Ujjain Rape Case: ಅತ್ಯಾಚಾರ ಸಂತ್ರಸ್ತೆಗೆ ಸಹಾಯಹಸ್ತ ಚಾಚದವರ ವಿರುದ್ಧ ಕೇಸ್- ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು
ನವದೆಹಲಿ, ಸೆಪ್ಟೆಂಬರ್ 30: ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾದ 15 ವರ್ಷದ ಬಾಲಕಿಗೆ ಸಹಾಯ ಮಾಡದವರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ ಎಂದು ಮಧ್ಯಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು 'ಎನ್‌ಡಿಟಿವಿ'ಗೆ ತಿಳಿಸಿದ್ದಾರೆ.
ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ ಬಾಲಕಿಯು ಮನೆಮನೆಗೆ ತೆರಳಿ ಅಂಗಲಾಚಿದರೂ ಸಹಾಯಕ್ಕೆ ಬರದ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ತೀವ್ರ ರಕ್ತಸ್ರಾವವಾಗುತ್ತಿದ್ದರೂ ಆಕೆಗೆ ಸಹಾಯವನ್ನು ಮಾಡಲು ಮುಂದಾಗದ ಜನರ ವಿರುದ್ಧ ಮಕ್ಕಳ ಲೈಂಗಿಕ ದೌರ್ಜನ್ಯ ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಅಪರಾಧದ ಕುರಿತು ಗೊತ್ತಿದ್ದರೂ, ಪೊಲೀಸರಿಗೆ ಮಾಹಿತಿ ನೀಡದೇ ಇರುವುದು ಕಾನೂನು ರೀತಿ ತಪ್ಪು. ಅತ್ಯಾಚಾರದ ಬಗ್ಗೆ ಮಾಹಿತಿ ನೀಡಲು ವಿಫಲರಾದವರು ಮಕ್ಕಳ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಕ್ರಮವನ್ನು ಎದುರಿಸಬಹುದು ಎಂದು ಅವರು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಉಜ್ಜಯಿನಿಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಯಂತ್ ಸಿಂಗ್ ರಾಥೋಡ್, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತೆಯ ಬಗ್ಗೆ ಕಾಳಜಿ ತೋರಿಸದ ವ್ಯಕ್ತಿಗಳನ್ನು ಗುರುತಿಸಲಾಗಿದೆ. ಆಟೋ ರಿಕ್ಷಾ ಚಾಲಕನೊಬ್ಬನಿಗೆ ಸಂತ್ರಸ್ತೆಯ ಕುರಿತು ತಿಳಿದಿದ್ದರೂ ಆತ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಆತನ ವಿರುದ್ಧವೂ ಕ್ರಮ ಕೈಗೊಳ್ಳಲು ನಾವು ಮುಂದಾಗಿದ್ದೇವೆ' ಎಂದು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಅಧ್ಯಯನ ಮಾಡಲಾಗುವುದು. ಸಹಾಯಹಸ್ತ ಚಾಚದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಆಟೋ ರಿಕ್ಷಾ ಚಾಲಕನನ್ನು ರಾಕೇಶ್ ಮಾಳವೀಯ ಎಂದು ಗುರುತಿಸಲಾಗಿದೆ. ಆತ ತನ್ನ ವಾಹನದಲ್ಲಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಆಟೋ ಸೀಟಿನಲ್ಲಿ ರಕ್ತದ ಕಲೆಗಳನ್ನು ಕಂಡುಬಂದರೂ, ಆತ ಪೊಲೀಸರಿಗೆ ಮಾಹಿತಿ ನೀಡಿಲ್ಲವೆಂದು ತಿಳಿದುಬಂದಿದೆ. ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಇದೇ ರೀತಿ ಆಕೆಗೆ ಸಹಾಯ ಮಾಡಲು ನಿರಾಕರಿಸಿದ ಇತರರು ಕೂಡ ಪೊಲೀಸ್ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ.
ಮರಣದಂಡನೆಗೆ ಒತ್ತಾಯಿಸಿದ ಆರೋಪಿಯ ತಂದೆ
ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಭರತ್ ಸೋನಿ ಅವರ ತಂದೆ ತಮ್ಮ ಮಗನಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ.
'ಸಾವಿನ ಹೊರತಾಗಿ ಆತನಿಗೆ ಬೇರೆ ಶಿಕ್ಷೆ ಬೇಕಿಲ್ಲ. ಆತ ಎಸಗಿದ್ದು ಹೀನಾಯ ತಪ್ಪು. ಆತನಿಗೆ ಮರಣದಂಡನೆಯಂತಹ ಶಿಕ್ಷೆಯಾಗಬೇಕು. ನಾನಾಗಿದ್ದರೆ ಆತನನ್ನು ಕೊಲ್ಲುತ್ತಿದ್ದೆ' ಎಂದು ಆರೋಪಿಯ ತಂದೆ ರಾಜಾ ಸೋನಿ ತಿಳಿಸಿದ್ದಾರೆ.
ಪ್ರಮುಖ ಆರೋಪಿಯೂ ಆಟೋ ರಿಕ್ಷಾ ಚಾಲಕನಾಗಿದ್ದು, ಸುಮಾರು 700 ಸಿಸಿಟಿವಿ ಫೀಡ್‌ಗಳ ದೃಶ್ಯಾವಳಿಗಳ ಪರಿಶೀಲನೆ ಮಾಡುವ ಮೂಲಕ ಆತನನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣ ಬೆಳಕಿಗೆ ಬಂದಾಗಿನಿಂದ ಸುಮಾರು ಮೂವತ್ತು ಪೊಲೀಸರು ಮೂರ್ನಾಲ್ಕು ದಿನಗಳ ಕಾಲ ಮಲಗಿಯೇ ಇಲ್ಲವೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌವಾಣ್ ಹೇಳಿದ್ದಾರೆ. ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ, ಚೌವಾಣ್ ಮೇಲೆ ಒತ್ತಡ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications