Vande Bharat Express: 200 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ನಿರ್ಮಾಣ
ನವದೆಹಲಿ, ಫೆಬ್ರವರಿ 03: ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರ ಶನಿವಾರ 2025-26ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಇಲಾಖೆಗೆ ಅನುದಾನವನ್ನು ನೀಡಲಾಗಿದೆ. ಬಜೆಟ್‌ನಲ್ಲಿ ವಂದೇ ಭಾರತ್ ರೈಲುಗಳ ಬಗ್ಗೆ ಮಾಡಿರುವ ಘೋಷಣೆ ಏನು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ದೇಶದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಅಲ್ಲದೇ ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ಭಾರತೀಯ ರೈಲ್ವೆ ತಯಾರು ಮಾಡಿದ್ದು, ಅವುಗಳ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಆದ್ದರಿಂದ ಬಜೆಟ್‌ನಲ್ಲಿ ಈ ಕುರಿತು ಯಾವ ಘೋಷಣೆ ಮಾಡಲಾಗುತ್ತದೆ? ಎಂದು ಜನರು ಕಾದು ನೋಡುತ್ತಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ರೈಲ್ವೆ ಯೋಜನೆಗಳಿಗೆ 2.52 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಮುಂದಿನ 2-3 ವರ್ಷದಲ್ಲಿ 200 ವಂದೇ ಭಾರತ್, 100 ಅಮೃತ್ ಭಾರತ್, 50 ನಮೋ ಭಾರತ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ವಂದೇ ಭಾರತ್ ರೈಲುಗಳು: ಸಚಿವ ಅಶ್ವಿನಿ ವೈಷ್ಣವ್ ಮಾಹಿತಿಯಂತೆ ಹೊಸ ರೈಲು ಯೋಜನೆಗಳಿಗೆ ಬಜೆಟ್‌ನಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. 17,500 ಸಾಮಾನ್ಯ ಬೋಗಿ, 200 ವಂದೇ ಭಾರತ್, 100 ಅಮೃತ್ ಭಾರತ್ ರೈಲುಗಳನ್ನು ನಿರ್ಮಾಣ ಮಾಡಲಾಗುತ್ತದೆ.
2025-26ರಲ್ಲಿ 2 ಸಾವಿರ ಬೋಗಿಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಸಾಮಾನ್ಯ ಬೋಗಿಗಳ ತಯಾರಿ ಈಗಾಗಲೇ ಪ್ರಗತಿಯಲ್ಲಿದೆ. ಮಾರ್ಚ್ 31ರೊಳಗೆ ಈ ಮಾದರಿಯ 1400 ಬೋಗಿ ತಯಾರಾಗಲಿದೆ.
ವಂದೇ ಭಾರತ್ ರೈಲುಗಳ ಜೊತೆಗೆ ಕಡಿಮೆ ದೂರದ ನಗರಗಳನ್ನು ನಾವು ಅಮತ್ ಭಾರತ್ ರೈಲುಗಳ ಮೂಲಕ ತಲುಪಲು ಪ್ರಯತ್ನಿಸಲಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಆದರೆ ಬಜೆಟ್‌ನಲ್ಲಿ ಹೊಸದಾಗಿ ಯಾವ ಮಾರ್ಗದಲ್ಲಿವ ವಂದೇ ಭಾರತ್ ರೈಲುಗಳನ್ನು ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿಲ್ಲ.
ಸದ್ಯ ದೇಶದಲ್ಲಿ ಸಂಚಾರಕ್ಕೆ ತಯಾರಾಗಿರುವ ವಂದೇ ಭಾರತ್ ರೈಲು ಮಾರ್ಗ ಜಮ್ಮಿವಿನ ಕಾತ್ರಾ ಮತ್ತು ಶ್ರೀನಗರ. ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವೂ ಯಶಸ್ವಿಯಾಗಿ ನಡೆದಿದೆ. ಈ ರೈಲು ವಿಶ್ವದ ಅತ್ಯಂತ ಎತ್ತರದ ಚೆನಾಬ್ ನದಿಯ ಮೇಲಿನ ಕಮಾನು ಸೇತುವೆ ಮೇಲೆ ಹಾದು ಹೋಗಲಿದೆ.
ಬಜೆಟ್‌ನಲ್ಲಿ ಹಲವು ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಹೊಸ ಮಾರ್ಗ ನಿರ್ಮಾಣ, ದ್ವಿಪಥ ಮತ್ತು ಚತುಷ್ಪಥ ಕಾಮಗಾರಿ, ನಿಲ್ದಾಣಗಳ ನವೀಕರಣ, ಮೇಲ್ಸೇತುವೆ ಹಾಗೂ ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ಮಾಹಿತಿಯಂತೆ ವಂದೇ ಭಾರತ್ ಸ್ಲೀಪರ್ ರೈಲುಗಳು ಸಹ ಸಂಚಾರಕ್ಕೆ ಸಿದ್ಧವಾಗಿವೆ. ಹಲವು ಪ್ರಾಯೋಗಿಕ ಸಂಚಾರವನ್ನು ರೈಲು ಈಗಾಗಲೇ ಪೂರ್ಣಗೊಳಿಸಿದ್ದು, ಅಧಿಕೃತವಾಗಿ ರೈಲುಗಳ ಸಂಚಾರಕ್ಕೆ ಚಾಲನೆ ನೀಡಬೇಕಿದೆ. ವಂದೇ ಭಾರತ್ ಸ್ಲೀಪರ್ ಮಾದರಿ ರೈಲುಗಳನ್ನು ದೀರ್ಘ ಮತ್ತು ಮಧ್ಯಮ ದೂರದ ಪ್ರಯಾಣಕ್ಕಾಗಿ ತಯಾರು ಮಾಡಲಾಗಿದೆ. ಈ ರೈಲುನ ಆಧುನಿಕ ತಂತ್ರಜ್ಞಾನ ವೈಶಿಷ್ಟ್ಯಗಳು ಮತ್ತು ಪ್ರಯಾಣಿಕರ ಸೌಕರ್ಯಗಳು ಉತ್ತಮ ಪ್ರಯಾಣದ ಅನುಭವ ನೀಡುತ್ತವೆ ಎಂದು ಸರ್ಕಾರ ಹೇಳಿದೆ.












Click it and Unblock the Notifications