ಗೋಡ್ಸೆ ಭಾರತದ ಮಗ ಎಂದು ಉದ್ಧಟತನ ಮೆರೆದ ಕೇಂದ್ರ ಸಚಿವ ಗಿರಿರಾಜ್ ಸಿಂಗ್
ನವದೆಹಲಿ, ಜೂನ್ 10: ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಕುರಿತ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಕುರಿತು ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ವಿವಾದಕ್ಕೆ ತುಪ್ಪ ಸುರಿದಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮಹಾತ್ಮ ಗಾಂಧಿಯವರ ಹಂತಕ ಗೋಡ್ಸೆಯನ್ನು ಈ ದೇಶದ 'ಸಪೂತ್' (ಮಗ) ಎಂದು ಉದ್ಧಟತನ ಮೆರೆದಿದ್ದಾರೆ.
ಮಹಾತ್ಮ ಗಾಂಧಿಯವರ ಹಂತಕ ನಾಥೂರಾಮ್ ಗೋಡ್ಸೆ ಮೊಘಲ್ ದೊರೆಗಳಾದ ಬಾಬರ್ ಮತ್ತು ಔರಂಗಜೇಬ್ ಅವರಂತೆ ಆಕ್ರಮಣಕಾರರಲ್ಲ. ಏಕೆಂದರೆ ಅವರು ಭಾರತದಲ್ಲಿ ಜನಿಸಿದರು ಎಂದು ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಹೇಳಿದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಔರಂಗಜೇಬ್ ಕುರಿತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಹೇಳಿಕೆಗೆ ಪ್ರತಿಕ್ರಿಯಿಸುವಾಗ ಗೋಡ್ಸೆಗೆ ಸಂಬಂಧಿಸಿದ ಹೇಳಿಕೆಯ ಕುರಿತ ಪ್ರಶ್ನೆಗೆ ಸಿಂಗ್ ಅವರು ಉತ್ತರಿಸಿದರು. ಬಾಬರ್‌ನ ವಂಶಸ್ಥರು ಎಂದು ಹೆಮ್ಮೆಪಡುವ ವ್ಯಕ್ತಿಗಳನ್ನು ಭಾರತದ ನಿಜವಾದ ಪುತ್ರರೆಂದು ಪರಿಗಣಿಸಲಾಗುವುದಿಲ್ಲ ಎಂದು ಅವರು ಹೇಳಿದರು.
ಇದಲ್ಲದೆ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ವಿರುದ್ಧ ವಾಗ್ದಾಳಿ ನಡೆಸಿದ ಗಿರಿರಾಜ್ ಸಿಂಗ್ ಅವರು ದೇಶದ ಒಕ್ಕೂಟ ವ್ಯವಸ್ಥೆಯನ್ನು ಹಾನಿಗೊಳಿಸಿದ್ದಾರೆ. ಈ ಸರ್ಕಾರ ಮತಾಂತರಕ್ಕೆ ಉತ್ತೇಜನ ನೀಡುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ನಿಟ್ಟಿನಲ್ಲಿ ಕಠಿಣ ಕಾನೂನು ರಚಿಸಲಾಗುವುದು ಮತ್ತು ಕಾನೂನಿಗೆ ವಿರುದ್ಧವಾಗಿ ಮತಾಂತರ ಮಾಡುವವರು ಜೈಲಿಗೆ ಹೋಗುತ್ತಾರೆ. ರಾಜ್ಯದಲ್ಲಿ ಬಾಘೇಲ್ ನೇತೃತ್ವದ ಸರ್ಕಾರವು ಭಯೋತ್ಪಾದನೆಯನ್ನು ಹರಡುತ್ತಿದೆ ಮತ್ತು ಜನರನ್ನು ಮತಾಂತರಕ್ಕೆ ಒತ್ತಾಯಿಸುತ್ತಿದೆ ಎಂದು ಅವರು ಆರೋಪಿಸಿದರು.
ಕೊಲ್ಹಾಪುರ ಹಿಂಸಾಚಾರದ ನಂತರ ಔರಂಗಜೇಬ್‌ನ ಪ್ರತಿಕೃತಿಯನ್ನು ಸುಟ್ಟಿದ್ದಕ್ಕಾಗಿ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ನಾಯಕ ಸಂದೀಪ್ ದೇಶಪಾಂಡೆ ಮತ್ತು ಇತರ 8 ಜನರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆ 37, 135 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಎರಡು ಗುಂಪುಗಳ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ ಕೊಲ್ಹಾಪುರದಲ್ಲಿ ಬುಧವಾರ ಕರ್ಫ್ಯೂ ವಿಧಿಸಲಾಗಿತ್ತು. ನಂತರ ಪೊಲೀಸರು ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಾಠಿ ಚಾರ್ಜ್ ಮಾಡಿದರು. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹಿಂದಿನ ಮೊಘಲ್ ದೊರೆ ಔರಂಗಜೇಬ್ ಬೆಂಬಲಿಗರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಔರಂಗಜೇಬನ ಮಕ್ಕಳು ಹುಟ್ಟಿದ್ದಾರೆ. ಔರಂಗಜೇಬನ ಸ್ಟೇಟಸ್ ಇಟ್ಟುಕೊಂಡು ಪೋಸ್ಟರ್‌ಗಳನ್ನು ತೋರಿಸುತ್ತಿದ್ದಾರೆ. ಇದರಿಂದ ಉದ್ವಿಗ್ನತೆ ಉಂಟಾಗಿದೆ. ಈ ಔರಂಗಜೇಬನ ಮಕ್ಕಳು ಎಲ್ಲಿಂದ ಬರುತ್ತಾರೆ? ಇದರ ಹಿಂದೆ ಯಾರಿದ್ದಾರೆ? ? ನಾವು ಇದನ್ನು ಕಂಡುಹಿಡಿಯುತ್ತೇವೆ ಎಂದು ಫಡ್ನವಿಸ್ ನಾಗ್ಪುರದಲ್ಲಿ ಹೇಳಿದ್ದಾರೆ.












Click it and Unblock the Notifications