ಪಕ್ಷದ ವೆಬ್‌ಸೈಟ್ ಮತ್ತು ಟ್ವಿಟರ್ ಖಾತೆಯ ಹೆಸರನ್ನು ಬದಲಾಯಿಸಿದ ಉದ್ಧವ್ ಠಾಕ್ರೆ!
ಮಹಾರಾಷ್ಟ್ರ ರಾಜಕೀಯ: ಟ್ವಿಟರ್‌ನಲ್ಲಿ ಪಕ್ಷದ ಹೆಸರನ್ನು ಶಿವಸೇನೆಯಿಂದ 'ಶಿವಸೇನೆ- ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಬದಲಾವಣೆ ಮಾಡಲಾಗಿದೆ.
ಚುನಾವಣಾ ಆಯೋಗದ ನಿರ್ಧಾರದ ನಂತರ ಶಿವಸೇನೆ ಮೇಲಿನ ಅಧಿಕಾರ ಮತ್ತು ಚುನಾವಣಾ ಚಿಹ್ನೆ ಎರಡನ್ನೂ ಕಳೆದುಕೊಂಡಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಿಟ್ಟು ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ.
ವಾಸ್ತವವಾಗಿ ಶಿವಸೇನೆಯ ವೆಬ್‌ಸೈಟ್ shivsena.in ಅನ್ನು ಅಳಿಸಲಾಗಿದೆ. ಇದಲ್ಲದೆ ಟ್ವಿಟರ್‌ನಲ್ಲಿ ಪಕ್ಷದ ಹೆಸರನ್ನು ಶಿವಸೇನೆಯಿಂದ 'ಶಿವಸೇನೆ- ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಎಂದು ಬದಲಾಯಿಸಲಾಗಿದೆ. ಅವರ ಟ್ವಿಟರ್ ಖಾತೆಯಿಂದ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗಿದೆ.
ಸೋಮವಾರ ಉದ್ಧವ್ ಠಾಕ್ರೆ ಬಣವು ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿತ್ತು. ಉದ್ಧವ್ ಠಾಕ್ರೆ ಬಣದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಲಾಗಿದೆ. ಮೊನ್ನೆಯಷ್ಟೇ ಚುನಾವಣಾ ಆಯೋಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರ ಬಣವೇ ನಿಜವಾದ 'ಶಿವಸೇನೆ' ಮತ್ತು ಚುನಾವಣಾ ಚಿಹ್ನೆ 'ಬಿಲ್ಲು-ಬಾಣ' ಎಂದು ಘೋಷಿಸಿತ್ತು.
ಇದರಿಂದ ಉದ್ಧವ್ ಠಾಕ್ರೆಗೆ ಭಾರೀ ಮುಖಭಂಗವಾಗಿದೆ. ಹೀಗಾಗಿ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧದ ತಮ್ಮ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಒಳಪಡಿಸುವಂತೆ ಉದ್ಧವ್ ಠಾಕ್ರೆ ಗುಂಪು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿತು. ಆದರೆ ನ್ಯಾಯಾಲಯ ಫೆಬ್ರವರಿ 21 ರಂದು ವಿಷಯವನ್ನು ವಿಚಾರಣೆ ನಡೆಸುವುದಾಗಿ ಹೇಳಿದೆ.

ಚುನಾವಣಾ ಆಯೋಗದ ನಿರ್ಧಾರದ ಬಗ್ಗೆ ಪ್ರಶ್ನೆ
ವಾಸ್ತವವಾಗಿ ಏಕನಾಥ್ ಶಿಂಧೆ ಮತ್ತು ಇತರ 15 ಬಂಡಾಯ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯೊಂದಿಗೆ ಈ ಹೊಸ ಪ್ರಕರಣವನ್ನು ಜೋಡಿಸುವ ಮೂಲಕ ಉದ್ಧವ್ ಠಾಕ್ರೆ ಗುಂಪು ಚುನಾವಣಾ ಆಯೋಗದ ನಿರ್ಧಾರವನ್ನು ತಡೆಯಲು ಪ್ರಯತ್ನಿಸುತ್ತಿದೆ.

