ಯುಪಿ: ಸುಪ್ರೀಂ ಕೋರ್ಟ್ ವಕೀಲೆಯ ಹತ್ಯೆ ಪ್ರಕರಣ- ಮರಣೋತ್ತರ ಪರೀಕ್ಷಾ ವರದಿಯಲ್ಲಿ ಏನಿದೆ?
ಲಕ್ನೋ ಸೆಪ್ಟೆಂಬರ್ 12: 61 ವರ್ಷದ ಸುಪ್ರೀಂ ಕೋರ್ಟ್ ವಕೀಲೆ ರೇಣು ಸಿನ್ಹಾ ಹತ್ಯೆಗೀಡಾಗಿರುವುದು ಮರಣೋತ್ತರ ಪರೀಕ್ಷೆಯಿಂದ ಬಹಿರಂಗವಾಗಿದೆ. ಆರೋಪಿ ಪತಿ ಅವರ ಕತ್ತು ಹಿಸುಕುವ ಮೊದಲು ಅವರೊಂದಿಗೆ ಜಗಳವಾಡಿ ಹಲ್ಲೆ ಮಾಡಿದ್ದಾರೆ ಎಂದು ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ತಿಳಿಸಿದೆ.
ರೇಣು ಸಿನ್ಹಾ ಅವರ ಮುಖ ಮತ್ತು ತಲೆಯ ಮೇಲೆ ಗಾಯದ ಗುರುತುಗಳಿವೆ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ. ರೇಣು ಸಿನ್ಹಾ ಮತ್ತು ಆಕೆಯ ಪತಿ, 62 ವರ್ಷದ ಮಾಜಿ ಭಾರತೀಯ ಕಂದಾಯ ಸೇವೆ ಅಧಿಕಾರಿ ನಿತಿನ್ ಸಿನ್ಹಾ ಅವರು ಸೆಪ್ಟೆಂಬರ್ 10 ರಂದು ಬೆಳಿಗ್ಗೆ ಚಹಾ ಕುಡಿಯುವಾಗ ಜಗಳವಾಡಿದರು.

ರೇಣು ಸಿನ್ಹಾ ಅವರನ್ನು ಕತ್ತು ಹಿಸುಕಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ರೇಣು ಸಿನ್ಹಾ ಕೆಳಗೆ ಬಿದ್ದಿದ್ದರಿಂದ ಅವರ ತಲೆಗೆ ಗಾಯವಾಗಿದೆ ಎಂದು ಮರಣೋತ್ತರ ಪರೀಕ್ಷೆ ತಿಳಿಸಿದೆ. ಸದ್ಯ ಪೊಲೀಸರು ಫೊರೆನ್ಸಿಕ್ ವರದಿಗಾಗಿ ಕಾಯಲಾಗುತ್ತಿದೆ.
ಆರೋಪಿ ನಿತಿನ್ ಸಿನ್ಹಾ ಸಿಕ್ಕಿಬೀಳುವವರೆಗೂ ಮನೆಯಿಂದ ಹೊರಬಾರದೇ ಇರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ. ಆರೋಪಿ ನಿತಿನ್ ಸಿನ್ಹಾ ಕೃತ್ಯ ಎಸಗಿದ ಬಳಿಕ ಸ್ಟೋರ್ ರೂಂನಲ್ಲಿ ತಲೆಮರೆಸಿಕೊಂಡಿದ್ದನು. ನಿತಿನ್ ಸಿನ್ಹಾ ಅವರ ಕರೆ ರೆಕಾರ್ಡಿಂಗ್ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಎರಡು ದಿನಗಳಿಂದ ರೇಣು ಸಿನ್ಹಾ ಅವರ ಸಹೋದರಿ ಕರೆ ಸ್ವೀಕರಿಸದಿದ್ದಾಗ ಅವರ ಸಹೋದರ ಆತಂಕಗೊಂಡು ಪೊಲೀಸ್ ಠಾಣೆಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಹೋದರ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಬಂಗಲೆಯೊಳಗೆ ಬಲವಂತವಾಗಿ ಪ್ರವೇಶಿಸಿದ ನಂತರ, ಪೊಲೀಸರು ವಾಶ್ ರೂಂನಲ್ಲಿ ರೇಣು ಸಿನ್ಹಾ ಅವರ ದೇಹವನ್ನು ಪತ್ತೆ ಮಾಡಿದರು.
ಬಳಿಕ ರೇಣು ಸಿನ್ಹಾ ಅವರ ಪತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದರು. ಹತ್ಯೆಯ ಬಳಿಕ ತಲೆ ಮರಿಸಿಕೊಂಡಿದ್ದ ಆರೋಪಿ ಬಂಗಲೆಯ ಸ್ಟೋರ್ ರೂಂನಲ್ಲಿ ಪತ್ತೆಯಾಗಿದ್ದಾರೆ. ಆರೋಪಿ ನಿತಿನ್ ಬಂಗಲೆಗೆ ಬೀಗ ಜಡಿದು ಟೆರೇಸ್ ಮೇಲೆ ಖಾಲಿ ಇದ್ದ ಸ್ಟೋರ್ ರೂಂನಲ್ಲಿ ಆಶ್ರಯ ಪಡೆದಿದ್ದ ಎನ್ನಲಾಗಿದೆ. ನಂತರ ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು.
ಆರೋಪಿ ವಿಚಾರಣೆ ವೇಳೆ ಪತ್ನಿಯ ಕೊಲೆಗೆ ಕಾರಣವನ್ನು ಹಂಚಿಕೊಂಡಿದ್ದಾರೆ. ಆರೋಪಿ ತಮ್ಮ ಬಂಗಲೆಯನ್ನು 4 ಕೋಟಿ ರೂಪಾಯಿಗೆ ಮಾರಾಟ ಮಾಡಲು ಯೋಜಿಸಿದ್ದರು. ಮುಂಗಡವನ್ನೂ ತೆಗೆದುಕೊಂಡಿದ್ದರು. ಆದರೆ ಅವರ ಪತ್ನಿ ಮಾರಾಟಕ್ಕೆ ವಿರುದ್ಧವಾಗಿದ್ದರು. ಮೃತ ವಕೀಲರು ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರು. ಆದರೆ ಇತ್ತೀಚೆಗಷ್ಟೇ ಒಂದು ತಿಂಗಳ ಹಿಂದೆ ಕ್ಯಾನ್ಸರ್ ಮುಕ್ತರಾಗಿದ್ದರು. ಪೊಲೀಸರು ಅಪರಾಧ ನಡೆದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದ್ದಾರೆ ಮತ್ತು ಪ್ರಸ್ತುತ ತನಿಖೆ ನಡೆಯುತ್ತಿದೆ.












Click it and Unblock the Notifications