲಹೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು ಎಂದು ಕಟೀಲ್ ತಿಳಿಸಿದ್ದಾರೆ.
ಬೆಂಗಳೂರಿಂದ ಈಗ ಚೆನ್ನೈ, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಹೈದರಾಬಾದ್‌ಗೆ ವಂದೇ ಭಾರತ್ ರೈಲುಗಳಿವೆ.












Click it and Unblock the Notifications