ಇಬ್ಬರು ಲಷ್ಕರ್ ಉಗ್ರರನ್ನು ಸದೆಬಡೆದ ಭಾರತೀಯ ಸೇನೆ
ಶ್ರೀನಗರ, ಸೆಪ್ಟೆಂಬರ್ 11: ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಂದು ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಲಷ್ಕರ್ ಇ ತೋಯ್ಬಾ ಉಗ್ರರನ್ನು ಭಾರತೀಯ ಸೇನೆಯ ಯೋಧರು ಸದೆಬಡಿದಿದ್ದಾರೆ.
ಹಂದ್ವಾರದ ಗಲೂರ ಪ್ರದೇಶದಲ್ಲಿ ಉಗ್ರರ ಇರುವಿಕೆ ಬಗ್ಗೆ ಮಾಹಿತಿ ಸಿಕ್ಕ ಬಳಿಕ, ಕಾರ್ಯಾಚರಣೆ ನಡೆಸಿದ ಯೋಧರು, ಉತ್ತರ ಕಾಶ್ಮೀರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಖಚಿತ ಸ್ಥಳವನ್ನು ಗುರುತಿಸಿಕೊಂಡು ಗುಂಡಿನ ಮಳೆಗೆರೆದರು.
ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಅವರಿದ್ದ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ವಕ್ತಾರರು ಹೇಳಿದ್ದಾರೆ.

ಮೃತ ಉಗ್ರರನ್ನು ಫುರ್ಗಾನ್ ರಶೀದ್ ಲೋನ್ ಅಲಿಯಾಸ್ ಆದಿಲ್ ಹಾಗೂ ಲಿಯಾಕತ್ ಅಹ್ಮದ್ ಲೋನ್ ಅಲಿಯಾಸ್ ಸಹಾಬಾ ಅಲಿಯಾಸ್ ಉಮರ್ ಖಾಲೀದ್ ಎಂದು ಗುರುತಿಸಲಾಗಿದೆ. ಇಬ್ಬರು ಕೂಡಾ ಲಷ್ಕರ್ ಜತೆಗೆ ಹಲವು ವರ್ಷಗಳಿಂದ ಗುರುತಿಸಿಕೊಂಡಿದ್ದರು ಎಂದು ವಕ್ತಾರರು ಹೇಳಿದರು.
ಕುಪ್ವಾರದ ಲಾಂಗೇಟ್ ನ ಶಾರ್ತ್ಪೋರಾದ ನಿವಾಸಿಯಾಗಿರುವ ಫುರ್ಗಾನ್ ಮೇಲೆ ಅನೇಕ ಕ್ರಿಮಿನಲ್ ಕೇಸ್ ಗಳಿವೆ. ಲಿಯಾಕತ್ -ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದ ಹರ್ವಾನ್ ನಿವಾಸಿಯಾಗಿದ್ದ. ಈತನ ಮೇಲೆ ಅನೇಕ ಅತ್ಯಾಚಾರ, ಕಿಡ್ನಾಪ್ ಪ್ರಕರಣಗಳು ದಾಖಲಾಗಿತ್ತು ಎಂದಿದ್ದಾರೆ.
ಸೈಯದ್ ಅಲಿ ಶಾ ಗಿಲಾನಿ ನೇತೃತ್ವದ ಹುರಿಯಾರ್ ಸಮ್ಮೇಳನದ ಕಾರ್ಯಕರ್ತನಾಗಿದ ಹಕೀಮ್ ಉರ್ ರಹ್ಮಾನ್ ಕೊಲೆ ಪ್ರಕರಣದಲ್ಲಿ ಲಿಯಾಕತ್ ಹೆಸರು ಕೇಳಿ ಬಂದಿತ್ತು.(ಪಿಟಿಐ)











Click it and Unblock the Notifications