ಉತ್ತರಾಖಂಡ; ರಿಸೆಪ್ಷನಿಸ್ಟ್ ಹತ್ಯೆ, ಅಂತ್ಯಕ್ರಿಯೆಗೆ ಒಪ್ಪದ ಕುಟುಂಬ
ಡೆಹಾರಾಡೂನ್, ಸೆ. 25; ಉತ್ತರಾಖಂಡದಲ್ಲಿ 19 ವರ್ಷದ ಯುವತಿಯ ಹತ್ಯೆಯ ತನಿಖೆಯು ನಡೆಯುತ್ತಿರುವ ಬೆನ್ನಲ್ಲೇ, ಭಾನುವಾರದಂದು ಹೆದ್ದಾರಿ ತಡೆದು ಬೃಹತ್ ಸಂಖ್ಯೆಯ ಪ್ರತಿಭಟನಾಕಾರರು ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಕೊಲೆಯಾಗಿರುವ ರಿಸೆಪ್ಷನಿಸ್ಟ್ ದೇಹವನ್ನು ಶವಪರೀಕ್ಷೆಗಾಗಿ ಕೊಂಡೊಯ್ಯಲಾದ ಆಸ್ಪತ್ರೆಯ ಬಳಿ ಬದರಿನಾಥ್-ಋಷಿಕೇಶ ಹೆದ್ದಾರಿಯನ್ನು ತಡೆದು ಭಾರೀ ಪ್ರತಿಭಟನೆ ನಡೆಸಿದ್ದಾರೆ.
ಬಿಜೆಪಿಯ ಉಚ್ಚಾಟಿತ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ಅವರ ಒಡೆತನದ ರೆಸಾರ್ಟ್‌ನ ಸಿಬ್ಬಂದಿ ರಿಸೆಪ್ಷನಿಸ್ಟ್ ಅಂಕಿತ ಭಂಡಾರಿಯನ್ನು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವತಿಯ ಮೃತದೇಹವನ್ನು ರಾಜ್ಯ ವಿಪತ್ತು ನಿರ್ವಹಣಾ ಪಡೆ ಶನಿವಾರ ಚಿಲ್ಲಾ ಕಾಲುವೆಯಿಂದ ಹೊರತೆಗೆದಿದೆ. ಈ ಘಟನೆ ಭಾರೀ ಆಕ್ರೋಶವನ್ನು ಉಂಟುಮಾಡಿದೆ.
ಭಾನುವಾರ ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಬೃಹತ್ ಪ್ರತಿಭಟನಾಕಾರರು ಸಂತ್ರಸ್ತೆಯ ಶವ ಪರೀಕ್ಷೆ ನಡೆಯುತ್ತಿರುವ ಆಸ್ಪತ್ರೆಯ ಬಳಿಯ ಶವಾಗಾರದ ಮುಂದೆ ಬದರಿನಾಥ್-ಋಷಿಕೇಶ ಹೆದ್ದಾರಿಯನ್ನು ತಡೆದಿದ್ದಾರೆ. ಪೊಲೀಸರ ಪ್ರಕಾರ, ಸ್ಥಳೀಯ ಆಡಳಿತವು ಟ್ರಾಫಿಕ್ ಜಾಮ್ ಅನ್ನು ತೆರವುಗೊಳಿಸಲು ಪ್ರಯತ್ನಿಸುತ್ತಿದೆ.

ತಾತ್ಕಾಲಿಕ ಶವಪರೀಕ್ಷೆ ವರದಿ ಒಪ್ಪದ ಸಂತ್ರಸ್ತೆ ಕುಟುಂಬ
ಸಂತ್ರಸ್ತೆಯ ಕುಟುಂಬದ ಸದಸ್ಯರು ಅಂತಿಮ ಶವಪರೀಕ್ಷೆ ವರದಿಯನ್ನು ನೀಡುವವರೆಗೆ ಆಕೆಯ ದೇಹವನ್ನು ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ. ಆಕೆಯ ತಂದೆ ತಾತ್ಕಾಲಿಕ ಶವಪರೀಕ್ಷೆ ವರದಿಯಿಂದ ತೃಪ್ತರಾಗಿಲ್ಲ ಎಂದು ಹೇಳಿದ್ದಾರೆ.
ತಾತ್ಕಾಲಿಕ ಶವಪರೀಕ್ಷೆ ವರದಿಯಲ್ಲಿ ವಿವರಗಳ ಕೊರತೆಯಿದೆ ಎಂದು ಆಕೆಯ ಸಹೋದರ ಉಲ್ಲೇಖಿಸಿದ್ದಾರೆ. ಭಾನುವಾರ ಬೆಳಗ್ಗೆ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಲಾಗಿತ್ತು. ಪ್ರಾಥಮಿಕ ಶವಪರೀಕ್ಷೆ ವರದಿಯಲ್ಲಿ, ಮೊಂಡಾದಾ ವಸ್ತುವಿನಿಂದಾದ ಗಾಯಗಳ ಉಲ್ಲೆಖವಿದೆ. ಇದರ ಜೊತೆಗೆ ಆಕೆಯ ಸಾವು ನೀರಿನಲ್ಲಿ ಮುಳುಗಿ ಆಗಿದೆ ಎಂದು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.

