ಉತ್ತರ ಪ್ರದೇಶ: ಶಿಕ್ಷಕರ ಏಟಿಗೆ ವಿದ್ಯಾರ್ಥಿನಿ ಬಲಿ
ಬಲ್ಲಿಯ, ಫೆಬ್ರವರಿ 08: ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಶಿಕ್ಷಕರು ಥಳಿಸಿದ ಪರಿಣಾಮ ಆಕೆ ಮೃತಳಾದ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಎಂಬಲ್ಲಿಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಇಲ್ಲಿನ ರಾಸ್ರಾ ಪ್ರದೇಶದ ಸಂತೋಷ್ ವರ್ಮಾ ಎಂಬುವವರ ಪುತ್ರಿ ಸುಪ್ರಿಯಾ ಅವರನ್ನು ಪಠ್ಯಕ್ಕೆ ಸಂಬಂಧಿಸಿದ ಯಾವುದೋ ವಿಷಯಕ್ಕೆ ರಜನಿ ಉಪಾಧ್ಯಾಯ ಮತ್ತು ಸಂಗೀತಾ ಸಿಂಗ್ ಇಬ್ಬರು ಶಿಕ್ಷಕಿಯರು ಥಳಿಸಿದ್ದಾರೆ. ಇದರಿಂದಾಗಿ ಸಂಜೆ ಮನೆಗೆ ಬರುವ ಹೊತ್ತಿಗೆ ಸುಪ್ರಿಯಾ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಆಕೆಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.

ಮಗುವಿನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಪೋಸ್ಟ್ ಮಾರ್ಟಮ್ ವರದಿಯ ನಂತರ ನಿಖರ ಕಾರಣ ತಿಳಿದುಬರಲಿದೆ. ಮಗು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆಯೇ ಮಗುವಿನ ಪಾಲಕರು ಮತ್ತು ಹಲವಾರು ಜನ ಶಾಲೆಯ ಮುಂದೆ ಧರಣಿ ಆರಂಭಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಲೆಯ ವ್ಯವಸ್ಥಾಪಕ ಮುನ್ನಾ ಸಿಂಗ್, ಮತ್ತು ಇಬ್ಬರು ಶಿಕ್ಷಕಿಯರಾದ ರಜನಿ ಉಪಾಧ್ಯಾಯ ಮತ್ತು ಸಂಗೀತಾ ಸಿಂಗ್ ರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.












Click it and Unblock the Notifications