Uttar Pradesh: ಪತಿಯನ್ನು 15 ತುಂಡಾಗಿಸಿದವಳಿಗೆ ಬೇಕಂತೆ ಡ್ರಗ್: ಜೈಲಿನಲ್ಲಿ ಸೌರಭ್ ರಜಪೂತ್ ಕೊಲೆ ಆರೋಪಿಗಳ ರಂಪಾಟ
ಲಕ್ನೋ ಮಾರ್ಚ್ 23: ಮಾಡಿದ ಪಾಪ ಬೆನ್ನಿಗೆ ಅಂಟಿದ ಬೇತಾಳನಂತೆ. ಈ ಮಾತಿಗೆ ಉತ್ತರಪ್ರದೇಶದ ಮೀರತ್‌ನಲ್ಲಿ ನಡೆದ ಸೌರಭ್ ರಜಪೂತ್ ಕೊಲೆ ಪ್ರಕರಣ ಸಾಕ್ಷಿ. ಪತ್ನಿ ಮುಸ್ಕಾನ್ ಹಾಗೂ ಆಕೆಯ ಪ್ರಿಯಕರ ಸಾಹಿಲ್ ಇಬ್ಬರು ಸೇರಿ ಸೌರಭ್ ನನ್ನು ಕೊಂದು ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್‌ನಲ್ಲಿ ಮುಚ್ಚಿಟ್ಟಿದ್ದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದೀಗ ಈ ಪ್ರಕರಣದಲ್ಲಿ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಸೌರಭ್ ರಜಪೂತ್ ನನ್ನು ಕೊಂದ ಪತ್ನಿ ಮುಸ್ಕನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರ ಬಗ್ಗೆ ಮತ್ತೊಂದು ಬೆಚ್ಚಿ ಬೀಳಿಸುವ ವಿಷಯ ಬಹಿರಂಗವಾಗಿದೆ.
ಹೌದು... ಸೌರಭ್ ರಜಪೂತ್ ನನ್ನು ಕೊಂದ ಪತ್ನಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಇಬ್ಬರೂ ಕೂಡ ಮಾದಕ ವ್ಯಸನಿಗಳಾಗಿದ್ದಾರೆನ್ನುವ ವಿಷಯ ತಿಳಿದು ಬಂದಿದೆ. ಜೈಲಿನಲ್ಲಿರುವ ಮುಸ್ಕಾನ್ ಮತ್ತು ಸಾಹಿಲ್ ಗಂಭೀರ ಮಾದಕ ವ್ಯಸನದಿಂದ ಬಳಲುತ್ತಿದ್ದಾರೆನ್ನಲಾಗಿದೆ. ಅವರು ಮಾದಕ ವ್ಯಸನಕ್ಕೆ ಎಷ್ಟು ವ್ಯಸನಿಯಾಗಿದ್ದಾರೆಂದರೆ ಜೈಲಿನಲ್ಲಿ ಆಹಾರವನ್ನು ತಿನ್ನಲು ಸಹ ನಿರಾಕರಿಸುತ್ತಿದ್ದಾರೆ.

ಮೀರತ್ ಜಿಲ್ಲಾ ಜೈಲಿನಲ್ಲಿ ಮುಸ್ಕಾನ್ ಹಾಗೂ ಸಾಹಿಲ್ ನನ್ನು ಪುರುಷರು ಮತ್ತು ಮಹಿಳೆಯರ ಪ್ರತ್ಯೇಕ ಬ್ಯಾರಕ್‌ಗಳಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ಮುಸ್ಕಾನ್ ಮತ್ತು ಸಾಹಿಲ್ ಆಹಾರದ ಬದಲಿಗೆ ಅಪಾಯಕಾರಿ ಮಾದಕ ದ್ರವ್ಯಗಳನ್ನು ಕೇಳುತ್ತಿದ್ದಾರಂತೆ. ಸಾಹಿಲ್ ಜೈಲು ಅಧಿಕಾರಿಗಳಿಗೆ ಗಾಂಜಾ (ಗಾಂಜಾ) ಮತ್ತು ಮಾರ್ಫಿನ್ ಇಂಜೆಕ್ಷನ್‌ಗಳನ್ನು ಕೇಳಿದ್ದಾನಂತೆ. ಮಾದಕ ದ್ರವ್ಯಗಳು ನೀಡದ ಕಾರಣ, ಮುಸ್ಕಾನ್ ಮತ್ತು ಸಾಹಿಲ್ ಜೈಲಿನಲ್ಲಿ ವಿಚಿತ್ರ ಕೆಲಸಗಳನ್ನು ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದು ನಿಜಕ್ಕೂ ಬೆಚ್ಚಿ ಬೀಳಿಸುವ ವಿಷಯ.
