Ujjain Hanuman: ಕ್ರೇನ್, ಜೆಸಿಬಿ ಬಂದರೂ ಸ್ಥಳಾಂತರಕ್ಕೆ ಕದಲದ ಖಡೇ ಹನುಮಾನ್ ವಿಗ್ರಹ: ಮುಂದೇನು?

Ujjain Hanuman:ರಸ್ತೆ ಅಗಲೀಕರಣಕ್ಕಾಗಿ 170 ವರ್ಷಗಳಷ್ಟು ಹಳೆಯದಾದ ಖಡೇ ಹನುಮಾನ್ ದೇವಸ್ಥಾನವನ್ನು ತೆರವುಗೊಳಿಸಿದರೂ, ಅಲ್ಲಿರುವ ಹನುಮಂತನ ವಿಗ್ರಹ ಮಾತ್ರ ಕದಲುತ್ತಿಲ್ಲ. ಕ್ರೇನ್‌, ಜೆಸಿಬಿ ಸೇರಿದಂತೆ ಭಾರಿ ಯಂತ್ರಗಳನ್ನು ಬಳಸಿ ನಾಲ್ಕು ಬಾರಿ ಸ್ಥಳಾಂತರಿಸಲು ಯತ್ನಿಸಿದರೂ ಪ್ರಯತ್ನ ವಿಫಲವಾಗಿದೆ. ಇದೀಗ ವಿಗ್ರಹದ ತಳಪಾಯವನ್ನು ಸ್ಕ್ಯಾನ್ ಮಾಡಿ ಸುರಕ್ಷಿತವಾಗಿ ಸ್ಥಳಾಂತರಿಸುವ ಸಾಧ್ಯತೆ ಪರಿಶೀಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವಿದ್ಯಮಾನ ಭಕ್ತರಲ್ಲಿ 'ದೈವ ಸಂಕೇತ'ದ ಚರ್ಚೆಯನ್ನೂ ಹುಟ್ಟುಹಾಕಿದೆ.

ರಸ್ತೆ ಅಗಲೀಕರಣಕ್ಕಾಗಿ ಸುಮಾರು 170 ವರ್ಷಗಳಷ್ಟು ಹಳೆಯದಾದ ಹನುಮಾನ್ ದೇವಸ್ಥಾನದ ಕಟ್ಟಡವನ್ನು ತೆರವುಗೊಳಿಸಿದರೂ, ಅದರಲ್ಲಿರುವ ಹನುಮಂತನ ವಿಗ್ರಹವನ್ನು ಸ್ಥಳಾಂತರಿಸಲು ಸಾಧ್ಯವಾಗದ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

Ujjain Hanuman 170-year-old Khadey Hanuman Idol Refuses to Move Despite Cranes JCBs What Happens Next

ದೇವಸ್ಥಾನದ ಸುತ್ತಮುತ್ತಲಿನ ಕಟ್ಟಡ ತೆರವು

2028ರಲ್ಲಿ ನಡೆಯಲಿರುವ ಸಿಂಹಸ್ಥ ಕುಂಭಮೇಳ ಹಿನ್ನೆಲೆಯಲ್ಲಿ ಉಜ್ಜಯಿನಿ ನಗರದ ರಸ್ತೆಗಳನ್ನು ಅಗಲೀಕರಣಗೊಳಿಸುವ ಕಾಮಗಾರಿ ನಡೆಯುತ್ತಿದೆ. ಕಂಥಾಲ್ ಚೌರಾಹಾ ಪ್ರದೇಶದಲ್ಲಿರುವ ಐತಿಹಾಸಿಕ ಖಡೆ ಹನುಮಾನ್ ದೇವಸ್ಥಾನ ಕೂಡ ಈ ಕಾಮಗಾರಿಯ ವ್ಯಾಪ್ತಿಗೆ ಬಂದಿದೆ. ರಸ್ತೆ ವಿಸ್ತರಣೆಗೆ ಅನುಕೂಲವಾಗುವಂತೆ ದೇವಸ್ಥಾನದ ಸುತ್ತಮುತ್ತಲಿನ ಕಟ್ಟಡದ ಬಹುತೇಕ ಭಾಗವನ್ನು ತೆರವುಗೊಳಿಸಲಾಗಿದೆ.

ವಿಗ್ರಹ ಸ್ಥಳಾಂತರಕ್ಕೆ ನಾಲ್ಕು ಬಾರಿ ಯತ್ನ

ದೇವಸ್ಥಾನದ ನಿಂತ ಭಂಗಿಯಲ್ಲಿರುವ ಹನುಮಂತನ ವಿಗ್ರಹವನ್ನು ತಂಕಿ ಚೌಕದ ಸಮೀಪ ಸುರಕ್ಷಿತವಾಗಿ ಸ್ಥಳಾಂತರಿಸಲು ಉಜ್ಜಯಿನಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ಯೋಜನೆ ರೂಪಿಸಿತ್ತು. ಆದರೆ, ಭಾರಿ ಯಂತ್ರಗಳನ್ನು ಬಳಸಿ ವಿಗ್ರಹವನ್ನು ಸ್ಥಳಾಂತರಿಸಲು ನಡೆಸಿದ ಪ್ರಯತ್ನಗಳು ಯಶಸ್ವಿಯಾಗಿಲ್ಲ. ‌

ಕಳೆದ ಕೆಲವು ದಿನಗಳಲ್ಲಿ ನಾಲ್ಕು ಬಾರಿ ವಿಗ್ರಹವನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗಿದ್ದು, ಪ್ರತಿಬಾರಿಯೂ ಅದು ಅಲುಗಾಡಲಿಲ್ಲ ಎನ್ನಲಾಗಿದೆ. ಹೀಗಾಗಿ ಸದ್ಯಕ್ಕೆ ಯಂತ್ರಗಳ ಬಳಕೆಯನ್ನು ಸ್ಥಗಿತಗೊಳಿಸಲಾಗಿದೆ.

ತಳಪಾಯ ಸ್ಕ್ಯಾನ್ ಮಾಡಲು ನಿರ್ಧಾರ

ವಿಗ್ರಹವನ್ನು ಹೇಗೆ ಸುರಕ್ಷಿತವಾಗಿ ಸ್ಥಳಾಂತರಿಸಬೇಕು ಎಂಬ ಬಗ್ಗೆ ಅಧಿಕಾರಿಗಳು ಹಾಗೂ ತಜ್ಞರು ಇದೀಗ ಪರಿಶೀಲನೆ ನಡೆಸುತ್ತಿದ್ದಾರೆ. ವಿಗ್ರಹದ ತಳಪಾಯವನ್ನು ಸ್ಕ್ಯಾನ್ ಮಾಡಿ ಅದರ ರಚನೆ ಮತ್ತು ನೆಲದೊಳಗಿನ ಸ್ಥಿತಿಯನ್ನು ತಿಳಿದುಕೊಳ್ಳಲು ನಿರ್ಧರಿಸಲಾಗಿದೆ.

ನೇರವಾಗಿ ವಿಗ್ರಹವನ್ನು ತೆರವುಗೊಳಿಸುವ ಮತ್ತೊಂದು ಪ್ರಯತ್ನ ನಡೆಸುವ ಮೊದಲು ಸಮಗ್ರ ಪರಿಶೀಲನೆ ಅಗತ್ಯ ಎಂದು ತಜ್ಞರು, ಪ್ರಾಚ್ಯವಸ್ತು ಸರ್ವೆಕ್ಷಣಾ ಅಧಿಕಾರಿಗಳು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ತಜ್ಞರ ಅಭಿಪ್ರಾಯಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.

Ujjain Hanuman:'ದೈವ ಸಂಕೇತ' ಎಂದ ಭಕ್ತರು

ವಿಗ್ರಹವನ್ನು ಹಲವು ಬಾರಿ ಪ್ರಯತ್ನಿಸಿದರೂ ಸ್ಥಳಾಂತರಿಸಲು ಸಾಧ್ಯವಾಗದಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಿಗ್ರಹ ತೆರವುಗೊಳಿಸುವ ಪ್ರಯತ್ನಗಳ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಕೆಲವರು ಇದನ್ನು 'ದೈವ ಸಂಕೇತ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇದೇ ವೇಳೆ ದೇವಸ್ಥಾನದ ಸುತ್ತಮುತ್ತ ಕೋತಿಗಳ ಗುಂಪೊಂದು ಸೇರಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.

ದೇವಸ್ಥಾನದ ಅರ್ಚಕ ಮಹೇಶ್ ಬೈರಾಗಿ ಅವರ ಪ್ರಕಾರ, ಹನುಮಂತನು ಇದೇ ಸ್ಥಳದಲ್ಲಿ ಇರಬೇಕೆಂಬ ದೈವ ಸಂಕಲ್ಪದ ಸೂಚನೆಯಾಗಿರಬಹುದು ಎಂಬ ಭಾವನೆ ಭಕ್ತರಲ್ಲಿ ಮೂಡಿದೆ. ಆದರೆ, ವಿಗ್ರಹ ಸ್ಥಳಾಂತರವಾಗದಿರುವುದಕ್ಕೆ ಧಾರ್ಮಿಕ ನಂಬಿಕೆಗಳ ಜೊತೆಗೆ ಅದರ ತಳಪಾಯದ ರಚನೆ ಅಥವಾ ನೆಲದೊಳಗಿನ ನಿರ್ಮಾಣವೂ ಕಾರಣವಾಗಿರಬಹುದೆಂಬ ಸಾಧ್ಯತೆಯನ್ನು ಅಧಿಕಾರಿಗಳು ಪರಿಗಣಿಸುತ್ತಿದ್ದಾರೆ.

Ujjain Hanuman:ಸಿಂಹಸ್ಥಕ್ಕೆ ಸಜ್ಜಾಗುತ್ತಿರುವ ಉಜ್ಜಯಿನಿ

ಉಜ್ಜಯಿನಿಯಲ್ಲಿ 12 ವರ್ಷಗಳಿಗೊಮ್ಮೆ ಸಿಂಹಸ್ಥ ಮಹೋತ್ಸವ ನಡೆಯುತ್ತದೆ. ನಾಲ್ಕು ಪ್ರಮುಖ ಕುಂಭಮೇಳಗಳಲ್ಲಿ ಒಂದಾಗಿರುವ ಸಿಂಹಸ್ಥದ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಉಜ್ಜಯಿನಿಗೆ ಆಗಮಿಸುತ್ತಾರೆ. ಶಿಪ್ರಾ ನದಿಯಲ್ಲಿ ಪವಿತ್ರ ಸ್ನಾನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

2028ರ ಸಿಂಹಸ್ಥದ ಹಿನ್ನೆಲೆಯಲ್ಲಿ ನಗರದಲ್ಲಿ ರಸ್ತೆ ಅಗಲೀಕರಣ, ಸಂಚಾರ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಇದೇ ಯೋಜನೆಯ ಭಾಗವಾಗಿ ಖಡೆ ಹನುಮಾನ್ ದೇವಸ್ಥಾನದ ವಿಗ್ರಹವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಇದೀಗ ಕುತೂಹಲದ ಕೇಂದ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+