ಸಂಜಯ್ ರಾವತ್ ಕಿಡಿ
ಸೋಮವಾರ ಪಕ್ಷದ ಸಂಸದ ಸಂಜಯ್ ರಾವತ್ ಕೂಡ ಈ ವಿಷಯವಾಗಿ ಬಿಜೆಪಿ ಮತ್ತು ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡರು. ಸಂಜಯ್ ರಾವತ್, 'ನೀವು ಶಿವಸೇನೆಯನ್ನು ಖರೀದಿಸಿ ಒಡೆಯುವ ಮೂಲಕ ನಮ್ಮನ್ನು ಗೇಲಿ ಮಾಡುತ್ತಿದ್ದೀರಿ, ಇದರ ಅರ್ಥವೇನು? ಶಿವಸೇನೆ ಕೊನೆಗೊಳ್ಳುವುದಿಲ್ಲ. ಶಿವಸೇನೆಯನ್ನು ಒಂದು ಕಿಡಿ ಅಥವಾ ಬೆಂಕಿಯಿಂದ ನಂದಿಸಲು ಆಗುವುದಿಲ್ಲ. ಶಿವಸೇನೆ ನೀವಂದುಕೊಂಡಷ್ಟು ಸುಲಭವಾಗಿ ಒಡೆಯಲು ಸಾಧ್ಯವಿಲ್ಲ. ಯಾಕೆಂದರೆ ಅದು ನೂರಾರು ಕೋಟಿ ಜನರ ಮಹಾರಾಷ್ಟ್ರದ ಸ್ವಾಭಿಮಾನ ಮತ್ತು ಹೆಮ್ಮೆ. ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರದ ಸ್ವಾಭಿಮಾನಕ್ಕಾಗಿ ಶಿವಸೇನೆಯನ್ನು ಸ್ಥಾಪಿಸಿದರು ಎಂದರು.

ಏಕನಾಥ್ ಶಿಂಧೆಯ ಬಣವೇ ನಿಜವಾದ ಶಿವಸೇನೆ
ಚುನಾವಣಾ ಆಯೋಗ ಶುಕ್ರವಾರ ಏಕನಾಥ್ ಶಿಂಧೆ ಅವರ ಬಣಕ್ಕೆ ಪಕ್ಷದ ಹೆಸರು ಮತ್ತು 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ಬಳಸಲು ಅನುಮತಿ ನೀಡಿದೆ. ಶಾಸಕಾಂಗ ವಿಭಾಗದಲ್ಲಿ ಪಕ್ಷದ ಸಂಖ್ಯಾ ಬಲವನ್ನು ಅವಲಂಬಿಸಿ ಈ ಆದೇಶವನ್ನು ನೀಡಲಾಗಿದೆ. ಅಲ್ಲಿ 55 ಶಾಸಕರ ಪೈಕಿ 40 ಶಾಸಕರು ಮತ್ತು 18 ಲೋಕಸಭಾ ಸದಸ್ಯರಲ್ಲಿ 13 ಸದಸ್ಯರ ಬೆಂಬಲವನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಹೊಂದಿದ್ದಾರೆ.

ಉದ್ಧವ್ ಠಾಕ್ರೆ ಬಣದ ಬೆಂಬಲಿತ ಶಾಸಕರು
ಶಿಂಧೆ ಬಣವನ್ನು ಬೆಂಬಲಿಸಿದ 40 ಶಾಸಕರು ಒಟ್ಟು 47,82,440 ಮತಗಳಲ್ಲಿ 36,57,327 ಮತಗಳನ್ನು ಗಳಿಸಿದ್ದಾರೆ. ಅಂದರೆ, ಇದು ಸುಮಾರು ಶೇ 76ರಷ್ಟು ಮತಗಳು ವಿಜೇತ ಶಾಸಕರ ಪರವಾಗಿ ಬಂದಿವೆ. ಇನ್ನು ಉದ್ಧವ್ ಠಾಕ್ರೆ ಬಣದಿಂದ ಬೆಂಬಲಿತವಾದ 15 ಶಾಸಕರು ಒಟ್ಟು 11,25,113 ಮತಗಳನ್ನು ಗಳಿಸಿದ್ದಾರೆ. ಈ ಆಧಾರದಲ್ಲಿ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಲಾಗಿದೆ ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ.












Click it and Unblock the Notifications