ಮಾದಕ ದ್ರವ್ಯಗಳ ಮೇಲೆ ಅವಲಂಬಿತರಾದ ಮುಸ್ಕಾನ್ ಮತ್ತು ಸಾಹಿಲ್
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಹೆಸರು ಬಹಿರಂಗಪಡಿಸಲು ಇಚ್ಛಿಸದ ಜೈಲು ಅಧಿಕಾರಿಯೊಬ್ಬರು, ಮುಸ್ಕಾನ್ ಮತ್ತು ಸಾಹಿಲ್ ಮಾದಕ ದ್ರವ್ಯಗಳ ಮೇಲಿನ ಅವಲಂಬನೆ ತುಂಬಾ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಅವನು ಮಾದಕ ದ್ರವ್ಯಗಳಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ತೋರುತ್ತಿದೆಯಂತೆ. ಆತ ಸ್ವತಃ ಅಪಾಯ ಮಾಡಿಕೊಳ್ಳದಂತೆ ಹಾಗೂ ಇತರರಿಗೆ ಯಾವುದೇ ಹಾನಿಯಾಗದಂತೆ ಹೆಚ್ಚುವರಿ ಎಚ್ಚರಿಕೆ ವಹಿಸಲಾಗಿದೆ ಎಂದು ಜೈಲು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಸ್ಕಾನ್ ಮತ್ತು ಸಾಹಿಲ್ ಮಾದಕ ವ್ಯಸನಿಗಳು
ಬಂಧನದ ನಂತರ ಮುಸ್ಕಾನ್ ಮತ್ತು ಸಾಹಿಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಜೈಲಿನಲ್ಲಿದ್ದ ಮೊದಲ ರಾತ್ರಿಯೇ ಸಾಹಿಲ್ ಆರೋಗ್ಯ ಹದಗೆಡಲು ಪ್ರಾರಂಭಿಸಿದೆ. ವೈದ್ಯರು ಆತನಿಗೆ ತೀವ್ರ ಮಾದಕ ವ್ಯಸನವಿದೆ ಎಂದು ಪತ್ತೆ ಹಚ್ಚಿ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ. ಅಲ್ಲದೆ ಸಾಹಿಲ್ ಮಾದಕ ದ್ರವ್ಯಕ್ಕಾಗಿ ಜೈಲಿನಲ್ಲಿ ಕೋಲಾಹಲವನ್ನೇ ಸೃಷ್ಟಿಸಿದ್ದಾನೆ ಎನ್ನಲಾಗುತ್ತಿದೆ. ತನಗೆ ಮಾದಕ ದ್ರವ್ಯ ನೀಡಬೇಕೆಂದು ಒತ್ತಾಯಿಸುತ್ತಿದ್ದಾನೆಂದು ತಿಳಿದು ಬಂದಿದೆ.

ಮಾರ್ಚ್ 22ರ ಶನಿವಾರ ಅಧಿಕೃತ ಮೂಲಗಳಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಮುಸ್ಕಾನ್ ಕೂಡ ಗಾಂಜಾ (ಗಾಂಜಾ) ಇಲ್ಲದೆ ತುಂಬಾ ಚಡಪಡಿಸುತ್ತಿದ್ದರು ಮತ್ತು ಮಾರ್ಫಿನ್ ಇಂಜೆಕ್ಷನ್ ನೀಡುವಂತೆ ಒತ್ತಾಯಿಸಿದ್ದಾರೆ. ಮುಸ್ಕಾನ್ ಮತ್ತು ಸಾಹಿಲ್ ನಿಯಮಿತವಾಗಿ ಇಂಜೆಕ್ಷನ್ ಮೂಲಕ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದರಿಂದಾಗಿ ಅವರು ಜೈಲಿನಲ್ಲಿ ತೀವ್ರ ಬಳಲುತ್ತಿದ್ದಾರೆ ಎನ್ನಲಾಗಿದೆ.
