Vande Bharat Train Accident: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಯುವಕರು ಸಾವು
Vande Bharat Express Train Accident: ಇತ್ತಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಲಿವೆ. ಹಾಗೆಯೇ ಇದೀಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದು ನಾಲ್ವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಹಾಗಾದ್ರೆ, ಈ ಘಟನೆ ನಡೆದಿದ್ದು ಎಲ್ಲಿ ಹಾಗೂ ಹೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಯುವಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಇಂದು (ಅಕ್ಟೋಬರ್ 3) ಬೆಳಗ್ಗೆ ನಡೆದಿದೆ. ಇನ್ನು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಜಿಎಂಸಿ ಹಾಸ್ಪಿಟಲ್‌ಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಘಟನೆಗೆ ರೈಲ್ವೆ ಕ್ರಾಸಿಂಗ್ ಸಮೀಪದಲ್ಲಿ ರೈಲು ಟ್ರ್ಯಾಕ್ ಮೇಲೆ ರೀಲ್ಸ್ ತೆಗೆಯುತ್ತಿದ್ದ ಯುವಕರ ನಿರ್ಲಕ್ಷ್ಯವೇ ಕಾರಣವೆಂದು ಪ್ರಾಥಮಿಕ ವರದಿಗಳು ಸೂಚಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೃತ ದೇಹಗಳನ್ನು ವಶಪಡೆಸಿಕೊಂಡ ರೈಲ್ವೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಅಪಘಾತ ಕಟಿಹಾರ-ಜೋಗ್ಬಾನಿ ರೈಲು ಮಾರ್ಗದ ಕಸ್ಬಾ ಗುಂಟಿ ಬಳಿ ನಡೆದಿದೆ ಎಂದು ತಿಳಿದುಬಂದಿದೆ.
ಜೋಗ್ಬಾನಿ-ದಾನಾಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನಂ.26301 ಪೂರ್ಣಿಯಾ-ಕಸ್ಬಾ ನಿಲ್ದಾಣಗಳ ನಡುವೆ ವೇಗವಾಗಿ ಚಲಿಸುದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಸಾವನ್ನಪ್ಪಿದವರು 18ರಿಂದ 25 ವರ್ಷ ವಯಸ್ಸಿನ ನಾಲ್ವರು ಯುವಕರು ಎಂದು ತಿಳಿದುಬಂದಿದೆ. ಅವರು ದುರ್ಗಾ ಮೇಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಹಿಂದಿರುಗುತ್ತಿದ್ದಾಗ, ರೈಲು ಟ್ರ್ಯಾಕ್ ಮೇಲೆ ರೀಲ್ಸ್ ಮಾಡುತ್ತಿದ್ದರು ಈ ವೇಳೆ ರೈಲು ಮೇಲೆ ಹರಿದಿದೆ. ಮೂವರು ಸ್ಥಳದಲ್ಲೇ ಮರಣಹೊಂದಿದರೆ, ಒಬ್ಬರು ಜಿಎಂಸಿಹೋಸ್ಪಿಟಲ್‌ನಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಗಾಯಗೊಂಡ ಇಬ್ಬರು ಯುವಕರನ್ನು ಜಿಎಂಸಿಹೋಸ್ಪಿಟಲ್‌ಗೆ ದಾಖಲು ಮಾಡಲಾಗಿದೆ. ಇದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಆದರೆ, ರೈಲ್ವೆ ಕ್ರಾಸಿಂಗ್ ಸಿಬ್ಬಂದಿಯ ನಿರ್ಲಕ್ಷ್ಯ, ಯುವಕರ ಹೈಸ್ಪೀಡ್ ರೈಲನ್ನು ನಿರ್ಲಕ್ಷಿಸಿ ಟ್ರ್ಯಾಕ್ ದಾಟವಾಗ ರೀಲ್ಸ್ ಮಾಡಿದಾಗ ಈ ಘಟನೆ ಸಂಭವಿಸಿದೆಯೇ ಎನ್ನುವ ಆಯಾಮದಲ್ಲಿ ತನಖೆ ಮುಂದುವರೆದಿದೆ.
ರೈಲ್ವೆ ಅಧಿಕಾರಿಯೊಬ್ಬರು ಈ ಬಗ್ಗೆ ಮಾತನಾಡಿದ್ದು, "ನಾವು ಬೆಳಗ್ಗೆ 4:54ಕ್ಕೆ ಈ ಘಟನೆಯ ಬಗ್ಗೆ ಮಾಹಿತಿ ಪಡೆದೆವು. ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಡಿಸೆಂಬರ್ 17, 2024ರಂದು ಉದ್ಘಾಟನೆ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 15, 2025ರಂದು ಇದನ್ನು ರಾಜ್ಯಕ್ಕೆ ಸಮರ್ಪಿಸಿದ್ದರು. ಜೋಗ್ಬಾನಿಯಿಂದ ಬೆಳಗ್ಗೆ 3:25ಕ್ಕೆ ಹೊರಟು, ಪೂರ್ಣಿಯಾಕ್ಕೆ 4:50ಕ್ಕೆ ತಲುಪಲಿದೆ. ಇದು ಸಹರ್ಸಾ, ಖಗಾರಿಯಾ, ಸಮಸ್ತಿಪುರ್, ಮುಜಫ್ಫರ್‌ಪುರ್‌ಗಳ ಮೂಲಕ ದಾನಾಪುರ ಮೂಲಕ ಹಾದುಹೋಗಲಿದೆ. ಈ ಹಿಂದೆಯೂ ಸಹ ವಂದೇ ಭಾರತ್ ರೈಲಿಗಳು ಕಾರಣಾಂತರಗಳಿಂದ ಅಪಘಾತಕ್ಕೊಳಗಾಗಿವೆ. ಕೆಲವೆಡೆ ಪ್ರಾಣಿಗಳು ಅಡ್ಡ ಬಂದರೆ, ಇನ್ನೂ ಕೆಲವೆಡೆ ಕಿಡಿಗೇಡಿಗಳು ಕಲ್ಲು ತೂರಿ ಕಿಟಕಿ ಗಾಜು ಹಾಳು ಮಾಡಿರುವ ಘಟನೆಗಳು ನಡೆದಿವೆ.












Click it and Unblock the Notifications