ಪುಲ್ವಾಮಾದಲ್ಲಿ ಭಾರೀ ಶಸ್ತ್ರಾಸ್ತ್ರ ಹೊಂದಿದ ಇಬ್ಬರು ಭಯೋತ್ಪಾದಕರ ಹತ್ಯೆ
ಶ್ರೀನಗರ, ನವೆಂಬರ್ 10 : ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭಾರೀ ಶಸ್ತ್ರಾಸ್ತ್ರ ಹೊಂದಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಭದ್ರತಾ ಸಿಬ್ಬಂದಿಗಳು ಶನಿವಾರ ಯಶಸ್ವಿಯಾಗಿದ್ದಾರೆ.
ಪುಲ್ವಾಮಾ ಜಿಲ್ಲೆಯ ಟೆಕ್ಕಿನ ಎಂಬ ಗ್ರಾಮದಲ್ಲಿ ಈ ಇಬ್ಬರು ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ದೊರೆಯುತ್ತಿದ್ದಂತೆ, ಭಾರತೀಯ ಸೇನಾ ಸಿಬ್ಬಂದಿ ಅವರ ಹುಡುಕಾಟಕ್ಕಿಳಿದಿದ್ದಾರೆ. ಪತ್ತೆಯಾದ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಂತೆ ಪ್ರತಿದಾಳಿ ನಡೆಸಿ ಅವರಿಬ್ಬರನ್ನು ಸೇನೆ ಕೊಂದು ಹಾಕಿದೆ. ಅವರಿಬ್ಬರ ಗುರುತು ಪತ್ತೆಯಾಗಬೇಕಿದೆ.
ಮಂಗಳವಾರ ಕೂಡ ಶೋಪಿಯನ್ ಜಿಲ್ಲೆಯಲ್ಲಿ ಪಾಕ್ ಸೇನೆಯನ್ನು ತ್ಯಜಿಸಿದ ಉಗ್ರ ಸೇರಿದಂತೆ ಇಬ್ಬರು ಹಿಜ್ಬುಲ್ ಮುಜಾಹಿದ್ದಿನ್ ಭಯೋತ್ಪಾದಕರನ್ನು ಭಾರತದ ಭದ್ರತಾ ಸಿಬ್ಬಂದಿ ಹತ್ಯೆ ಮಾಡಿದೆ.

ನವೆಂಬರ್ 1ರಂದು ಜಮ್ಮು ಮತ್ತು ಕಾಶ್ಮೀರದ ಬಿಜೆಪಿಯ ಕಾರ್ಯದರ್ಶಿ ಅನಿಲ್ ಪರಿಹಾರ್ ಮತ್ತು ಬಿಜೆಪಿಯಲ್ಲಿ ಮುಖಂಡರಾಗಿರುವ ಅವರ ಸಹೋದರ ಅಜೀತ್ ರನ್ನು ಕಿಶ್ತವಾರ್ ಜಿಲ್ಲೆಯಲ್ಲಿ ಉಗ್ರರು ಹತ್ಯೆ ಮಾಡಿದ ನಂತರ ಈ ಭಾಗದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪರಿಹಾರ್ ಸಹೋದರರ ಹತ್ಯೆಯಾದನಂತರ ಜಮ್ಮುವಿನಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಅಲ್ಲಿ ಕರ್ಫ್ಯೂ ಹೇರಲಾಗಿದ್ದು, ಇಂಟರ್ನೆಟ್ ಸೇವೆಯನ್ನು ರದ್ದುಗೊಳಿಸಲಾಗಿದೆ. ಜಮ್ಮು ಸೇರಿದಂತೆ ಉಳಿದ ಭಾಗಗಳಲ್ಲಿ ಕೂಡ ಇಂಟರ್ನೆಟ್ ವೇಗವನ್ನು ತಗ್ಗಿಸಲಾಗಿದೆ.












Click it and Unblock the Notifications