ದೆಹಲಿ; ಗುಂಡು ಹಾರಿಸಿ ಇಬ್ಬರು ಮಹಿಳೆಯರ ಹತ್ಯೆ
ನವದೆಹಲಿ, ಜೂನ್ 18; ನವದೆಹಲಿಯಲ್ಲಿ ಮುಂಜಾನೆ ಗುಂಡು ಹಾರಿಸಿ ಇಬ್ಬರು ಮಹಿಳೆಯರನ್ನು ಹತ್ಯೆ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಮತ್ತು ಆತನ ಸಹಚರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಮೃತಪಟ್ಟವರನ್ನು ಪಿಂಕಿ (30) ಮತ್ತು ಜ್ಯೋತಿ (29) ಎಂದು ಗುರುತಿಸಲಾಗಿದೆ. ನವದೆಹಲಿಯ ಡಾ. ಅಂಬೇಡ್ಕರ್ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರ್‌ಕೆ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ದಕ್ಷಿಣ ದೆಹಲಿಯ ಡಿಸಿಪಿ ಮನೋಜ್ ಸಿ. ಈ ಕುರಿತು ಮಾಹಿತಿ ನೀಡಿದ್ದಾರೆ. "ಮಹಿಳೆಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ" ಎಂದು ಹೇಳಿದ್ದಾರೆ.
ಹಣಕಾಸಿನ ವಿಚಾರಕ್ಕೆ ಕೊಲೆ?; ಕೊಲೆಯಾದ ಇಬ್ಬರು ಮಹಿಳೆಯರು ಸಹೋದರನ ಜೊತೆ ಹಣಕಾಸಿನ ವಿಚಾರಕ್ಕೆ ಜಗಳವಾಡಿದ್ದರು ಎಂಬ ಪ್ರಾಥಮಿಕ ಮಾಹಿತಿ ಸಿಕ್ಕಿದೆ. "ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ" ಎಂದು ಮನೋಜ್ ಸಿ. ಮಾಹಿತಿ ನೀಡಿದ್ದಾರೆ.
ಭಾನುವಾರ ಮುಂಜಾನೆ 4.40ರ ಸುಮಾರಿಗೆ ಈ ಘಟನೆ ನಡೆದಿದೆ. ಗುಂಡಿನ ದಾಳಿ ಬಳಿಕ ಸ್ಥಳೀಯರು ಇಬ್ಬರನ್ನು ಸಫ್ಧರ್ ಜಂಗ್ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಆರೋಪಿಗಳು ಮಹಿಳೆಯರ ಸಹೋದರನನ್ನು ಸಹ ಹತ್ಯೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ ಆತ ಸಿಗಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮೃತಪಟ್ಟ ಮಹಿಳೆಯರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ರಾಜ್ಯದ ಕಾನೂನು & ಸುವ್ಯವಸ್ಥೆ ನಿರ್ವಹಣೆ ಮಾಡುವ ಕೇಂದ್ರ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದ್ದಾರೆ.
"ದೆಹಲಿ ಜನರು ಅಸುರಕ್ಷಿತ ಭಾವನೆ ಎದುರಿಸುತ್ತಿದ್ದಾರೆ. ದೆಹಲಿಯ ಕಾನೂನು & ಸುವ್ಯವಸ್ಥೆಯನ್ನು ರಾಜ್ಯವೇ ಕಾಪಾಡಬೇಕು. ಬೇರೆಯವರು ಅಲ್ಲ. ಇದು ದೆಹಲಿ ಸರ್ಕಾರದ ವಿರುದ್ಧದ ಷಡ್ಯಂತ್ರದ ಭಾಗವಾಗಿದೆ. ಲೆಫ್ಟಿನೆಂಟ್ ಗೌರ್ನರ್‌ಗಿಂತ ಎಎಪಿ ಸರ್ಕಾರದ ಕೈಯಲ್ಲಿ ದೆಹಲಿಯ ಕಾನೂನು & ಸುವ್ಯವಸ್ಥೆ ಇದ್ದರೆ ಸುರಕ್ಷಿತವಾಗಿರುತ್ತಿತ್ತು" ಎಂದು ಅವರು ಸಿಎಂ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications