ಪಾಕಿಸ್ತಾನದ ಮಾನ ಬೀದಿಪಾಲು, ಅಮೆರಿಕ ಹೇಳಿದ್ದು ಏನು?
ಪಾಪಿ ಪಾಕಿಸ್ತಾನ ಪದೇ ಪದೇ ಜಗತ್ತಿನ ಎದುರು ಮಾನ ಕಳೆದುಕೊಳ್ಳುತ್ತೆ. ಅದರಲ್ಲೂ ಈ ಬಾರಿ ತನ್ನ ಚುನಾವಣೆ ವಿಚಾರದಲ್ಲಿ ಪಾಕಿಸ್ತಾನದ ಮಾನ ಬೀದಿಪಾಲಾಗಿ ಹೋಗಿದೆ. ಹೀಗೆ ಇನ್ನೂ ಹಳೇ ಗಾಯ ಹಸಿಯಾಗಿ ಇರುವಾಗಲೇ ಅಮೆರಿಕ ಕೂಡ ಪಾಕಿಸ್ತಾನಕ್ಕೆ ಆಘಾತವನ್ನ ನೀಡಿದೆ. ಹಾಗಾದರೆ ಏನದು ಆಘಾತ..? ಪಾಕಿಸ್ತಾನ ತನ್ನ ಬಳಿ ಇಲ್ಲದಿರೋ ಮಾನ ಹೆಂಗೆ ಕಳೆದುಕೊಂಡಿದೆ? ಬನ್ನಿ ತಿಳಿಯೋಣ.
ಕಳೆದ ತಿಂಗಳು ಚುನಾವಣೆ ನಡೆಸಲು ಪರದಾಡಿದ್ದ ಪಾಕಿಸ್ತಾನ, ಹಂಗೋ & ಹಿಂಗೋ ಈಗ ಹೊಸ ಸರ್ಕಾರ ರಚನೆ ಮಾಡಿದೆ. ಹೀಗಿದ್ದಾಗ ಪಾಕಿಸ್ತಾನ ಚುನಾವಣೆಯೇ ಒಂದು ದೊಡ್ಡ ಮೋಸ ಅಂತಾ ಗಂಭೀರ ಆರೋಪ ಮಾಡಲಾಗಿತ್ತು. ಇದೀಗ ಅಮೆರಿಕ ಕೂಡ ಅದೇ ಮಾತು ಹೇಳಿದೆ. ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವುದನ್ನು ಅಮೆರಿಕ ಉಲ್ಲೇಖ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನಕ್ಕೆ ಅಗತ್ಯ ಇರುವ ಸಹಕಾರ ನೀಡುವುದಾಗಿ ಕೂಡ ಅಮೆರಿಕ ಹೇಳಿದೆ. ಈ ಮೂಲಕ ಒಂದು ಕಡೆ ಪಾಕಿಸ್ತಾನ ಮಾನ ಕಳೆದುಕೊಂಡರು ಅಮೆರಿಕದ ನೆರವು ಪಡೆಯಲು ಮತ್ತೊಮ್ಮೆ ಕಾಲು ಹಿಡಿಯುವ ಮುನ್ಸೂಚನೆ ಸಿಕ್ಕಿದೆ.

ಬೆದರಿಕೆ ಇದ್ದರೂ 6 ಕೋಟಿಗೂ...
ಅಮೆರಿಕದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಪಾಕಿಸ್ತಾನದ ಚುನಾವಣೆ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಹಿಂಸಾಚಾರದ ಬೆದರಿಕೆ ಇದ್ದರೂ 6 ಕೋಟಿಗೂ ಹೆಚ್ಚು ಪಾಕಿಸ್ತಾನೀಯರು ಮತ ಚಲಾಯಿಸಿದರು. ಹಾಗೂ 2018 ರಲ್ಲಿ ಆಯ್ಕೆ ಮಾಡಿದ್ದಕ್ಕಿಂತ ಶೇಕಡಾ 50 ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರನ್ನ ಸಂಸತ್ತಿಗೆ ಆಯ್ಕೆ ಮಾಡಿದರು ಎಂದಿದ್ದಾರೆ. ಈ ಮೂಲಕವಾಗಿ ಪಾಕಿಸ್ತಾನದ ಚುನಾವಣಾ ಅಕ್ರಮ ಈಗ ಜಾಗತಿಕ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಹೀಗೆ ಪಾಕಿಸ್ತಾನದ ರಾಜಕಾರಣಿಗಳ ಬಣ್ಣ ಮತ್ತೊಮ್ಮೆ ಬಯಲಾಗಿದೆ.
ಸಂಬಳ ಬೇಡ ಎಂದ ರಾಜಕಾರಣಿಗಳು!
ಹೀಗೆ ಪಾಕಿಸ್ತಾನದ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೂ ಪಾಕಿಸ್ತಾನದ ರಾಜಕಾರಣಿಗಳು ಹೊಸ ವರಸೆ ಶುರು ಮಾಡಿದ್ದಾರೆ. ಅದು ಏನೆಂದರೆ ಇದೀಗ ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಹೀಗಾಗಿ ನಮಗೆ ಸಂಬಳ ಬೇಡ ಅಂತಿದ್ದಾರೆ ಪಾಕ್‌ನ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಅವರ ಸಂಪುಟ ಸದಸ್ಯರು. ಇದರ ಜೊತೆಯಲ್ಲೇ ತಮಗೆ ಸಿಗುವ ಇತರ ಸೌಲಭ್ಯಗಳನ್ನು, ಪಡೆಯದೇ ಇರಲು ನಿರ್ಧರಿಸಿದ್ದಾರಂತೆ. ಈ ನಡುವೆ, ಇದು ಒಂದು ಡ್ರಾಮಾ ಎಂಬ ಆರೋಪವನ್ನು ಪಾಕಿಸ್ತಾನದ ಪ್ರಜೆಗಳು ಮಾಡುತ್ತಿದ್ದಾರೆ.

ಆರ್ಥಿಕವಾಗಿ ಬೀದಿಗೆ ಬಿದ್ದ ಪಾಕ್
ಅಂದಹಾಗೆ ಪಾಕಿಸ್ತಾನ ಆರ್ಥಿಕವಾಗಿ ಬೀದಿಗೆ ಬಿದ್ದಿದೆ. ಹೀಗಿದ್ದಾಗ ಅಲ್ಲಿನ ಜನರಿಗೆ ಒಂದು ಹೊತ್ತಿನ ಊಟ ಕಲ್ಪಿಸುವುದಕ್ಕೂ ಪಾಕಿಸ್ತಾನ ಸರ್ಕಾರ ಅಸಹಾಯಕ ಸ್ಥಿತಿಗೆ ತಲುಪಿದೆ. ಈ ಸಮಯದಲ್ಲೇ ಅನಗತ್ಯ ಖರ್ಚುವೆಚ್ಚ ಕಡಿತಗೊಳಿಸಲು ಕಠಿಣ ಕ್ರಮ ಜಾರಿ ತರಲು ಸಭೆ ಕೂಡ ಕರೆಯಲಾಗಿತ್ತು. ಈ ಸಭೆಯಲ್ಲಿ ಇಂತಹ ತೀರ್ಮಾನ ಕೈಗೊಳ್ಳಲಾಗಿದೆಯಂತೆ. ಇಷ್ಟಲ್ಲದೆ, ಸರ್ಕಾರದ ಹಣದಲ್ಲಿಯೇ ತೆರಳುವ ವಿದೇಶಿ ಪ್ರವಾಸಗಳಿಗೆ ಈಗಾಗಲೇ ನಿರ್ಬಂಧ ಹೇರಿದೆ ಅಲ್ಲಿನ ಸರ್ಕಾರ. ಈ ಹಿನ್ನೆಲೆ ಸಚಿವರು ಜನಪ್ರತಿನಿಧಿಗಳು & ಸರ್ಕಾರಿ ಅಧಿಕಾರಿಗಳು ಅನುಮತಿಯಿಲ್ಲದೆ ಸರ್ಕಾರಿ ಹಣ ಬಳಸಿ ವಿದೇಶಿ ಪ್ರವಾಸ ಕೈಗೊಳ್ಳುವಂತಿಲ್ಲ. ಹೀಗಿದ್ದಾಗಲೇ ತಮ್ಮ ಸಂಬಳವನ್ನು ಪಾಕ್ ರಾಜಕಾರಣಿಗಳು ಬಿಟ್ಟುಕೊಡಲು ಮುಂದಾಗಿದ್ದಾರೆ.












Click it and Unblock the Notifications