ಉತ್ತರಾಖಂಡ ಚುನಾವಣೆ: ಬಿಜೆಪಿ ಗೆದ್ದರೆ ಬಡವರಿಗೆ ಮೂರು ಸಿಲಿಂಡರ್ ಉಚಿತ
ಡೆಹ್ರಾಡೂನ್ ಫೆಬ್ರವರಿ 09: ಭಾರತೀಯ ಜನತಾ ಪಕ್ಷವು 2022ರ ಉತ್ತರಾಖಂಡ ವಿಧಾನಸಭಾ ಚುನಾವಣೆಗೆ ಮಂಗಳವಾರ (ಫೆಬ್ರವರಿ 09) ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ತನ್ನ ಪ್ರಣಾಳಿಕೆಗೆ 'ದೃಷ್ಟಿ ಪತ್ರ' ಎಂದು ಹೆಸರಿಟ್ಟಿದೆ. ಪ್ರಣಾಳಿಕೆ ಬಿಡುಗಡೆ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಿಎಂ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಮದನ್ ಕೌಶಿಕ್, ಮಾಜಿ ಕೇಂದ್ರ ಸಚಿವ ಡಾ.ರಮೇಶ್ ಪೊಖ್ರಿಯಾಲ್ ನಿಶಾಂಕ್ ಉಪಸ್ಥಿತರಿದ್ದರು. ಈ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬಿಜೆಪಿಯ ಪ್ರಣಾಳಿಕೆ 'ದೃಷ್ಟಿ ಪತ್ರ' ಬಿಡುಗಡೆ ಮಾಡುವಾಗ ರೈತರ ಮೇಲೆ ವಿಶೇಷ ಗಮನ ಹರಿಸುವ ಕುರಿತು ಮಾತನಾಡಿದರು. ಉತ್ತರಾಖಂಡದ ಪ್ರತಿ ಬ್ಲಾಕ್‌ನಲ್ಲಿ ಮಂಡಿ(ಮಾರುಕಟ್ಟೆ) ಸ್ಥಾಪಿಸಲಾಗುವುದು. ರೈತರಿಗೂ ಸಮ್ಮಾನ್ ನಿಧಿ ನೀಡಲಾಗುವುದು. ಕೃಷಿ ಭೂಮಿ ಸಮೀಕ್ಷೆ ಮತ್ತು ವಿಮೆಯಲ್ಲಿ ಹೊಸ ಡ್ರೋನ್ ನೀತಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಜೊತೆಗೆ ಆರ್ಥಿಕವಾಗಿ ದುರ್ಬಲವಾಗಿರುವ ರೈತರಿಗೂ ಸುಲಭವಾಗಿ ಸಾಲ ದೊರೆಯಲಿದೆ ಎಂದು ಭರವಸೆ ನೀಡಿದ್ದಾರೆ.
ಅದೇ ಸಮಯದಲ್ಲಿ, 2025 ರ ವೇಳೆಗೆ ಉತ್ತರಾಖಂಡವನ್ನು ದೇಶದ ಅತ್ಯುತ್ತಮ ರಾಜ್ಯವನ್ನಾಗಿ ಮಾಡಲು ನಾವು ಬಯಸುತ್ತೇವೆ ಎಂದು ರಮೇಶ್ ಪೋಖ್ರಿಯಾಲ್ ಹೇಳಿದರು. ಸುರಕ್ಷಿತ ದೇವಭೂಮಿ ಬೇಕು, ಅಕ್ರಮ ಭೂಮಿ ಒತ್ತುವರಿಯಿಂದ ಜನಸಂಖ್ಯಾ ಬದಲಾವಣೆ ಆಗುತ್ತಿದೆ, ಇದಕ್ಕಾಗಿ ಕಾನೂನು ತರುತ್ತೇವೆ. ಇದಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಕೇಂದ್ರ ಸರ್ಕಾರ ಮತ್ತು 6 ಸಾವಿರ ರಾಜ್ಯ ಸರ್ಕಾರ ನೀಡಲಿದೆ ಎಂದು ಹೇಳಿದರು. ಅಂದರೆ 12 ಸಾವಿರ ರೈತರ ಖಾತೆಗೆ ಸೇರಲಿದೆ. ಹರಿದ್ವಾರವನ್ನು ಯೋಗದ ರಾಜಧಾನಿಯನ್ನಾಗಿ ಮಾಡುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು. ಬಡ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಯೋಜನೆ ಇದೆ. ಬಡ ಕುಟುಂಬಗಳಿಗೆ ಒಂದು ವರ್ಷದಲ್ಲಿ 3 ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಇದಲ್ಲದೇ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಮಾಸಿಕ 2000, ಬಡ ಮಕ್ಕಳಿಗೆ ಮಾಸಿಕ 1000 ನೀಡಲಾಗುವುದು ಎಂದಿದ್ದಾರೆ.

ಮೊದಲು ಉತ್ತರಾಖಂಡದ 70 ಕ್ಷೇತ್ರಗಳ ಪೈಕಿ 59 ಸ್ಥಾನಗಳಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. ಎರಡನೇ ಪಟ್ಟಿಯೊಂದಿಗೆ ಪಕ್ಷವು ಒಟ್ಟು 70 ಸ್ಥಾನಗಳ ಪೈಕಿ 68 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಪುಷ್ಕರ್ ಸಿಂಗ್ ಧಾಮಿ ಖತಿಮಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಉತ್ತರಾಖಂಡ ರಾಜ್ಯದ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಫೆ.14ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಚುನಾವಣಾ ಫಲಿತಾಂಶ ಪ್ರಕಟ ಆಗಲಿದೆ. ಉತ್ತರಾಖಂಡ ಅಭ್ಯರ್ಥಿಗಳ ವೆಚ್ಚದ ಮಿತಿ 40 ಲಕ್ಷ ರೂ. ಇರಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. 2017ರ ಉತ್ತರಾಖಂಡ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 70 ಸ್ಥಾನಗಳ ಪೈಕಿ ಬಿಜೆಪಿ 57 ಸ್ಥಾನಗಳನ್ನು ಗೆದ್ದಿತ್ತು.












Click it and Unblock the Notifications