Maha Kumbh Mela 2025: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಸಿಎಂ ಯೋಗಿ ಮಂತ್ರಿಮಂಡಲ
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳವು ವಿಶ್ವದ ಗಮನ ಸೆಳೆದಿದೆ. ಉತ್ತರ ಪ್ರದೇಶ ಸರ್ಕಾರದ ವತಿಯಿಂದ ಈ ಅದ್ಧೂರಿ ಕಾರ್ಯಕ್ರಮ ನೆರವೇರುತ್ತಿದೆ. ಇಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರು ಇಡೀ ಮಂತ್ರಿಮಂಡಲದೊಂದಿಗೆ ಪ್ರಯಾಗ್‌ರಾಜ್‌ಗೆ ತೆರಳಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.
ಇಂದು ಪ್ರಯಾಗರಾಜ್‌ನಲ್ಲಿ ಕ್ಯಾಬಿನೆಟ್ ಸಭೆ ನಡೆಸಿದ ನಂತರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಸಂಪುಟದ ಮಂತ್ರಿಗಳೊಂದಿಗೆ ವಿಶೇಷ ದೋಣಿಯ ಮೂಲಕ ತ್ರಿವೇಣಿ ಸಂಗಮಕ್ಕೆ ತೆರಳಿ ಪವಿತ್ರ ಸ್ನಾನ ಮಾಡಿದರು.ಸಿಎಂ ಯೋಗಿ ಆದಿತ್ಯನಾಥ್, ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ, ಬ್ರಜೇಶ್ ಪಾಠಕ್ ಹಾಗೂ ಸರ್ಕಾರ ಇನ್ನಿತರೆ ಮಂತ್ರಿಗಳು ತ್ರಿವೇಣಿ ಸಂಗಮದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಉತ್ತರ ಪ್ರದೇಶ ಕ್ಯಾಬಿನೆಟ್‌ನ ಎಲ್ಲ 54 ಸಚಿವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಈ ಕ್ಯಾಬಿನೆಟ್ ಸಭೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಹಲವಾರು ಮಹತ್ವದ ಪ್ರಸ್ತಾವನೆಗಳು ಮತ್ತು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ವರದಿಯಾಗಿದೆ. 62 ಕೈಗಾರಿಕಾ ತರಬೇತಿಗಳನ್ನು ಸ್ಥಾಪಿಸುವ ಯೋಜನೆಯನ್ನು ಸಹ ಸಿಎಂ ಯೋಗಿ ಬಹಿರಂಗಪಡಿಸಿದರು.
ಪ್ರಯಾಗ್‌ರಾಜ್ ಹಾಗೂ ಇಲ್ಲಿನ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಲ್ಲಿನ ಮೂಲಸೌಕರ್ಯಕ್ಕಾಗಿ, ಗಂಗಾ ಎಕ್ಸ್‌ಪ್ರೆಸ್‌ವೇ ವಿಸ್ತರಣೆ ಮಾಡಲಾಗುವುದು. ಗಂಗಾ ಎಕ್ಸ್‌ಪ್ರೆಸ್‌ವೇ ಪ್ರಯಾಗ್‌ರಾಜ್‌ನಿಂದ ಮಿರ್ಜಾಪುರದಿಂದ ಭದೋಹಿಯಿಂದ ಕಾಶಿ, ಚಂದೌಲಿಗೆ ಹೋಗಿ ಗಾಜಿಪುರದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಯೋಗಿ ಆದಿತ್ಯನಾಥ್ ಸಭೆ ಬಳಿಕ ಮಾಹಿತಿ ನೀಡಿದ್ದಾರೆ.
ಮೊದಲಿಗೆ ಮೇಳ ಪ್ರಾಧಿಕಾರದ ಸಭಾಂಗಣದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಬಳಿಕ ಸಭೆಯನ್ನು ಅರೈಲ್‌ನ ತ್ರಿವೇಣಿ ಸಂಕುಲಕ್ಕೆ ಸ್ಥಳಾಂತರಿಸಲಾಯಿತು. ಭದ್ರತೆ ದೃಷ್ಟಿಯಿಂದ ಸಂಗಮಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನಾನುಕೂಲವಾಗುವುದನ್ನು ತಪ್ಪಿಸಲು ಸಭೆಯ ಸ್ಥಳವನ್ನು ಬದಲಾಯಿಸಲಾಗಿದೆ ಎನ್ನಲಾಗಿದೆ.

ಈ ಹಿನ್ನೆಲೆ ಯೋಗಿ ಆದಿತ್ಯನಾಥ್ ಹಾಗೂ ಸಚಿವರು ಅರೈಲ್ ವಿಐಪಿ ಘಾಟ್‌ನಿಂದ ಸಂಗಮಕ್ಕೆ ವಿಶೇಷ ಬೋಟ್‌ಗಳ ಮೂಲಕ ತೆರಳಿದರು. ಬಳಿಕ ಯೋಗಿ ಆದಿತ್ಯನಾಥ್ ಹಾಗೂ ಸಂಪುಟ ಸದಸ್ಯರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇನ್ನು ಯೋಗಿ ಅವರು ತಮ್ಮ ಸಂಪುಟವನ್ನು ಎರಡನೇ ಬಾರಿ ಸಂಗಮಕ್ಕೆ ಕರೆತಂದಿದ್ದಾರೆ. 2019ರಲ್ಲೂ ಕುಂಭಮೇಳದ ಸಂದರ್ಭದಲ್ಲಿ ಯೋಗಿ ಅವರು ತಮ್ಮ ಸಚಿವರೊಂದಿಗೆ ಇಲ್ಲಿ ಪವಿತ್ರ ಸ್ನಾನ ಮಾಡಿದ್ದರು.
'ರಾಮಾಯಣ: ದಿ ಲೆಜೆಂಡ್ ಆಫ್ ಪ್ರಿನ್ಸ್ ರಾಮ' ಎನ್ನುವ ಇಂಡೋ-ಜಪಾನೀಸ್ ಅನಿಮೇಟೆಡ್ ಚಿತ್ರ ಕೂಡ ಇಂದು ಮಹಾ ಕುಂಭಮೇಳದಲ್ಲಿ ಅದ್ಭುತವಾದ ಚೊಚ್ಚಲ ಪ್ರದರ್ಶನವನ್ನು ಕಂಡಿದೆ. ಈ ವಿಶೇಷ ಪ್ರದರ್ಶನದಲ್ಲಿ 200ಕ್ಕೂ ಹೆಚ್ಚು ಶಾಲಾ ಮಕ್ಕಳು ಭಾಗವಹಿಸಿದ್ದರು. ಮೊದಲ ಬಾರಿಗೆ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ ಅನಿಮೇಷನ್ ಅನ್ನು ಇಲ್ಲಿ ಪರಿಚಯಿಸಲಾಗಿದೆ. ಮಹಾ ಕುಂಭ ಉತ್ಸವದಲ್ಲಿ ಚಲನಚಿತ್ರವೊಂದು ಪ್ರೀ-ರಿಲೀಸ್ ಆಗಿರುವುದು ಇದೇ ಮೊದಲು ಎನ್ನಲಾಗಿದೆ.












Click it and Unblock the Notifications