PF Withdrawal: ಎಟಿಎಂ, ಯುಪಿಐ ಮೂಲಕ ಪಿಎಫ್ ವಿತ್ ಡ್ರಾ, ಅಪ್‌ಡೇಟ್
ನವದೆಹಲಿ, ಮಾರ್ಚ್ 26: ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಇನ್ನಷ್ಟು ಉದ್ಯೋಗಿಗಳ ಸ್ನೇಹಿಯಾಗಲು ಮುಂದಾಗಿದೆ. ಇದಕ್ಕಾಗಿ ಹೊಸ ಹೊಸ ಆಯ್ಕೆಗಳನ್ನು ನೀಡುತ್ತಿದೆ. ಈ ಹಿಂದೆ ಘೋಷಣೆ ಮಾಡಿದಂತೆ ಪಿಎಫ್ ವಾಪಸ್ ಪಡೆಯುವುದು ಇನ್ನಷ್ಟು ಸುಲಭವಾಗಿಸುತ್ತಿದೆ. ಎಟಿಎಂ, ಯುಪಿಐ ಮೂಲಕ ಪಿಎಫ್ ವಾಪಸ್ ಪಡೆಯುವ ಕುರಿತು ಈಗ ಅಪ್‌ಡೇಟ್ ನೀಡಿದೆ. ಹೊಸ ಬದಲಾವಣೆಯನ್ನು ತರಲು ಕೇಂದ್ರ ಕಾರ್ಮಿಕ ಸಚಿವಾಲಯ ಅನುಮೋದನೆ ನೀಡಿದೆ.
ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ ಈ ಕುರಿತು ಮಾಹಿತಿ ನೀಡಿದ್ದಾರೆ. ಗ್ರಾಹಕರ ಭವಿಷ್ಯ ನಿಧಿ (ಇಪಿಎಫ್) ಹಣವನ್ನು ಜೂನ್ ತಿಂಗಳಿನಿಂದ ಎಟಿಎಂ ಮತ್ತು ಯುಪಿಐ ಮೂಲಕ ವಾಪಸ್ ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಎಟಿಎಂ ಆಥವ ಯುಪಿಐ ಮೂಲಕ ಪಿಎಫ್ ವಾಪಸ್ ಪಡೆಯುವ ಆಯ್ಕೆಯನ್ನು ಜಾರಿಗೊಳಿಸಲು ಇಪಿಎಫ್‌ಒ ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಇದಕ್ಕೆ ಒಪ್ಪಿಗೆ ಸಿಕ್ಕಿದ್ದು, ಮೇ ಅಂತ್ಯ ಅಥವ ಜೂನ್ ಮೊದಲ ವಾರದಲ್ಲಿ ಈ ಆಯ್ಕೆ ಉದ್ಯೋಗಿಗಳಿಗೆ ಸಿಗಲಿದೆ.
ಪಿಎಫ್ ವಾಪಸ್ ಪಡೆಯುವುದು ಸುಲಭ: ಇನ್ನು ಮುಂದೆ ಪಿಎಫ್ ಪಡೆಯಲು ಉದ್ಯೋಗಿಗಳು ಕಛೇರಿಗೆ ಅಲೆದಾಟ ನಡೆಸಬೇಕಿಲ್ಲ ಅಥವ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಮಾಡಿ ಕಾಯಬೇಕಿಲ್ಲ. ತಮ್ಮ ಪಿಎಫ್ ಖಾತೆಯ ಬಾಕಿಯನ್ನು ನೇರವಾಗಿ ಯುಪಿಐನಲ್ಲಿಯೇ ನೋಡಲು ಅವಕಾಶ ಸಿಗಲಿದೆ.
ಈ ವರ್ಷದ ಮೇ ಅಂತ್ಯ ಅಥವ ಜೂನ್‌ನಲ್ಲಿ ಗ್ರಾಹಕರು ಯುಪಿಐ ಅಥವ ಎಟಿಎಂ ಮೂಲಕ ಪಿಎಫ್ ಹಣವನ್ನು ವಾಪಸ್ ಪಡೆಯಬಹುದು. ಸ್ವಯಂ ಚಾಲಿತ ವ್ಯವಸ್ಥೆ ಇದಾಗಿದ್ದು, ತಮ್ಮ ಆದ್ಯತೆಯ ಬ್ಯಾಂಕ್ ಖಾತೆ ಮೂಲಕ ಉದ್ಯೋಗಿಗಳು 1 ಲಕ್ಷ ರೂ. ತನಕ ಪಿಎಫ್ ಹಣ ವರ್ಗಾವಣೆ, ವಾಪಸ್ ಪಡೆಯಲು ಅವಕಾಶವಿದೆ ಎಂದು ಸುಮಿತ್ರಾ ದಾವ್ರಾ ಹೇಳಿದ್ದಾರೆ.

ಯುಪಿಐ ಅಥವ ಬ್ಯಾಂಕ್ ಎಟಿಎಂಗಳ ಮೂಲಕ ಉದ್ಯೋಗಿಗಳು ಅನಾರೋಗ್ಯ, ವಸತಿ, ಶಿಕ್ಷಣ ಮತ್ತು ಮದುವೆ ಕಾರಣಕ್ಕೆ ಪಿಎಫ್ ಹಣವನ್ನು ಹಿಂಪಡೆಯಬಹುದು. ಡಿಲಿಟಲೀಕರಣದ ಭಾಗವಾಗಿ ಇಪಿಎಫ್‌ಒ ಮಹತ್ವದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಇದಕ್ಕಾಗಿ 120ಕ್ಕೂ ಹೆಚ್ಚು ಡೇಟಾಬೇಸ್‌ಗಳನ್ನು ಏಕೀಕರಣಗೊಳಿಸುವ ಮೂಲಕ ಪಿಎಫ್ ಹಿಂಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಿದೆ ಎಂದು ಹೇಳಿದ್ದಾರೆ.
ಇಪಿಎಫ್‌ಒನ ಇತ್ತೀಚಿನ ಹಲವು ಕ್ರಮಗಳಿಂದ ಉದ್ಯೋಗಿಗಳಿಗೆ ಸಹಾಯಕವಾಗಿದೆ. ಯಾವುದೇ ಬ್ಯಾಂಕ್ ಎಟಿಎಂನಿಂದ ಪಿಎಫ್ ವಾಪಸ್ ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ. ಪಿಎಫ್ ಖಾತೆಯಲ್ಲಿ ಇರುವ ಹಣದ ಬಗ್ಗೆ ಉದ್ಯೋಗಿಗಳಿಗೆ ಮೊಬೈಲ್‌ನಲ್ಲಿಯೇ ಮಾಹಿತಿ ಸಿಗಲಿದ್ದು, ಅನುಕೂಲವಾಗಲಿದೆ ಎಂದು ಸುಮಿತ್ರಾ ದಾವ್ರಾ ವಿವರಣೆ ನೀಡಿದ್ದಾರೆ.
2024ರಲ್ಲಿಯೇ ಕೇಂದ್ರ ಸರ್ಕಾರ ಆಧಾರ್ ಮೊಬೈಲ್ ನಂಬರ್ ಆಧಾರಿತ ಒಟಿಪಿ ಮೂಲಕ ಪಿಎಫ್ ವಾಪಸ್ ಪಡೆಯುವ ವ್ಯವಸ್ಥೆಯನ್ನು ಸರಳೀಕರಣ ಮಾಡಲಾಗುತ್ತದೆ ಎಂದು ಹೇಳಿತ್ತು. ಅಲ್ಲದೇ ಉದ್ಯೋಗಿಗಳ ಸಾರ್ವತ್ರಿಕ ಖಾತೆ ಸಂಖ್ಯೆ (ಯುಎಎನ್) ಸಕ್ರಿಯಗೊಳಿಸುವಿಕೆ ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳುವಂತೆ ಇಪಿಎಫ್‌ಒ ವಲಯ ಮತ್ತು ಪ್ರಾದೇಶಿಕ ಕಚೇರಿಗಳಿಗೆ ಸೂಚನೆ ನೀಡಿತ್ತು.
ಆಧಾರ್ ನಂಬರ್ ಅನ್ನು ಗುರುತಿನ ದಾಖಲೆಯಾಗಿ ಬಳಕೆ ಮಾಡುವ ಮೂಲಕ ಪಿಎಫ್ ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಸರಳಗೊಳಿಸಲಾಗುತ್ತಿದೆ. ಇದರಿಂದಾಗಿ ಫಲಾನುಭವಿಗಳು ತಮ್ಮ ಹಕ್ಕುಗಳನ್ನು ಸುಲಭವಾಗಿ ಪಡೆಯಬಹುದು. ಆಧಾರ್ ಆಧಾರಿತ ಪರಿಶೀಲನೆಯು ಇರುವ ಕಾರಣ ಈ ವ್ಯವಸ್ಥೆ ಪಾರದರ್ಶಕವಾಗಿರುತ್ತದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications