ಬಜೆಟ್: ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆಯಾ ಮೋದಿ ಸರ್ಕಾರ?
ನವದೆಹಲಿ, ಫೆಬ್ರವರಿ 01: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ 2019 ರ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆಯಾ? ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಲ್ಲ ಮತದಾರರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಈ ಬಾರಿಯ ಬಜೆಟ್ ಮಂಡನೆಯಾಗಿದೆಯಾ?
ಇಂದು(ಫೆ.1) 2018-19 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ಅರುಣ್ ಜೇಟ್ಲಿ ಬಜೆಟ್ ಪ್ರತಿ ಓದುತ್ತಿದ್ದಂತೆಯೇ ಹಾಗೊಂದು ಅನುಮಾನ ಆರಂಭವಾಗಿದೆ. ಸರ್ಕಾರ ಮುಖ್ಯವಾಗಿ ಮಹಿಳೆ, ರೈತರು, ಬಡವರನ್ನೇ ಕೇಂದ್ರೀಕರಿಸಿ ಬಜೆಟ್ ಮಂಡನೆ ಮಾಡಿರುವುದು ಈ ಸಂಶಯಕ್ಕೆ ಪುಷ್ಠಿ ನೀಡಿದೆ.
ಬಡವರಿಗೆ ಗಗನ ಕುಸುಮ ಎನ್ನಿಸಿದ್ದ ದುಬಾರಿ ಆರೋಗ್ಯ ಸೌಲಭ್ಯಗಳನ್ನ ಕಡಿಮೆ ಬೆಲೆಗೆ ಒದಗಿಸುವ ಅತೀ ಮಹತ್ವದ ಯೋಜನೆಯನ್ನೂ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಅಷ್ಟಕ್ಕೂ ಸರ್ಕಾರ ಚುನಾವಣೆಯನ್ನು ಕೇಂದ್ರೀಕರಿಸಿ ತಂದಿರಬಹುದಾದ ಯೋಜನೆಗಳು ಯಾವವು..?

ಅನ್ನದಾತನಿಗೆ 'ನಮೋ' ನಮಃ
ಈ ಬಾರಿಯ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡುವುದಾಗಿ ಮೊದಲಿನಿಂದಲೂ ಕೇಂದ್ರ ಸರ್ಕಾರ ಹೇಳುತ್ತ ಬಂದಿದೆ. ಅದರಲ್ಲೂ ಅನ್ನದಾತ ತನ್ನ ಮೊದಲ ಆದ್ಯತೆ ಎಂದಿದ್ದ ಸರ್ಕಾರ ಕೃಷಿ ಮಾರುಕಟ್ಟೆ, ಸಾವಯವ ಕೃಷಿಗೆ ಪ್ರೋತ್ಸಾಹ, ಎಪಿಎಂಸಿ, ರಫ್ತು ಪ್ರೋತ್ಸಾಹಕ್ಕೆ ಪೂರಕವಾದ ಅಂಶಗಳನ್ನು ಘೋಷಿಸಿದೆ. ಸಾವಯವ ಕೃಷಿಗೂ ಹೆಚ್ಚಿನ ಒತ್ತು ನೀದಲು ನಿರ್ಧರಿಸಿದೆ. ಕೃಷಿ ಮಾರ್ಕೆಟ್ ಫಂಡ್ ಸ್ಥಾಪಿಸಲು 2000 ಕೋಟಿ ರೂ.ಗಳನ್ನು ಮೀಸಲಿಡಲು ಸರ್ಕಾರ ನಿರ್ಧರಿಸಿದೆ. ಬಿದಿರು ಕೃಷಿಗೂ ಉತ್ತೇಜನ ನೀಡಲಾಗಿದೆ. ಕಿಸಾನ್ ಕಾರ್ಡ್ ಬಳಕೆಯ ವಿಧಾನವನ್ನೂ ಸರಳೀಕರಣಗೊಳಿಸಲಾಗುತ್ತದೆ. 100 ಕೋಟಿಗೂ ಹೆಚ್ಚು ಆದಾಯವಿರುವ ಕೃಷಿ ಉತ್ಪನ್ನ ಉತ್ಪಾದಿಸುವ ಕಂಪನಿಗಳಿಗೆ ಮೊದಲ 5 ವರ್ಷ ಶೇ.100ರಷ್ಟು ಆದಾಯ ತೆರಿಗೆ ವಿನಾಯಿತಿ ಸಹ ಘೋಷಿಸಿದೆ.

