Rain: ದೆಹಲಿ ಮಾತ್ರವಲ್ಲ, ಉತ್ತರ ಪ್ರದೇಶಕ್ಕೂ ಆವರಿಸಿದ ಪ್ರವಾಹ ಭೀತಿ!
ನೋಯ್ಡಾ: ಉತ್ತರ ಭಾರತದಲ್ಲಿ ಭಾರಿ ಮಳೆ ಪರಿಣಾಮ ಪರಿಸ್ಥಿತಿ ಕೈಮೀರಿ ಹೋಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯ ರೀತಿ ಉತ್ತರ ಪ್ರದೇಶದಲ್ಲೂ ಭಯಾನಕ ಸ್ಥಿತಿ ಎದುರಾಗಿದೆ. ಹಿಂದೋನ್ ನದಿ ನೀರಿನ ಹೊರಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಹೀಗಾಗಿ ನೂರಾರು ಕುಟುಂಬಗಳನ್ನ ಸ್ಥಳಾಂತರ ಮಾಡಿದೆ ಸ್ಥಳೀಯ ಆಡಳಿತ.
ಉತ್ತರ ಪ್ರದೇಶದಲ್ಲಿ ಅನೇಕ ನದಿಗಳು ಹರಿಯುತ್ತವೆ. ಅದೇ ರೀತಿ ಹಿಂದೋನ್ ನದಿ ಕೂಡ ಅಲ್ಲಿನ ಕೃಷಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿನ್ನೆಯಿಂದ ಎದುರಾದ ಪ್ರವಾಹ ಭೀತಿ ಪರಿಣಾಮ, ಸುಮಾರು 200 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಹಿಂದೋನ್ ನದಿ ಇದೀಗ ಅಪಾಯದ ಮಟ್ಟ ತಲುಪುತ್ತಿದೆ. 205 ಮೀಟರ್ ತಲುಪಿದರೆ ಹಿಂದೋನ್ ನದಿ ಅಪಾಯದ ಮಟ್ಟ ತಲುಪಿದಂತೆ. ಇದೀಗ ನದಿ ನೀರಿನ ಮಟ್ಟ 200 ಮೀಟರ್ ತಲುಪಿದ್ದು, ಅಧಿಕಾರಿಗಳು ಈ ಬಗ್ಗೆ ಭಾರಿ ಎಚ್ಚರಿಕೆ ವಹಿಸಿದ್ದಾರೆ. ಹಾಗೇ ನದಿ ಬಳಿ ಯಾರೂ ಸುಳಿಯದಂತೆಯೂ ಖಡಕ್ ಸೂಚನೆ ನೀಡಲಾಗಿದೆ.

ಭಾರಿ ಮಳೆ & ಪ್ರವಾಹದ ಆತಂಕ
ಈ ಬಾರಿ ಉತ್ತರ ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಪ್ರವಾಹ ಎದುರಾಗಿದೆ. ಹೇಗೆಂದರೆ, ಒಂದು ಕಡೆ ಭಾರಿ ಮಳೆ ಉಂಟಾಗಿದೆ. ಇನ್ನೊಂದ್ಕಡೆ ಎತ್ತರ ಪ್ರದೇಶದಲ್ಲೂ ಮಳೆಯಾದ ಪರಿಣಾಮ ಭಾರಿ ಪ್ರಮಾಣದ ನೀರು ನದಿಗೆ ಹರಿಯುತ್ತಿದೆ. ಹೀಗಾಗಿ ಪ್ರವಾಹ ಎದುರಾಗಿ, ಜನರು ಆತಂಕದಲ್ಲಿದ್ದಾರೆ. ಇನ್ನು ಪ್ರವಾಹ ಕಾರಣ ಸ್ಥಳಾಂತರ ಮಾಡಿರುವ ಜನರಿಗೆಲ್ಲಾ ವಸತಿ ಮತ್ತು ಆಹಾರ ಹಾಗೂ ಆರೋಗ್ಯ ಒದಗಿಸಲಾಗಿದೆ. ಹಾಗೇ ಗೌತಮ ಬುದ್ಧ ನಗರವು ಹಿಂದೋನ್ ಮತ್ತು ಯಮುನಾ ನದಿ ನಡುವೆ ಇದ್ದು, ಇತ್ತೀಚೆಗೆ ಯಮುನಾ ನದಿ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಈಗ ಉತ್ತರ ಪ್ರದೇಶದ ಹಲವೆಡೆ ದೆಹಲಿ ರೀತಿ ಪ್ರವಾಹದ ಆತಂಕವಿದೆ.
ದೆಹಲಿಯಲ್ಲೂ ಇದೇ ಪರಿಸ್ಥಿತಿ
ಕಳೆದ 2-3 ವಾರದಿಂದ ರಾಷ್ಟ್ರ ರಾಜಧಾನಿ ಜನರಿಗೆ ನೆಮ್ಮದಿ ಇಲ್ಲ. ಒಂದು ಕಡೆ ಮಳೆ, ಇನ್ನೊಂದು ಕಡೆ ಪ್ರವಾಹ. ಹೀಗಾಗಿ ಇಡೀ ದೆಹಲಿ ನೀರಲ್ಲಿ ಕೊಚ್ಚಿ ಹೋಗಿದೆ. ಆದ್ರೆ ಈ ಪರಿಸ್ಥಿತಿ ಒಂದಷ್ಟು ಹಿಡಿತಕ್ಕೆ ಸಿಕ್ಕಿದೆ ಅನ್ನುವಷ್ಟರಲ್ಲಿ ಮತ್ತೆ ಭಯ ಬಂದಿದೆ. ಭಾನುವಾರ ಬೆಳಗ್ಗೆಯಿಂದಲೇ ಯಮುನಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಯಮುನಾ ನದಿಯಲ್ಲಿ 205.33 ಮೀಟರ್ ಎತ್ತರವನ್ನ ಅಪಾಯದ ಮಟ್ಟ ಎಂದು ಗುರುತಿಸಲಾಗುತ್ತೆ. ಆದರೆ ಈಗ ಯಮುನಾ ನದಿ 205.81 ಮೀಟರ್ ಎತ್ತರದಲ್ಲಿ ಹರಿಯುತ್ತಿದೆ. ಈ ಮೂಲಕ ಮತ್ತೊಮ್ಮೆ ದೆಹಲಿ ರಸ್ತೆಗಳಿಗೆ ನೀರು ನುಗ್ಗಿ ಬರುತ್ತಿದೆ.

