ಉತ್ತರಾಖಂಡದಲ್ಲಿ ಬಿಜೆಪಿ ಟಿಕೆಟ್ ಪಡೆದ ಆರೂ ಮಹಿಳೆಯರು ವಿನ್!
ಡೆಹ್ರಾಡೂನ್, ಮಾರ್ಚ್ 11: ಉತ್ತರಾಖಂಡ ವಿಧಾನಸಭೆ ಚುನಾವಣೆಯಲ್ಲಿ ಮತದಾರ ಪ್ರಭುಗಳು ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚಿನ ಮಣೆ ಹಾಕಿದ್ದಾರೆ. 2022ರ ಚುನಾವಣೆಯಲ್ಲಿ ಎಂಟು ಮಂದಿ ಮಹಿಳಾ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಎಂಟು ಮಹಿಳಾ ವಿಜೇತರ ಪೈಕಿ ರೇಖಾ ಆರ್ಯ ಮತ್ತು ಮಮತಾ ರಾಕೇಶ್ ನಿರಂತರವಾಗಿ ಮೂರು ಬಾರಿ ಗೆಲ್ಲುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ಶೈಲಾ ರಾಣಿ ರಾವತ್, ಸರಿತಾ ಆರ್ಯ ಮತ್ತು ರಿತು ಎರಡನೇ ಬಾರಿ ಗೆಲುವು ಸಾಧಿಸುವ ಮೂಲಕ ವಿಧಾನಸಭೆ ಮೆಟ್ಟಿಲು ಏರುತ್ತಿದ್ದಾರೆ.
ಉತ್ತರಾಖಂಡದಲ್ಲಿ ಭಾರತೀಯ ಜನತಾ ಪಕ್ಷವು ಆರು ಮಹಿಳಾ ಅಭ್ಯರ್ಥಿಗಳಿಗೆ ಪಕ್ಷದಿಂದ ಟಿಕೆಟ್ ನೀಡಿದ್ದು, ಆರೂ ಮಂದಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಡೆಹ್ರಾಡೂನ್ ಕಂಟೋನ್ಮೆಂಟ್ ಕ್ಷೇತ್ರದಿಂದ ಬಿಜೆಪಿಯ ಸವಿತಾ ಕಪೂರ್ ದಿಗ್ವಿಜಯ ಸಾಧಿಸಿದ್ದಾರೆ. ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಬಿ ಸಿ ಖಂಡೂರಿ ಅವರ ಪುತ್ರಿ ರಿತು ಖಂಡೂರಿ ಭೂಷಣ್ ಕೊತ್ವಾರ್ ಕ್ಷೇತ್ರದಿಂದ ಸ್ಪರ್ಧಿಸಿ 3687 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಬಿಜೆಪಿಯ ಮಹಿಳಾ ಅಭ್ಯರ್ಥಿಗಳಿಗೆ ಗೆಲುವಿನ ಸಿಹಿ:
ಕೇದಾರನಾಥ್ ವಿಧಾನಸಭೆ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಕುಲದೀಪ್ ಸಿಂಗ್ ರಾವತ್ ವಿರುದ್ಧ ಸ್ಪರ್ಧಿಸಿದ ಬಿಜೆಪಿ ಅಭ್ಯರ್ಥಿ ಶೈಲಾ ರಾಣಿ ರಾವತ್ ಗೆಲುವಿನ ಸಿಹಿ ಉಂಡಿದ್ದಾರೆ. ಯಮಕೇಶ್ವರ ಕ್ಷೇತ್ರದಲ್ಲಿ ಬಿಜೆಪಿಯ ರೇಣು ಬಿಶ್ತಾ ಗೆಲುವು ಸಾಧಿಸಿದ್ದು, ಸೋಮೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ ಬಿಜೆಪಿಯ ರೇಖಾ ಆರ್ಯ ಜಯ ಗಳಿಸಿದ್ದಾರೆ.
ನೈನಿತಲ್ ಕ್ಷೇತ್ರದಿಂದ ಸರಿತಾ ಆರ್ಯ ಗೆಲುವು ಸಾಧಿಸಿದ್ದರೆ, ಭಗವಾನಪುರ್ ಕ್ಷೇತ್ರದಿಂದ ಸ್ಪರ್ಧಿಸಿದ ಕಾಂಗ್ರೆಸ್ ಅಭ್ಯರ್ಥಿ ಮಮತಾ ರಾಕೇಶ್ ಗೆಲುವಿನ ನಗೆ ಬೀರಿದ್ದಾರೆ. ಹರಿದ್ವಾರ ವಿಧಾನಸಭೆ ಕ್ಷೇತ್ರದಲ್ಲಿ ಕೇಂದ್ರ ಸಚಿವ ಯತೀಶ್ವರಾನಂದ ವಿರುದ್ಧ ಸ್ಪರ್ಧಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಹರೀಶ್ ರಾವತ್ ಪುತ್ರಿ ಅನುಪಮಾ ಗೆದ್ದು ಬೀಗಿದ್ದಾರೆ. ಡೆಹ್ರಾಡೂನ್ ಕಂಟೇನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಿದ ಸವಿತಾ ಕಪೂರ್ ಮತ್ತು ಕೊತ್ವಾರ್ ಕ್ಷೇತ್ರದಿಂದ ಸ್ಪರ್ಧಿಸಿದ ರಿತು ಖಂಡೂರಿ ಮೊದಲ ಬಾರಿ ಗೆಲುವಿನ ರುಚಿ ನೋಡಿದ್ದಾರೆ.
ಉತ್ತರಾಖಂಡ ವಿಧಾನಸಭೆ ಚುನಾವಣೆ ಫಲಿತಾಂಶ:
ಕೇಂದ್ರ ಚುನಾವಣಾ ಆಯೋಗದ ಪ್ರಕಾರ, ಉತ್ತರಾಖಂಡದ 70 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದೆ. ಯಾವುದೇ ಪಕ್ಷ ಸರ್ಕಾರ ರಚಿಸುವುದಕ್ಕೆ ಮ್ಯಾಜಿಕ್ ನಂಬರ್ 36 ಆಗಿದೆ. ಆದರೆ ಬಿಜೆಪಿಯು 47 ಕ್ಷೇತ್ರಗಳಲ್ಲಿ ಗೆಲುವಿನ ಪತಾಕೆ ಹಾರಿಸುವ ಮೂಲಕ ಅಧಿಕಾರವನ್ನು ಪಕ್ಕಾ ಮಾಡಿಕೊಂಡಿದೆ. 19 ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಅತಿಹೆಚ್ಚು ಸ್ಥಾನ ಗಳಿಸಿದ ಎರಡನೇ ಪಕ್ಷವಾಗಿ ಹೊರ ಹೊಮ್ಮಿದೆ. ಉಳಿದಂತೆ ಬಹುಜನ ಸಮಾಜವಾದಿ ಪಕ್ಷ 2, ಸ್ವತಂತ್ರ್ಯ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದಾರೆ.












Click it and Unblock the Notifications