ಸೋನಿಯಾ ಹೀಯಾಳಿಸಿ, ಕ್ಷಮೆಯಾಚಿಸಿದ ಕೇಂದ್ರ ಸಚಿವ
ನವದೆಹಲಿ, ಏ 2: ಶಿಸ್ತಿನ ಪಕ್ಷ ಬಿಜೆಪಿಯ ಸಚಿವರೊಬ್ಬರು ತೀರಾ ಅಶಿಸ್ತಿನ ಹೇಳಿಕೆಯನ್ನು ನೀಡಿದ್ದಾರೆ. ಎಐಸಿಸಿ ಅಧ್ಯಕ್ಷೆ ಮತ್ತು ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿರುವ ಸೋನಿಯಾ ಗಾಂಧಿಯವರ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಸಚಿವರು ನಂತರ ಕ್ಷಮೆಯಾಚಿಸಿದ್ದಾರೆ.
ಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಯ ರಾಜ್ಯ ಸಚಿವ ಮತ್ತು ಬಿಹಾರದ ನಾವಡ ಕ್ಷೇತ್ರದ ಸಂಸದರೂ ಆಗಿರುವ ಗಿರಿರಾಜ್ ಸಿಂಗ್, ಸೋನಿಯಾ ಗಾಂಧಿಯವರ ಬಿಳಿ ಚರ್ಮದ ಬಗ್ಗೆ ಹೇಳಿಕೆ ನೀಡಿ ಸ್ವಪಕ್ಷೀಯರಿಂದ ಮತ್ತು ವಿರೋಧ ಪಕ್ಷಗಳಿಂದ ತೀವ್ರ ಟೀಕೆ ಎದುರಿಸುತ್ತಿದ್ದಾರೆ.
ತನ್ನ ಹೇಳಿಕೆ ವಿರುದ್ದ ಆಕ್ರೋಶ ಹೆಚ್ಚುತ್ತಿದ್ದನ್ನು ಅರಿತ ಗಿರಿರಾಜ್ ಸಿಂಗ್, ನನ್ನ ಹೇಳಿಕೆಯ ಉದ್ದೇಶ ಅದಾಗಿರಲಿಲ್ಲ, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎನ್ನುವ standard ಡೈಲಾಗನ್ನು ಉದುರಿಸಿದ್ದಾರೆ.
ಗಿರಿರಾಜ್ ಸಿಂಗ್ ಅವರು ತಾವು ನೀಡಿದ್ದ ಹೇಳಿಕೆಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮತ್ತು ಕ್ಷಮೆಯನ್ನೂ ಯಾಚಿಸಿದ್ದಾರೆ. ಇದು ಈಗ ಮುಗಿದ ಅಧ್ಯಾಯ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಮ್ ಮಾಧವ್ ಘಟನೆಗೆ ಮಂಗಳ ಹಾಡಲು ಮುಂದಾಗಿದ್ದಾರೆ.
ನರೇಂದ್ರ ಮೋದಿಯವರನ್ನು ವಿರೋಧಿಸುವವರು ಈ ದೇಶದಲ್ಲಿ ಇರಲು ಲಾಯಕಿಲ್ಲ ಎಂದು ಈ ಹಿಂದೆ ಕೂಡಾ ವಿವಾದಕಾರಿ ಹೇಳಿಕೆ ನೀಡಿ ಗಿರಿರಾಜ್ ಸಿಂಗ್ ಸುದ್ದಿಯಾಗಿದ್ದರು.
ಸಚಿವ ಗಿರಿರಾಜ್ ಸಿಂಗ್ ಹೇಳಿದ್ದೇನು?

ಮೊಬೈಲ್ ಸ್ಚಿಚ್ ಆಫ್ ಮಾಡಿ
ಪಾಟ್ನಾದಿಂದ ಅರವತ್ತು ಕಿಲೋಮೀಟರ್ ದೂರದಲ್ಲಿರುವ ವೈಶಾಲಿಯಲ್ಲಿ ಸರಕಾರೀ ಕಾರ್ಯಕ್ರಮ ಮುಗಿಸಿ ಗಿರಿರಾಜ್ ಸಿಂಗ್, ಹಾಜೀಪುರದ ಸರಕಾರಿ ಅತಿಥಿ ಗೃಹದಲ್ಲಿ ತಂಗಿದ್ದರು. ಅಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದ ಗಿರಿರಾಜ್ ಮೊದಲು ನೀವು ನಿಮ್ಮ ಮೊಬೈಲ್ ಗಳನ್ನು ಸ್ವಿಚ್ ಆಫ್ ಮಾಡಿ, ನಾನು ನೀಡುವ ಹೇಳಿಕೆಯನ್ನು ಯಾರೂ ಪ್ರಸಾರ ಮಾಡಬಾರದು ಎಂದು ಮಾಧ್ಯಮದವರಿಗೆ ತಾಕೀತು ಮಾಡಿದ್ದರು.