ತಗ್ಗು ಪ್ರದೇಶದ ಜನರ ಸ್ಥಳಾಂತರ!
ಇನ್ನು ನದಿಯ ನೀರಿನ ಮಟ್ಟ ದಿಢೀರ್ ಏರಿಕೆ ಕಂಡ ಬೆನ್ನಲ್ಲೇ ತಗ್ಗು ಪ್ರದೇಗಳಲ್ಲಿ ವಾಸ ಮಾಡುವ ಜನರನ್ನ ಸ್ಥಳಾಂತರ ಮಾಡಲಾಗಿದೆ. ಈ ಮೂಲಕ ದೆಹಲಿ ಸುತ್ತಮುತ್ತ ಇವರಿಗೆ ಜಾಗ ನೀಡಲಾಗಿದೆ. ಇನ್ನೂ ಕೆಲವು ದಿನಗಳ ಕಾಲ ಇದೇ ರೀತಿ ನದಿ ನೀರು ಅಪಾಯದ ಹಂತ ಮೀರಿ ಹರಿಯುವ ಸಾಧ್ಯತೆ ಇದೆ. ಹೀಗಾಗಿ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ನಡುವೆ ಯಮುನಾ ನದಿಗೆ ಇತರ ರಾಜ್ಯಗಳಿಂದಲೂ ಭಾರಿ ಪ್ರಮಾಣದ ನೀರು ಬರುತ್ತಿದೆ. ಭಾರಿ ಮಳೆಯ ಪರಿಣಾಮ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪರಿಸ್ಥಿತಿ ನಿಭಾಯಿಸಲು ಕೇಜ್ರಿವಾಲ್ ಸರ್ಕಾರ ಪರದಾಡುತ್ತಿದೆ.
ದೆಹಲಿ ಮಳೆಯ ಇತಿಹಾಸ ಗೊತ್ತಾ?
ಯಮುನೆಯ ರೌದ್ರವಾತಾರ ಕಂಡು ದೆಹಲಿ ಜನ ದೂರ ಓಡುತ್ತಿದ್ದಾರೆ. ಅಲ್ಲದೆ ಯಮುನೆಯ ನೀರಿನ ಹರಿವು ಸುಮಾರು 40 ವರ್ಷದ ಹಿಂದಿನ ದಾಖಲೆ ಧೂಳ್ ಮಾಡಿದೆ. ಹರಿಯಾಣದಲ್ಲಿ ಸುರಿಯುತ್ತಿರುವ ಭಾರಿ ಮಳೆ ಕಾರಣ ಜಲಾಶಯದಿಂದ ನೀರು ಹರಿಸಲಾಗುತ್ತಿದೆ. ಈ ಕಾರಣಕ್ಕೆ ಯಮುನಾ ನದಿ ನೀರಿನ ಮಟ್ಟ ಸತತ ಹಲವು ದಿನದಿಂದ ಕಡಿಮೆ ಆಗುತ್ತಿಲ್ಲ. ಈಗ ಒಂದಷ್ಟು ಹಿಡಿತಕ್ಕೆ ಬಂತು ಬಿಡು ಅಂತಾ ಜನರು ವಾಪಸ್ ಬರುವಾಗಲೇ ಪರಿಸ್ಥಿತಿ ಮತ್ತೆ ಕೈಮೀರಿ ಹೋಗಿದೆ. ಯಮುನಾ ನದಿ ಇತಿಹಾಸದಲ್ಲೇ ಜುಲೈ 13 ಮರೆಯಲಾಗದ ದಿನ. ಏಕೆಂದರೆ ಅಂದು ಯಮುನಾ ನದಿ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟ ಅಂದ್ರೆ ಸುಮಾರು 208 ಮೀಟರ್‌ಗೆ ಏರಿತ್ತು. 1978ರಲ್ಲಿ ಸುರಿದ ಭಾರಿ ಮಳೆಯ ಪರಿಣಾಮ ಯಮುನಾ ನದಿ ಮಟ್ಟ 207.49 ಮೀಟರ್‌ಗೆ ತಲುಪಿತ್ತು.












Click it and Unblock the Notifications