ಮತ್ತೊಂದು ರೇಪ್, ಯುವತಿಯ ತಾಯಿ ಮೇಲೆ ಹಲ್ಲೆ
ಇಟಾವಾ (ಉ.ಪ್ರ), ಮೇ 30: ಮುಲಾಯಂ ಸಿಂಗ್ ಕುಟುಂಬದ ಆಳ್ವಿಕೆಯಲ್ಲಿರುವ ಉತ್ತರ ಪ್ರದೇಶದಲ್ಲಿ ಅತ್ಯಾಚಾರ, ದೌರ್ಜನ್ಯದಂತಹ ಅಮಾನುಷ ಪ್ರಕರಣಗಳು ಯಾವುದೇ ಅಡೆತಡೆಯಿಲ್ಲದೆ ನಡೆದಿದೆ. ಇಡೀ ದೇಶವೇ ತಲೆತಗ್ಗಿಸುವಂತೆ ಹದಿಹರೆಯದ ಇಬ್ಬರು ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅವರಿಬ್ಬರನ್ನು ನಿರ್ದಯೆಯಿಂದ ಹತ್ಯೆ ಮಾಡಿ, ಮರಕ್ಕೆ ನೇತುಹಾಕಿರುವ ಪ್ರಕರಣದ ಬೆನ್ನಿಗೆ ಮತ್ತೊಂದು ಹೇಯ ಘಟನೆ ವರದಿಯಾಗಿದೆ.

ಯುವತಿಯ ಮೇಲೆ ಸನ್ನಿ ಎಂಬ ಯುವಕನೊಬ್ಬ ಮೇ 11ರಂದು ಅತ್ಯಾಚಾರ ಮಾಡಿದ್ದಾನೆ. ಯುವತಿಯ ಮನೆಯಲ್ಲಿ ಯಾರೂ ಇಲ್ಲದಾಗ ಪಕ್ಕದ ಮನೆಯ ಸನ್ನಿ ಈ ಕುಕೃತ್ಯವೆಸಗಿದ್ದಾನೆ. ಅದರ ವಿರುದ್ಧ ಬಾಧಿತ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿ, ಪ್ರಕರಣ ದಾಖಲಿಸಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಸನ್ನಿಯನ್ನು ಬಂಧಿಸಿದ್ದಾರೆ. (ರೇಪ್ ಮಾಡಿ ಯುವತಿಯರನ್ನು ಮರಕ್ಕೆ ನೇಣುಹಾಕಿದರು)
ಆದರೆ ಕಾಮುಕ ಸನ್ನಿಯ ತಂದೆ ಬಸಂತ್ ಲಾಲ್ ಯಾದವ್ ಎಂಬ ವ್ಯಕ್ತಿ ದೂರು ವಾಪಸ್ ಪಡೆಯುವಂತೆ ಮೇ 11 ರಿಂದಲೇ ಯುವತಿಯ ತಾಯಿ ಮೇಲೆ ಒತ್ತಡ ಹೇರಿದ್ದಾನೆ. ಆದರೆ ಆಕೆ ಅದಕ್ಕೆ ಒಪ್ಪಿಲ್ಲ. ಅದೇ ಸಿಟ್ಟಿನಲ್ಲಿ ಮೇ 26ರಂದು ತನ್ನ ಪಟಾಲಂ ಜತೆಗೂಡಿ ಯುವತಿಯ ತಾಯಿ ಮನೆಗೆ ನುಗ್ಗಿದ ಬಸಂತ್ ಯಾದವ್ ಆಕೆಯನ್ನು ಮನಸೋಇಚ್ಚೆ ಥಳಿಸಿದ್ದಾನೆ.
ಯುವತಿಯ ತಾಯಿ ಈಗ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಆಕೆಗೆ ಈಗ ಮಾತು ನಿಂತುಹೋಗಿದೆ. ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ತವರು ಜಿಲ್ಲೆಯಾದ ಇಟಾವಾದಲ್ಲೇ ಈ ಪೈಶಾಚಿಕ ಕೃತ್ಯ ನಡೆದಿರುವುದು ವಿಶೇಷ. ಆದರೆ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ದುರುಳರನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ.












Click it and Unblock the Notifications