ನಂತರ ಸೋನಿಯಾ ವಿರುದ್ದ ಹೇಳಿಕೆ
ನಂತರ ಮಾತನಾಡಲು ಆರಂಭಿಸಿದ ಗಿರಿರಾಜ್ ಸಿಂಗ್, ಸೋನಿಯಾ ಗಾಂಧಿ ಅವರಿಗೆ ಎಐಸಿಸಿ ಅಧ್ಯಕ್ಷೆ ಸ್ಥಾನ ಸಿಗಲು ಅವರ ಬಿಳಿ ಚರ್ಮವೇ ಕಾರಣ. ಒಂದು ವೇಳೆ ರಾಜೀವ್ ಗಾಂಧಿ ಅವರು ನೈಜೀರಿಯಾದ ಹೆಣ್ಣನ್ನು ಮದುವೆಯಾಗಿದ್ದರೆ ಅವರನ್ನು ಕಾಂಗ್ರೆಸ್ ನಾಯಕರು ತಮ್ಮ ಅಧ್ಯಕ್ಷೆ ಎಂದು ಒಪ್ಪಿಕೊಳ್ಳುತ್ತಿದ್ದರೇ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಗಿರಿರಾಜ್ ರಾಜೀನಾಮೆಗೆ ಆಗ್ರಹ
ಕಾಂಗ್ರೆಸ್ ನಾಯಕರು, ಗಿರಿರಾಜ್ ಸಿಂಗ್ ಅವರು ಈ ಬಗ್ಗೆ ಕೂಡಲೇ ಕ್ಷಮೆ ಯಾಚಿಸಬೇಕು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗಿರಿರಾಜ್ ಅವರನ್ನು ಸಂಪುಟದಿಂದ ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.

ಬೃಂದಾ ಕಾರಟ್
ಇದು ತುಂಬಾ ನೋವು ನೀಡುವ ಹೇಳಿಕೆ. ಈ ರೀತಿಯ ಹೇಳಿಕೆ ನೀಡಲು ಅವರಿಗೆ ಧೈರ್ಯವಾದರೂ ಹೇಗೆ ಬಂತು. ಇದೊಂದು ತೀರಾ ಕೀಳುಮಟ್ಟದ ಹೇಳಿಕೆ, ಮೋದಿ ಇಂತಹ ನಾಯಕರನ್ನು ತನ್ನ ಸಚಿವ ಸಂಪುಟದಲ್ಲಿ ಇನ್ನು ಇಟ್ಟುಕೊಂಡಿದ್ದಾರಲ್ಲಾ ಎಂದು ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್, ಗಿರಿರಾಜ್ ಮತ್ತು ಮೋದಿ ವಿರುದ್ದ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಭಾರೀ ಪ್ರತಿಭಟನೆ
ಕಾಂಗ್ರೆಸ್ಸಿನ ವಿದ್ಯಾರ್ಥಿ ಘಟಕ NSUI ಗಿರಿರಾಜ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಬೆಂಗಳೂರಿನಲ್ಲಿ ಗುರುವಾರ (ಏ 2) ಭಾರೀ ಪ್ರತಿಭಟನೆ ಹಮ್ಮಿಕೊಂಡಿತ್ತು.

ಆನಂದರಾವ್ ವೃತ್ತ
ಮಹಿಳೆಯೊಬ್ಬರಿಂದ ನಾವು ಈ ಭೂಮಿಗೆ ಬಂದಿದ್ದು ಎನ್ನುವುದನ್ನು ಅರಿಯದ ಬಿಜೆಪಿ ಸಚಿವ ಆಕ್ಷೇಪಣಾಕಾರಿ ಹೇಳಿಕೆ ನೀಡಿದ್ದಾರೆ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕೆಂದು NSUI ಸಂಘಟನೆಯ ಸದಸ್ಯರು ಬೆಂಗಳೂರಿನ ಆನಂದರಾವ್ ವೃತ್ತದ ಬಳಿ ಧರಣಿ ನಡೆಸಿದ್ದಾರೆ.












Click it and Unblock the Notifications