ಶವವಿದ್ದ ಸೂಟ್‌ಕೇಸ್ ಗಂಗಾ ನದಿಗೆ ಎಸೆಯಲು ಯತ್ನಿಸಿದ ಮಹಿಳೆಯರು
ಕೋಲ್ಕತ್ತಾ ಫೆಬ್ರವರಿ 25: ಕೋಲ್ಕತ್ತಾದಲ್ಲಿಂದು ಒಂದು ಭಯಾನಕ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಮೃತ ದೇಹವನ್ನು ವಿಲೇವಾರಿ ಮಾಡುವಾಗ ಸ್ಥಳೀಯ ಜನರು ತಾಯಿ ಮತ್ತು ಮಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಮಾಹಿತಿಯ ಪ್ರಕಾರ ಇಬ್ಬರೂ ಮಹಿಳೆಯರು ಕೋಲ್ಕತ್ತಾದ ಗಂಗಾ ನದಿಯಲ್ಲಿ ಶವವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಜನರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಹೌದು.. ಕೋಲ್ಕತ್ತಾದ ಕುಮಾರ್ತುಲಿ ಘಾಟ್‌ನಲ್ಲಿ ಶವವನ್ನು ವಿಲೇವಾರಿ ಮಾಡುವಾಗ ಸ್ಥಳೀಯ ಜನರು ತಾಯಿ ಮತ್ತು ಮಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇಬ್ಬರೂ ಮಹಿಳೆಯರು ಮೃತ ದೇಹವನ್ನು ಸೂಟ್‌ಕೇಸ್‌ನಲ್ಲಿ ತುಂಬಿಸಿ ನದಿಗೆ ಹಾಕಲು ಪ್ರಯತ್ನಿಸಿದ ವೇಳೆ ಸಿಕ್ಕಿಬಿದ್ದಿದ್ದಾರೆ. ಸ್ಥಳೀಯರ ದೂರಿನ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರೂ ಮಹಿಳೆಯರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಫಲ್ಗುಣಿ ಘೋಷ್ ಮತ್ತು ಆಕೆಯ ತಾಯಿ ಆರತಿ ಘೋಷ್ ಎಂದು ಗುರುತಿಸಲಾಗಿದೆ.

ಉತ್ತರ ಕೋಲ್ಕತ್ತಾದ ಕುಮಾರ್ತುಲಿ ಘಾಟ್‌ನಲ್ಲಿ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಮಹಿಳೆಯರು ಸ್ಥಳೀಯ ಜನರಿಗೆ ಮೊದಲು ಕಾಣಿಸಿದರು. ಇಬ್ಬರೂ ದೊಡ್ಡ ಟ್ರಾಲಿ ಬ್ಯಾಗನ್ನು ಹೊತ್ತುಕೊಂಡು ಗಂಗಾನದಿಯ ದಡದ ಕಡೆಗೆ ಹೋಗುತ್ತಿದ್ದರು. ಆದರೆ ಇವರಿಬ್ಬರಿಗೆ ಆ ಟ್ರಾಲಿ ಬ್ಯಾಗ್ ಎಳೆಯಲು ಆಗುತ್ತಿರಲಿಲ್ಲ.
ಆಗ ಸ್ಥಳೀಯರಿಗೆ ಅನುಮಾನ ಬಂತು. ಜನರು ಪ್ರಶ್ನಿಸಲು ಪ್ರಾರಂಭಿಸಿದಾಗ ಮಹಿಳೆಯರ ಉತ್ತರ ಸಮಂಜಸ ಎನಿಸಲಿಲ್ಲ. ಸ್ಥಳೀಯರು ಅನುಮಾನಗೊಂಡು ಬ್ಯಾಗ್ ತೆರೆಯಲು ಕೇಳಿದ್ದಾರೆ. ಆಗ ಮಹಿಳೆಯರು ಬ್ಯಾಗ್ ತೆರೆಯಲು ನಿರಾಕರಿಸಿದ್ದಾರೆ. ಅಲ್ಲದೆ ಸ್ಥಳೀಯರ ಪ್ರಶ್ನೆಗಳಿಗೆ ಇಬ್ಬರು ಉತ್ತರ ಕೊಡಲು ಆತಂಕಗೊಂಡಿದ್ದನ್ನು ನೋಡಿ ಜನರ ಅನುಮಾನ ಹೆಚ್ಚಾಗಿದೆ.
ಆಗ ಮಹಿಳೆ, ಸೂಟ್‌ಕೇಸ್‌ನಲ್ಲಿ ಇತ್ತೀಚೆಗೆ ಸತ್ತುಹೋದ ತನ್ನ ನಾಯಿಯ ದೇಹ ಇದೆ ಎಂದು ಹೇಳಿದ್ದಾಳೆ. ಇದು ಜನರ ಅನುಮಾನವನ್ನು ಮತ್ತಷ್ಟು ಹೆಚ್ಚಿಸಿದೆ. ಇದಾದ ನಂತರ ಜನರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರಾಲಿ ಬ್ಯಾಗ್ ಅನ್ನು ಬಲವಂತವಾಗಿ ತೆರೆದಾಗ ಅದರಲ್ಲಿ ರಕ್ತಸಿಕ್ತ ಮೃತದೇಹ ಪತ್ತೆಯಾಗಿದೆ. ಆಗ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಅಸ್ಸಾಂ ಮೂಲದ ಮೃತ ಸುಮಿತಾ ತನ್ನ ಪತಿಯಿಂದ ಬೇರ್ಪಟ್ಟು ಫೆಬ್ರವರಿ 11 ರಿಂದ ಕೋಲ್ಕತ್ತಾದ ತನ್ನ ಮನೆಯಲ್ಲಿ ತಾಯಿ ಮತ್ತು ಮಗಳೊಂದಿಗೆ ವಾಸಿಸುತ್ತಿದ್ದರು. ಫಲ್ಗುಣಿ ಹೇಳಿಕೆಯ ಪ್ರಕಾರ ಮೃತ ಸುಮಿತಾ ಅವರ ಮಾವನ ಸಹೋದರಿ.
ಸೋಮವಾರ ಸಂಜೆ ಫಲ್ಗುಣಿ ಜೊತೆ ನಡೆದ ತೀವ್ರ ವಾಗ್ವಾದದ ಸಂದರ್ಭದಲ್ಲಿ ಸುಮಿತಾ ಕೊಲೆಯಾಗಿದ್ದಾರೆ ಎಂದು ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. "ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಇಬ್ಬರ ನಡುವೆ ಜಗಳವಾಯಿತು" ಎಂದು ಪೊಲೀಸರು ತಿಳಿಸಿದ್ದಾರೆ.
ಫಲ್ಗುಣಿ ಸುಮಿತಾಳನ್ನು ಗೋಡೆಗೆ ತಳ್ಳಿ, ಅವಳು ಪ್ರಜ್ಞೆ ತಪ್ಪಿ ಬಿದ್ದಳು. ಅವಳಿಗೆ ಪ್ರಜ್ಞೆ ಬಂದಾಗ ಇಬ್ಬರ ನಡುವೆ ಮತ್ತೆ ಭೀಕರ ಜಗಳ ನಡೆದಿದೆ. ಈ ಸಮಯದಲ್ಲಿ ಫಲ್ಗುಣಿ ಸುಮಿತಾ ಅವಳ ಮುಖ ಮತ್ತು ಕುತ್ತಿಗೆಗೆ ಇಟ್ಟಿಗೆಯಿಂದ ಹೊಡೆದಿದ್ದರಿಂದ ಸುಮಿತಾ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ಇದರ ನಂತರ ಫಲ್ಗುಣಿ ಹಾಗೂ ಆರತಿ ಇಬ್ಬರು ಸೇರಿ ಮೃತ ದೇಹವನ್ನು ಟ್ರಾಲಿ ಚೀಲದಲ್ಲಿ ಹಾಕಿ ನದಿಗೆ ಎಸೆಯಲು ತೆಗೆದುಕೊಂಡು ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಯ ಸಮಯದಲ್ಲಿ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.












Click it and Unblock the Notifications