ಮುಸ್ಕಾನ್ ಮತ್ತು ಸಾಹಿಲ್ ಮೇಲೆ ನಿಗಾ
ಹೀಗಾಗಿ ಮುಸ್ಕಾನ್ ಮತ್ತು ಸಾಹಿಲ್ ರನ್ನು ಜೈಲಿನಲ್ಲಿರುವ ವ್ಯಸನ ಮುಕ್ತ ಕೇಂದ್ರದಲ್ಲಿ ನೋಡಿಕೊಳ್ಳಲಾಗುತ್ತಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಲಿನ ವೈದ್ಯಕೀಯ ತಂಡವೂ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಮುಸ್ಕಾನ್ ಮತ್ತು ಸಾಹಿಲ್ ಅವರಿಂದ ಮಾದಕ ದ್ರವ್ಯಗಳ ಬೇಡಿಕೆ ಹೆಚ್ಚಾದ ಕಾರಣ ಇಬ್ಬರೂ ಆಹಾರವನ್ನೂ ಸೇವಿಸುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇಬ್ಬರೂ ಸ್ವಲ್ಪ ಸ್ಥಿರವಾಗಲು ಕನಿಷ್ಠ ಹತ್ತು ದಿನಗಳು ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮಾರ್ಚ್ 4 ರಂದು ಮುಸ್ಕಾನ್ ತನ್ನ ಪ್ರಿಯಕರ ಸಾಹಿಲ್ ಜೊತೆ ಸೇರಿ ತನ್ನ ಪತಿ ಸೌರಭ್ ರಜಪೂರ್‌ನನ್ನು ಇರಿದು ಕೊಂದು, ನಂತರ ಆತನ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ ಡ್ರಮ್ ನಲ್ಲಿ ಅಡಗಿಸಿಟ್ಟಿದ್ದರು. ಬಳಿಕ ಆ ಡ್ರಮ್ ಅನ್ನು ಸಿಮೆಂಟ್ ನಿಂದ ಮುಚ್ಚಲಾಗಿತ್ತು. ಇದಾದ ನಂತರ ಇಬ್ಬರೂ ಸಾಕ್ಷ್ಯಗಳನ್ನು ಮರೆಮಾಡಲು ಪ್ರಯತ್ನಿಸಿದರು. ಕೊಲೆಯ ನಂತರ ಇಬ್ಬರೂ ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗಿ ಎಂಜಾಯ್ ಮಾಡಿ ಬಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ ಇಬ್ಬರೂ ಹೋಳಿ ಆಡುತ್ತಾ ಕೇಕ್ ಕತ್ತರಿಸುತ್ತಿರುವುದು ಕಂಡುಬಂದಿದೆ.
ಬಳಿಕ ಸೌರಭ್ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸಾಹಿಲ್ ಹಾಗೂ ಮುಸ್ಕಾನ್ ನನ್ನು ಪೊಲೀಸರು ಪ್ರಶ್ನಿಸಿದಾಗ ಸತ್ಯ ಬಯಲಾಗಿದೆ. ಇವರಿಬ್ಬರ ಹೇಳಿಕೆಯಂತೆ ಸೌರಭ್ ಮೃತ ದೇಹವನ್ನು ಡ್ರಮ್‌ನಿಂದ ಹೊರಗೆ ತೆಗೆಯಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿರುವ ಈ ಆರೋಪಿಗಳು ಗಾಂಜಾ ನೀಡಲು ಒತ್ತಾಯಿಸುತ್ತಿದ್ದಾರೆ. ಇವರಿಗೆ ಚಿಕಿತ್ಸೆ ನೀಡದೇ ಇದ್ದರೆ ಜೀವಕ್ಕೆ ಅಪಾಯ ಮಾಡಿಕೊಳ್ಳುವ ಸಾಧ್ಯತೆ ಇದ್ದು ಪೊಲೀಸರು ಇವರ ಮೇಲೆ ವಿಶೇಷ ನಿಗಾ ಇರಿಸಿದ್ದಾರೆ.
ಇದನ್ನು ಗಮನಿಸಿದರೆ ಇಬ್ಬರು ಮಾದಕ ವ್ಯಸನಿಗಳಾಗಿದ್ದಾಗಲೇ ಸೌರಭ್‌ನನ್ನು ಕೊಲ್ಲುವ ಧೈರ್ಯ ಮಾಡಿದ್ರಾ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಯಾಕೆಂದರೆ ಒಬ್ಬ ಸಾಮಾನ್ಯ ವ್ಯಕ್ತಿಗೆ ದೇಹವನ್ನು ತುಂಡಾಗಿಸುವ ಧೈರ್ಯ ಬರುವುದಿಲ್ಲ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಮಾಡಿದ ಪಾಪ ಬೆನ್ನು ಬಿಡದೆ ಇವರನ್ನು ಕಾಡುತ್ತಿರುವುದು ಸುಳ್ಳಲ್ಲ.












Click it and Unblock the Notifications