ಏರ್ ಇಂಡಿಯಾ ಸಂಪೂರ್ಣ ಖಾಸಗಿಗೆ; ಕೇಂದ್ರದಿಂದ ಮಹತ್ವದ ಘೋಷಣೆ
ನವದೆಹಲಿ, ಆಗಸ್ಟ್ 29: ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯನ್ನು ಸಂಪೂರ್ಣ ಖಾಸಗಿ ಅಥವಾ 100% ಖಾಸಗಿಗೆ ಒಪ್ಪಿಸುವ ಬಗ್ಗೆ ಸರಕಾರ ನಿರ್ಧಾರ ಮಾಡಲಿದೆ ನಾಗರಿಕ ವಿಮಾನ ಯಾನ ಖಾತೆ ರಾಜ್ಯ ಸಚಿವ ಹರ್ ದೀಪ್ ಸಿಂಗ್ ಪುರಿ ಗುರುವಾರ ಹೇಳಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಸಚಿವರ ಗುಂಪು ಸಭೆ ಸೇರುವ ಸಾಧ್ಯತೆ ಇದೆ. ನಾಗರಿಕ ವಿಮಾನ ಯಾನ ಸಚಿವಾಲಯದಿಂದ ಸಲ್ಲಿಸಿದ ಪ್ರಸ್ತಾವವನ್ನು ಪರಿಶೀಲಿಸುತ್ತಾರೆ. ಆ ಪ್ರಸ್ತಾವವನ್ನು ಈಚೆಗೆ ನಡೆದ ಸಭೆಯಲ್ಲಿ ಸಮಿತಿಯ ಕಾರ್ಯದರ್ಶಿಗಳು ಪರಿಶೀಲನೆ ಮಾಡಿದ್ದಾರೆ ಎಂದು ಪುರಿ ಹೇಳಿದ್ದಾರೆ.
ಬಾಕಿ ಮೊತ್ತ 4500 ಕೋಟಿ ರು ಪಾವತಿಸದ ಏರ್ ಇಂಡಿಯಾ
ಏರ್ ಇಂಡಿಯಾವನ್ನು ಖಾಸಗಿ ಮಾಡುವ ಬಗ್ಗೆ ಸರಕಾರ ನಿರ್ಧರಿಸಿದ್ದು, ಇದರಲ್ಲಿ ಬದಲಾವಣೆ ಇಲ್ಲ. ಇದು ಸಂಪೂರ್ಣ ಖಾಸಗಿ ಆಗಲಿದೆ. ಅತ್ಯಂತ ಕಡಿಮೆ ಸಮಯದಲ್ಲಿ ಸಾಧ್ಯವಿರುವ ಅತ್ಯುತ್ತಮ ವ್ಯವಹಾರವನ್ನು ನಿರ್ಧರಿಸಬೇಕಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದಾರೆ.
ಕಳೆದ ವರ್ಷ ಸರಕಾರವು ಏರ್ ಇಂಡಿಯಾದಲ್ಲಿನ ಷೇರು ಮಾರಾಟಕ್ಕೆ ಪ್ರಯತ್ನಿಸಿತ್ತು. ಆದರೆ ಖಾಸಗಿ ವಲಯದಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಏಕೆಂದರೆ ವಿಮಾನಯಾನ ಸಂಸ್ಥೆಗೆ 50,000 ಕೋಟಿ ರುಪಾಯಿಯ ದೊಡ್ಡ ಸಾಲದ ಹೊರೆ ಇತ್ತು ಹಾಗೂ ಸರಕಾರದಿಂದ ಶೇಕಡಾ 76ರಷ್ಟು ಮಾತ್ರ ತನ್ನ ಪಾಲಿನ ಷೇರು ಮಾರಾಟ ಮಾಡುವುದಾಗಿ ಹೇಳಿತ್ತು.