ಆರೋಗ್ಯ ಭಾಗ್ಯ !
ಬಡವರಿಗೆ ಉಚಿತ ಡಯಾಲಿಸಿಸ್, ಕಡಿಮೆ ಬೆಲೆಗೆ ಸ್ಟೆಂಟ್ ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಬಡ ಜನರ ಆರೋಗ್ಯಕ್ಕಾಗಿ 600 ಕೋಟಿ ರುಪಾಯಿ ಕ್ಷಯ ರೋಗಿಗಳಿಗಾಗಿ ನಿಗದಿ, ಪ್ರತಿ ಮೂರು ಕ್ಷೇತ್ರಗಳಿಗೆ 1 ಮೆಡಿಕಲ್ ಕಾಲೇಜು ನಿರ್ಮಾಣದ ವಾಗ್ದಾನ. 10 ಕೋಟಿ ಬಡ ಮತ್ತು ನಿರ್ಗತಿಕರ ಸಂರಕ್ಷಣೆಗಾಗಿ 5 ಲಕ್ಷ ರುಪಾಯಿ ಆಸ್ಪತ್ರೆ ವೆಚ್ಚಕ್ಕಾಗಿ ನೀಡಲಾಗುವುದು. ಇದಕ್ಕಾಗಿ 1200 ಕೋಟಿ ರುಪಾಯಿ ನೀಡಲಾಗುತ್ತಿದೆ ಇವಿಷ್ಟು ಬಡ ಜನರ ಆರೋಗ್ಯ ಕಾಪಾಡಲು ಸರ್ಕಾರ ಜಾರಿಗೊಳಿಸಲಿರುವ ಯೋಜನೆ.

ಮಹಿಳೆಯರಿಗೆ ಸಿಹಿಸುದ್ದಿ
ಉದ್ಯೋಗಸ್ಥ ಮಹಿಳೆಯರ ವೇತನದಲ್ಲಿ ಇಪಿಎಫ್ ಗಾಗಿ ಕಡಿತವಾಗುತ್ತಿದ್ದ ಶೇ.12 ರಷ್ಟು ಹಣವನ್ನು ಶೇ.8 ಕ್ಕೆ ಇಳಿಸುವ ಮೂಲಕ ಟೇಕ್ ಹೋಮ್ ಸಾಲರಿ ಹೆಚ್ಚಾಗುವಂತೆ ಮಾಡಿದೆ. ಇಪಿಎಫ್ ಕೊಡುಗೆಯಲ್ಲಿ ಉದ್ಯೋಗಿಯ ಕೊಡುಗೆಯಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಕಂಪನಿ ಅಥವಾ ಉದ್ಯೋಗದಾತ ನೀಡುವ ಕೊಡುಗೆ(ಶೇ.12)ಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಜೊತೆಗೆ ಉಜ್ವಲ ಯೋಜನೆಯಡಿ 8 ಕೋಟಿ ಮಹಿಳೆಯರಿಗೆ ನೈಸರ್ಗಿಕ ಗ್ಯಾಸ್ ನೀಡಲು ಸರ್ಕಾರ ತೀರ್ಮಾನಿಸಿದ್ದು, ಇದರಿಂದ ಅಡುಗೆ ಅನಿಲದ ವೆಚ್ಚ ಉಳಿತಾಯ ಮಾಡಬಹುದು.

ಪರಿಶಿಷ್ಟ ಜಾತಿ, ಪಂಗಡ ಅಭಿವೃದ್ಧಿಗೆ
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ಸರ್ಕಾರ ತಲಾ 56,619 ಕೋಟಿ ರೂ. ಮತ್ತು 39,135 ಕೋಟಿ ರೂ. ಮೀಸಲಿಟ್ಟಿದೆ. ಇದರ ಹಿಂದೆ ಎಸ್ ಸಿ, ಎಸ್ಸಿ ಮತ್ತು ಹಿಂದುಳಿದ ವರ್ಗಗಳ ಮತದಾರರನ್ನೂ ಸೆಳೆಯುವ ಪ್ರಯತ್ನವಿದ್ದರೆ ಅಚ್ಚರಿಯಿಲ್ಲ!












Click it and Unblock the Notifications