ಜಾತಿ ನಿಂದನೆ ಕಾಯ್ದೆ ದುರ್ಬಳಕೆ ಆಗಲ್ಲ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸ್ಪಷ್ಟನೆ, ಸುಪ್ರೀಂ ಮೆಟ್ಟಿಲೇರಿದ ವಿವಾದ
ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ 2026ರ ಹೊಸ ನಿಯಮಾವಳಿಗಳು ((UGC Anti-Discrimination Rules) ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ನಿಯಮಗಳು ಕೇವಲ ನಿರ್ದಿಷ್ಟ ವರ್ಗದ ಪರವಾಗಿದ್ದು, ಸಾಮಾನ್ಯ ವರ್ಗದ (General Category) ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆಯಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ಆತಂಕದ ನಡುವೆಯೇ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಚೆನ್ನೈನಲ್ಲಿ ಮಹತ್ವದ ಸ್ಪಷ್ಟನೆ ನೀಡಿದ್ದಾರೆ.
"ಯಾವುದೇ ಕಾರಣಕ್ಕೂ ತಾರತಮ್ಯದ ಹೆಸರಿನಲ್ಲಿ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ. ಇದನ್ನು ಖಚಿತಪಡಿಸಿಕೊಳ್ಳುವುದು ಯುಜಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ. ಎಲ್ಲಾ ಕ್ರಮಗಳನ್ನು ಸಂವಿಧಾನದ ವ್ಯಾಪ್ತಿಯಲ್ಲೇ ಕೈಗೊಳ್ಳಲಾಗುವುದು" ಎಂದು ಪ್ರಧಾನ್ ತಿಳಿಸಿದ್ದಾರೆ. ಅಲ್ಲದೆ, ಈ ವಿಷಯವು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿದೆ ಎಂದು ಅವರು ವಿದ್ಯಾರ್ಥಿಗಳಿಗೆ ಅಭಯ ನೀಡಿದ್ದಾರೆ.

ವಿವಾದಕ್ಕೆ ಕಾರಣವಾದ ಜನವರಿ 13ರ ಅಧಿಸೂಚನೆ
ಯುಜಿಸಿ ಜನವರಿ 13, 2026 ರಂದು 'ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜನ ನಿಯಮಗಳು-2026' (Promotion of Equity Regulations 2026) ಅನ್ನು ಅಧಿಸೂಚಿಸಿತ್ತು. ಈ ಹೊಸ ನಿಯಮಗಳ ಪ್ರಕಾರ:
ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ (OBC) ವಿದ್ಯಾರ್ಥಿಗಳ ದೂರುಗಳನ್ನು ಆಲಿಸಲು ವಿಶೇಷ ಸಮಿತಿಗಳನ್ನು ರಚಿಸಬೇಕು. ತಾರತಮ್ಯದ ದೂರು ಬಂದರೆ 24 ಗಂಟೆಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಆದರೆ, ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ತಾರತಮ್ಯ ಅನುಭವಿಸಿದರೆ ಅವರಿಗೆ ಇದೇ ರೀತಿಯ ರಕ್ಷಣೆ ಇದೆಯೇ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ ಎಂಬುದು ಪ್ರತಿಭಟನಾಕಾರರ ವಾದ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ವಿವಾದ
ಸಚಿವರ ಭರವಸೆಯ ನಡುವೆಯೇ, ಸಾಮಾಜಿಕ ಕಾರ್ಯಕರ್ತ ವಿನೀತ್ ಜಿಂದಾಲ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ. ಯುಜಿಸಿಯ ಹೊಸ ನೀತಿಯಲ್ಲಿರುವ ಒಂದು ಅಂಶವು "ಅಸಮಾನತೆಯಿಂದ ಕೂಡಿದೆ" ಎಂದು ಅವರು ಆರೋಪಿಸಿದ್ದಾರೆ.
ಅರ್ಜಿದಾರರ ಪ್ರಮುಖ ವಾದಗಳು: "ಜಾತಿ ಆಧಾರಿತ ತಾರತಮ್ಯ" ಎಂದರೆ ಕೇವಲ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗದವರ ಮೇಲಿನ ತಾರತಮ್ಯ ಎಂದು ಯುಜಿಸಿ ವ್ಯಾಖ್ಯಾನಿಸಿದೆ. ಇದರಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಅಥವಾ ಬೋಧಕರು ಜಾತಿ ನಿಂದನೆಗೆ ಒಳಗಾದರೆ ಅವರಿಗೆ ಸಾಂಸ್ಥಿಕ ರಕ್ಷಣೆ ಸಿಗುವುದಿಲ್ಲ. ಅಲ್ಲದೇ ಈ ನಿಯಮವು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು), 15(1)ನೇ ವಿಧಿ (ಜಾತಿ ಆಧಾರಿತ ತಾರತಮ್ಯ ನಿಷೇಧ) ಮತ್ತು 21ನೇ ವಿಧಿ (ಘನತೆಯಿಂದ ಬದುಕುವ ಹಕ್ಕು) ಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮಧ್ಯಂತರ ಪರಿಹಾರಕ್ಕೆ ಮನವಿ
ವಿವಾದ ಬಗೆಹರಿಯುವವರೆಗೆ, ಯುಜಿಸಿ ನಿಯಮಗಳ ಅಡಿಯಲ್ಲಿ ಸ್ಥಾಪಿಸಲಾಗುವ 'ಸಮಾನ ಅವಕಾಶ ಕೋಶ' (Equal Opportunity Centres), ಹೆಲ್ಪ್‌ಲೈನ್‌ಗಳ ವ್ಯವಸ್ಥೆಯು ಯಾವುದೇ ಜಾತಿ ಭೇದವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಿರಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಸದ್ಯ ದೇಶದ ಹಲವೆಡೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳು ಈ ನಿಯಮಗಳನ್ನು ವಿರೋಧಿಸುತ್ತಿದ್ದರೆ, ಮತ್ತೊಂದೆಡೆ ದಲಿತ ಮತ್ತು ಹಿಂದುಳಿದ ವರ್ಗದ ಸಂಘಟನೆಗಳು ಇದನ್ನು ಸ್ವಾಗತಿಸಿವೆ. ಈ ಗೊಂದಲದ ನಡುವೆ ಸಚಿವರ ಹೇಳಿಕೆ ಮತ್ತು ಸುಪ್ರೀಂ ಕೋರ್ಟ್‌ನ ಮುಂದಿನ ನಡೆ ಕುತೂಹಲ ಮೂಡಿಸಿದೆ.












Click it and Unblock the Notifications