ಹೀಗೆ ಮಾಡಿದರೆ ಕ್ಯಾನ್ಸರ್ ವಾಸಿ ಆಗುತ್ತೆ ಎಂದ ಬಿಜೆಪಿ ಸಚಿವ
ಕ್ಯಾನ್ಸರ್, ಸದ್ಯ ಜಗತ್ತನ್ನು ಕಾಡುತ್ತಿರುವ ಮುಖ್ಯ ಕಾಯಿಲೆಗಳಲ್ಲಿ ಒಂದು. ವಿವಿಧ ರೀತಿಯ ಕ್ಯಾನ್ಸರ್ ವರ್ಷಕ್ಕೆ ಲಕ್ಷಾಂತರ ಮಂದಿಯನ್ನು ಬಲಿ ಪಡೆಯುತ್ತಿದೆ. ಕ್ಯಾನ್ಸರ್ ಗುಣಪಡಿಸಲು ಇನ್ನೂ ಸಾಕಷ್ಟು ಪ್ರಯೋಗಗಳು, ಪರೀಕ್ಷೆಗಳು ನಡೆಯುತ್ತಲೇ ಇವೆ. ಇಲ್ಲೊಬ್ಬರು ಬಿಜೆಪಿ ಸಚಿವರು ಮಾತ್ರ ಕ್ಯಾನ್ಸರ್ ಸುಲಭವಾಗಿ ಗುಣವಾಗುತ್ತದೆ ಎನ್ನುವ ರೀತಿ ಹೇಳಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಸಚಿವ ಸಂಜಯ್ ಸಿಂಗ್ ಗಂಗ್ವಾರ್ ಭಾನುವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕ್ಯಾನ್ಸರ್ ರೋಗಿಗಳು ಗೋಶಾಲೆಗಳನ್ನು ಸ್ವಚ್ಛಗೊಳಿಸಿ, ಅಲ್ಲಿ ಮಲಗುವುದರಿಂದ ತಮ್ಮ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ಹಸುಗಳನ್ನು ಸಾಕಿ ಅವುಗಳಿಗೆ ಮೇವು ಹಾಕುವ ಮೂಲಕ ರಕ್ತದ ಒತ್ತಡದ ಔಷಧಿಗಳ ಪ್ರಮಾಣವನ್ನು 10 ದಿನಗಳಲ್ಲಿ ಅರ್ಧಕ್ಕೆ ಕಡಿಮೆ ಮಾಡಬಹುದು ಎಂದು ಹೇಳಿದ್ದಾರೆ.

ತಮ್ಮ ಸ್ವಕ್ಷೇತ್ರವಾದ ಪಿಲಿಭಿತ್‌ನ ಪಕಾಡಿಯಾ ನೌಗಾವಾನ್‌ನಲ್ಲಿ ಗೋಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗೋಶಾಲೆಗಳ ಮಹತ್ವ ತಿಳಿಸುತ್ತಾ ಇಂತಹ ಹೇಳಿಕೆ ಕೊಟ್ಟಿದ್ದಾರೆ. ಜನರು ತಮ್ಮ ವಿವಾಹ ವಾರ್ಷಿಕೋತ್ಸವ ಮತ್ತು ಮಕ್ಕಳ ಜನ್ಮದಿನವನ್ನು ಗೋಶಾಲೆಗಳಲ್ಲಿ ಆಚರಿಕೊಳ್ಳಬೇಕು ಎಂದು ಕರೆ ನೀಡಿದರು.
ರಕ್ತದೊತ್ತಡ ಕಡಿಮೆಯಾಗುತ್ತಂತೆ
ತಮ್ಮ ಭಾಷಣ ಮುಂದುವರೆಸಿದ ಅವರು, ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿರುವವರು, ಈ ಗೋಶಾಲೆಯಲ್ಲಿ ಹಸುಗಳಿವೆ, ಇಲ್ಲಿ ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಬಂದು ಅವರುಗಳ ಬೆನ್ನು ಸವರಬೇಕು. ಆತ 20 ಎಂಜಿ ಡೋಸ್ ಔಷಧಿ ತೆಗೆದುಕೊಳ್ಳುತ್ತಿದ್ದರೆ 10 ದಿನಗಳಲ್ಲೇ ಔಷಧಿ ಪ್ರಮಾಣ 10 ಎಂಜಿಗೆ ಕಡಿಮೆಯಾಗುತ್ತದೆ ಎಂದು ಹೇಳಿದರು.
ಕ್ಯಾನ್ಸರ್ ರೋಗಿ ಗೋಶಾಲೆಯನ್ನು ಸ್ವಚ್ಛಗೊಳುಸಲು ಆರಂಭಿಸಿದರೆ ಮತ್ತು ಗೋಶಾಲೆಯಲ್ಲಿ ಮಲಗಲು ಶುರು ಮಾಡಿದರೆ, ಕ್ಯಾನ್ಸರ್ ಕೂಡ ಗುಣಮುಖವಾಗಲಿದೆ. ನೀವು ಹಸುವಿನ ಬೆರಣಿಯ ಹೊಗೆ ಹಾಕಿದರೆ ಸೊಳ್ಳೆಗಳ ಕಾಟದಿಂದ ಕೂಟ ಮುಕ್ತಿ ಪಡೆಯಬಹುದು. ಹಸುವಿನ ಹಾಲು, ಸಗಣಿ, ಗಂಜಳ ಎಲ್ಲವೂ ನಮಗೆ ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗೋಶಾಲೆಗಳಲ್ಲಿ ಜನ ತಮ್ಮ ವಾರ್ಷಿಕೋತ್ಸವ ಮತ್ತು ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕು. ಅಂತಹ ಸಂದರ್ಭದಲ್ಲಿ ಮೇವನ್ನು ಗೋಶಾಲೆಗಳಿಗೆ ದಾನ ಮಾಡುವ ಮೂಲಕ ನೆರವಾಗಬೇಕು ಎಂದು ಒತ್ತಾಯಿಸಿದರು.
ಆದರೆ ಸಚಿವನ ಹೇಳಿಕೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಗೋಶಾಲೆ ಸ್ವಚ್ಛಗೊಳಿಸಿದರೆ ಕ್ಯಾನ್ಸರ್ ಗುಣಮುಖವಾಗುವ ಹಾಗಿದ್ದರೆ ಆಸ್ಪತ್ರೆಗಳು, ಸಂಶೋಧನೆಗಳು, ನುರಿತ ವೈದ್ಯರ ಅಗತ್ಯ ಇರುತ್ತಿರಲಿಲ್ಲ. ಸಚಿವರಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಇಂತಹ ಹೇಳಿಕೆಗಳನ್ನು ಕೊಟ್ಟು ಜನರ ದಿಕ್ಕು ತಪ್ಪಿಸಬಾರದು ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications