ಓಮಿಕ್ರಾನ್ ಭೀತಿ ನಡುವೆ ಚುನಾವಣೆ, ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
ಡೆಹ್ರಾಡೂನ್, ಡಿಸೆಂಬರ್ 30: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ತಳಿಯ ಸೋಂಕು ವ್ಯಾಪಕವಾಗುತ್ತಿದೆ. ಈ ನಡುವೆ ಐದು ರಾಜ್ಯಗಳ ಚುನಾವಣೆ ಸಿದ್ಧತೆ ಬಗ್ಗೆ ಆಯೋಗ ಕೂಡಾ ತನ್ನ ಸ್ಪಷ್ಟ ನಿಲುವು ಪ್ರಕಟಿಸಿದೆ. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಉತ್ತರಾಖಂಡ ವಿಧಾನಸಭೆ ಚುನಾವಣೆಯನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿದ್ದೆ. ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಉತ್ತರಾಖಂಡ ಹೈಕೋರ್ಟ್ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ನಾರಾಯಣ್ ಸಿಂಗ್ ಧನಿಕ್ ಅವರ ನೇತೃತ್ವದ ವಿಭಾಗೀಯ ಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ಪ್ರತಿನಿಧಿಸಿದ್ದ ವಕೀಲರಿಗೆ ಮನವಿಗೆ ಸಂಬಂಧಿಸಿದಂತೆ ಸೂಚನೆ ಪಡೆಯುವಂತೆ ಆದೇಶಿಸಿದ್ದು, ವಿಚಾರಣೆಯನ್ನು ಜನವರಿ 3ಕ್ಕೆ ಮುಂದೂಡಿದೆ.
ಮುಂದಿನ ವರ್ಷದ ಫೆಬ್ರವರಿ ಅಥವಾ ಮಾರ್ಚ್‌ನಲ್ಲಿ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಆರಂಭಿಸಿವೆ. ಸಾಮಾಜಿಕ ಅಂತರ ಮತ್ತು ಕೋವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಬೃಹತ್ ಪ್ರಮಾಣದಲ್ಲಿ ಬಿಜೆಪಿ, ಆಪ್ ಮತ್ತು ಕಾಂಗ್ರೆಸ್ ಪಕ್ಷಗಳು ಸಮಾವೇಶ ನಡೆಸಿರುವ ಚಿತ್ರಗಳನ್ನು ಮನವಿಯ ಜೊತೆಗೆ ಅರ್ಜಿದಾರರು ಲಗತ್ತಿಸಿದ್ದಾರೆ.

ರಾಜಕೀಯ ಪಕ್ಷಗಳಿಗೆ ಆನ್‌ಲೈನ್ ಮೂಲಕ ಸಮಾವೇಶ ನಡೆಸಲು ಆದೇಶಿಸಬೇಕು ಮತ್ತು ಹೊಸ ವರ್ಷದ ಸಂಭ್ರಮಾಚರಣೆಯನ್ನು ಗುಂಪುಗೂಡಿ ನಡೆಸುವುದಕ್ಕೂ ತಡೆಯೊಡ್ಡಬೇಕು ಎಂದು ಸಚ್ದಾನಂದ್ ದಬ್ರಾಲ್, ದುಷ್ಯಂತ್ ಮೈನಲಿ, ಅನು ಪಂತ್ ಹಾಗೂ ರಾಜೇಂದ್ರ ಆರ್ಯ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.
2022ರ ವಿಧಾನಸಭೆ ಚುನಾವಣೆ:
2022ರ ಫೆಬ್ರವರಿ ಅಥವ ಮಾರ್ಚ್‌ನಲ್ಲಿ 70 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. 70 ಸದಸ್ಯ ಬಲದ ಉತ್ತರಾಖಂಡ ವಿಧಾನಸಭೆಯಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದಲ್ಲಿ ಈಗ ಬಿಜೆಪಿ ಅಧಿಕಾರದಲ್ಲಿದೆ. 2017ರ ಚುನಾವಣೆಯಲ್ಲಿ 70 ಸ್ಥಾನಗಳ ಪೈಕಿ 57 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸಿತ್ತು. 2022ರಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆ ಚುನಾವಣೆ ನಡೆಯಲಿದೆ.
ಉತ್ತರಾಖಂಡ್ ರಾಜ್ಯದಲ್ಲಿ ಸುಮಾರು 3.4 ಲಕ್ಷ ಕೋವಿಡ್ ಪ್ರಕರಣಗಳು ದಾಖಲಾಗಿದ್ದು, 7,417 ಮೃತಪಟ್ಟಿದ್ದಾರೆ. ಡಿ.29ರಂದು 28 ಹೊಸ ಪ್ರಕರಣಗಳು ದಾಖಲಾಗಿವೆ. ಉತ್ತರಾಖಂಡದಲ್ಲಿ ನೈಟ್ ಕರ್ಫ್ಯೂ ವಿಧಿಸಲಾಗಿದ್ದು ರಾತ್ರಿ 11 ರಿಂದ ಬೆಳಿಗ್ಗೆ 05 ರವರೆಗೆ ರಾತ್ರಿ ಕರ್ಫ್ಯೂ ಆದೇಶ ಹೊರಡಿಸಲಾಗಿದೆ. ರಾತ್ರಿ ಹೊತ್ತು ಅಗತ್ಯ ಸೇವೆಗಳನ್ನು ಮಾತ್ರ ಅನುಮತಿಸಲಾಗಿದೆ. ದೆಹಲಿ ಸೇರಿದಂತೆ ಇತರ ರಾಜ್ಯಗಳಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಹೆಚ್ಚಾಗುತ್ತಿದ್ದು ಇಲ್ಲಿಯವರೆಗೆ ದೇಶಾದ್ಯಂತ ಸುಮಾರು 600 ಹೊಸ ರೂಪಾಂತರಿ ವೈಸರ್ ಓಮಿಕ್ರಾನ್ ಪ್ರಕರಣಗಳು ವರದಿಯಾಗಿವೆ.
ಉತ್ತರಾಖಂಡ ಸರ್ಕಾರ ಸೋಮವಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ರಾತ್ರಿ ಕರ್ಫ್ಯೂ ಸಮಯದಲ್ಲಿ ಆರೋಗ್ಯ ಸೇವೆಗಳು ಮುಂದುವರಿಯುತ್ತವೆ. ಎಲ್ಲಾ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಮತ್ತು ಇತರ ಆಸ್ಪತ್ರೆ ಬೆಂಬಲ ಸೇವೆಗಳಿಗೆ ಸಂಬಂಧಿಸಿದ ಸಾರಿಗೆಯನ್ನು ರಾತ್ರಿ ಕರ್ಫ್ಯೂ ಸಮಯದಲ್ಲಿ ವಿನಾಯಿತಿ ನೀಡಲಾಗುತ್ತದೆ. ಇದಲ್ಲದೆ ತೈಲ ಮತ್ತು ಅನಿಲ ವಲಯ ಇದರಲ್ಲಿ ಉತ್ಪಾದನೆ, ಸಾಗಣೆ, ವಿತರಣೆ, ಸಂಗ್ರಹಣೆ ಮತ್ತು ಉತ್ಪನ್ನಗಳ ವ್ಯಾಪಾರವನ್ನು ಈ ಕರ್ಫ್ಯೂ ಸಮಯದಲ್ಲಿ ಅವಕಾಶ ನೀಡಲಾಗಿದೆ.












Click it and Unblock the Notifications