ಪ್ರಕರಣದಲ್ಲಿ ಬಿಜೆಪಿ ನಾಯಕನ ಮಗ ಪ್ರಮುಖ ಆರೋಪಿ
ಮೃತ ಅಂಕಿತಾರನ್ನು ವೇಶ್ಯಾವಾಟಿಕೆಗೆ ಬಲವಂತಪಡಿಸುವ ಪ್ರಯತ್ನಗಳು ನಡೆದಿವೆ ಎಂಬ ಅಂಶವನ್ನು ದೃಢಪಡಿಸುವ ವಾಟ್ಸಾಪ್ ಚಾಟ್‌ಗಳನ್ನು ಪೊಲೀಸರಿಗೆ ಲಭ್ಯವಾಗಿವೆ.
ಶುಕ್ರವಾರ, ಪ್ರಮುಖ ಆರೋಪಿ ಅಮಾನತುಗೊಂಡ ಬಿಜೆಪಿ ನಾಯಕ ವಿನೋದ್ ಆರ್ಯ ಅವರ ಪುತ್ರ ಪುಲ್ಕಿತ್ ಆರ್ಯ ಮತ್ತು ರಿಷಿಕೇಶದಲ್ಲಿರುವ ಅವರ ಒಡೆತನದ ರೆಸಾರ್ಟ್‌ನ ಇಬ್ಬರು ಸಿಬ್ಬಂದಿಯಾದ ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ವ್ಯವಸ್ಥಾಪಕ ಅಂಕಿತ್ ಗುಪ್ತಾ ಅವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಎಲ್ಲರಿಗೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಾಕ್ಷ್ಯ ನಾಶ ಮಾಡಲು ರೆಸಾರ್ಟ್ ನೆಲಸಮ ಎಂದ ಮೃತಳ ಸಹೋದರ
ಮುಖ್ಯಮಂತ್ರಿ ಪುಷ್ಕರ್ ಧಾಮಿ ಅವರು ಕೆಡವಲು ಆದೇಶ ನೀಡಿದ ನಂತರ ಯುವತಿ ಕೆಲಸ ಮಾಡುತ್ತಿದ್ದ ರೆಸಾರ್ಟ್ ಅನ್ನು ನೆಲಸಮಗೊಳಿಸಲಾಯಿತು. ಶನಿವಾರ, ಕೋಪಗೊಂಡ ಸ್ಥಳೀಯರು ರೆಸಾರ್ಟ್‌ನ ಅವಶೇಷಗಳಿಗೆ ಬೆಂಕಿ ಹಚ್ಚಿದ್ದಾರೆ.
ಆಪಾದಿತ ರೆಸಾರ್ಟ್‌ನ ಉರುಳಿಸುವಿಕೆಯು "ಸಾಕ್ಷ್ಯವನ್ನು ನಾಶಮಾಡುವ ಪ್ರಯತ್ನವಾಗಿರಬಹುದು" ಎಂದು ಮೃತಳ ಸಹೋದರ ಆರೋಪಿಸಿದ್ದಾರೆ.

ರೆಸಾರ್ಟ್‌ನ ಎಲ್ಲಾ ಉದ್ಯೋಗಿಗಳ ವಿಚಾರಣೆ ನಡೆಸುತ್ತಿರುವ ಪೊಲಿಸರು
ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಶನಿವಾರ ಮೃತಳ ತಂದೆಯೊಂದಿಗೆ ಫೋನ್ ಮೂಲಕ ಮಾತನಾಡಿ ಆರೋಪಿಗಳಿಗೆ ಶಿಕ್ಷೆಯ ಭರವಸೆ ನೀಡಿದ್ದಾರೆ. ಇದಕ್ಕೂ ಮುನ್ನ ಡಿಜಿಪಿ ಅಶೋಕ್ ಕುಮಾರ್ ಅವರೊಂದಿಗೆ ಕರೆ ಮಾಡಿ ಮಾತನಾಡಿದ್ದರು. ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ಕೈಗೊಳ್ಳಲಾಗುತ್ತಿರುವ ಕ್ರಮದ ಬಗ್ಗೆ ಸಿಎಂ ಧಾಮಿ ಅವರು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.
ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಗುರ್ಮಿತ್ ಸಿಂಗ್ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಇತ್ತ, ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಖ್ಯಸ್ಥರು ಅವರು ಯುವತಿ ಕೆಲಸ ಮಾಡುತ್ತಿದ್ದ "ರೆಸಾರ್ಟ್‌ನ ಪ್ರತಿಯೊಬ್ಬ ಉದ್ಯೋಗಿ" ಯನ್ನು ಪೊಲೀಸ್ ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ. ರೆಸಾರ್ಟ್‌ನ ಸಂಪೂರ್ಣ ಹಿನ್ನೆಲೆ ವಿಶ್ಲೇಷಣೆ ನಡೆಸುತ್ತಿದ್ದಾರೆ ಎಂದು ಡಿಐಜಿ ಪಿಆರ್ ದೇವಿ ತಿಳಿಸಿದ್ದಾರೆ.












Click it and Unblock the Notifications