ತಿರುಪತಿಯಲ್ಲಿ ಮತ್ತೊಂದು ಧಾರ್ಮಿಕ ನಗರ ನಿರ್ಮಾಣಕ್ಕೆ ಟಿಟಿಡಿ ಅಸ್ತು: ಮುಂಬೈನಲ್ಲೂ ತಿಮ್ಮಪ್ಪನ ದರ್ಶನ
ತಿರುಪತಿ: ಪ್ರಮುಖ ಹಾಗೂ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ದಕ್ಷಿಣ ಭಾರತದ ಪ್ರಮುಖ ದೇವಾಲಯಗಳ ಪೈಕಿ ತಿರುಮಲದಲ್ಲಿರುವ ತಿರುಪತಿ ದೇವಸ್ಥಾನಕ್ಕೆ (Tirupati Temple) ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಭಕ್ತರಿಗೆ ಮತ್ತಷ್ಟು ಅನುಕೂಲ, ಮೂಲಸೌಕರ್ಯ ಕಲ್ಪಿಸುವ ಮಹತ್ತರ ಉದ್ದೇಶದಿಂದ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (TTD) ಮಂಡಳಿಯು ಆಧ್ಯಾತ್ಮಿಕ ನಗರವನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಮೂಲಕ ಸಕಲ ಕೋಟಿ ಸದ್ಭಕ್ತರಿಗೂ ಸಿಹಿ ಸುದ್ದಿ ನೀಡಿದೆ.
ತಿರುಪತಿ ಬಳಿ 20 ಎಕರೆ ವಿಸ್ತೀರ್ಣದಲ್ಲಿ ಆಧ್ಯಾತ್ಮಿಕ ನಗರವನ್ನು ಸ್ಥಾಪಿಸಲು ಟಿಟಿಡಿ ತೀರ್ಮಾನಿಸಿದೆ. ತಿರುಮಲದ ಹೆಬ್ಬಾಗಿಲು ಎಂದು ಪ್ರಸಿದ್ಧವಾದ ಅಲಿಪಿರಿಯಲ್ಲಿ ಈ ಉದ್ದೇಶಿತ ಆಧ್ಯಾತ್ಮಿಕ ನಗರವನ್ನು ನಿರ್ಮಿಸಲು ಟಿಟಿಡಿ ಚಿಂತನೆ ನಡೆಸಿದೆ. ಈ ಯೋಜನೆ ಸಂಬಂಧ ಅಲಿಪಿರಿಯಲ್ಲಿರುವ ಶಿಲ್ಪಕಲಾ ಸಂಸ್ಥೆಯನ್ನು ಮೃಗಾಲಯ ಪಾರ್ಕ್ ರಸ್ತೆಯ ದೇವ್‌ಲೋಕ್ ಆವರಣಕ್ಕೆ ಸ್ಥಳಾಂತರಿಸಲಾಗುವುದು ಎಂದು ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅವರು ಹೇಳಿದರು.

ಆಧ್ಯಾತ್ಮಿಕ ನಗರವು ಭವಿಷ್ಯದಲ್ಲಿ ಸುಮಾರು 25,000 ಭಕ್ತರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಲಿದೆ. ಆ ಮಟ್ಟಿಗೆ ಬೃಹತ್ ನಗರ ಇಲ್ಲಿ ತಲೆ ಎತ್ತಲಿದೆ. ಮಾತ್ರವಲ್ಲದೇ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿಸಲು ಹಲವಾರು ದೈವಿಕ ವಿಷಯಗಳು ಈ ಆಧ್ಯಾತ್ಮಿಕ ನಗರದಲ್ಲಿರುವುಂತೆ ನೋಡಿಕೊಳ್ಳಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅವರು ಇತ್ತೀಚೆಗೆ ನಡೆದ ಸಭೆಯ ಬಳಿಕ ತಿಳಿಸಿದರು.
ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದ ಟಿಟಿಡಿ, 'ದೇವಾಲಯ ಮರಗಳು' ಉಪಕ್ರಮ ಆರಂಭಿಸಲು ಮುಂದಾಗಿದೆ. ಇದರಡಿ ದೇವಾಲಯಗಳಲ್ಲಿ ದ್ವಜಸ್ತಂಭಗಳಿಗೆ ಮರದ ದಿಮ್ಮಿಗಳನ್ನು ತಯಾರಿಸಲು ಬಳಸಲಾಗುವ ಪವಿತ್ರ ಮರಗಳನ್ನು ಮನೆಯಲ್ಲಿ ಬೆಳೆಸುವ ಉದ್ದೇಶ ಇದೆ. ಈ ಉಪಕ್ರಮ ಆರಂಭಕ್ಕೆ ಪಲಮನೇರ್ ಬಳಿ 100 ಎಕರೆ ಜಾಗ ಹಂಚಲು ನಿರ್ಣಯಿಸಲಾಗಿದೆ.
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಿದ್ದ ಅಡೆತಡೆಗಳು ಅಂತ್ಯ
ತಿರುಪತಿ ಬಳಿಯ ಶ್ರೀ ಪದ್ಮಾವತಿ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿದೆ. ಕಾಮಗಾರಿ ಪೂರ್ಣಗೊಳಿಸಲು ಎದುರಾಗಿದ್ದ ಅಡೆತಡೆಗಳು ನಿವಾರಣೆ ಆಗಿವೆ. ಅದಕ್ಕಾಗಿ ಟಿಟಿಡಿ 48 ಕೋಟಿ ರೂಪಾಯಿ ಮಂಜೂರು ಮಾಡಿ ಆಸ್ಪತ್ರೆ ಸ್ಥಾಪನೆಯ ದಾರಿಯನ್ನು ಸರಳಗೊಳಿಸಿದೆ. ಈ ಹಿಂದೆ ಈ ಆಸ್ಪತ್ರೆಗೆ ನಿರ್ಮಾಣಕ್ಕಾಗಿ ಟಿಟಿಡಿ ಈ ಬರೋಬ್ಬರಿ 230 ಕೋಟಿ ರೂಪಾಯಿ ಅನುದಾನ ಹಂಚಿತ್ತು.
ಮುಂಬೈನಲ್ಲೂ ತಿರುಪತಿ ತಿಮ್ಮಪ್ಪನ ದರ್ಶನ
ಟಿಟಿಡಿಯು ದೇಶದ ವಾಣಿಜ್ಯನಗರಿ ಎಂದು ಪ್ರಸಿದ್ಧಿ ಪಡೆದಿರುವ ಮುಂಬೈನ ಬಾಂದ್ರಾದಲ್ಲಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ 14 ಕೋಟಿ ರೂಪಾಯಿ ನೀಡಿತ್ತು. ಟಿಟಿಡಿ ವ್ಯಾಪ್ತಿಯ ಒಟ್ಟು 31 ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಗುಣಮಟ್ಟ, ಬದ್ಧತೆ ಹೆಚ್ಚಿಸಲು ಡಿಜಿಟಲ್ ತರಗತಿ ಕೊಠಡಿಗಳು ಮತ್ತು ಆಧುನಿಕ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಪರಿಚಯಿಸಲು ಶಿಕ್ಷಣ ಸಮಿತಿಯ ಶಿಫಾರಸು ಮಾಡಿತ್ತು. ಈ ಶಿಫಾರಸುಗಳಿಗೆ ಟಿಟಿಡಿ ಒಪ್ಪಿಗೆ ನೀಡಿದೆ. ಶೀಘ್ರವೇ ಈ ಎಲ್ಲ ಶಿಕ್ಷಣ ಸಂಸ್ಥೆಗಳು ಆಧುನಿಕವಾಗಿ ಮೇಲ್ದರ್ಜೆಗೆ ಏರಲಿವೆ.
ತಿರುಪತಿಯ ಶ್ರೀ ಪದ್ಮಾವತಿ ಮಹಿಳಾ ಪದವಿ ಕಾಲೇಜಿಗೆ ಸಂಬಂಧಿಸಿದಂತೆ ಹಾಸ್ಟೆಲ್ ಸೀಟುಗಳನ್ನು ಹೆಚ್ಚಿಸಲು ಚಿಂತನೆ ಮಾಡಲಾಗಿದೆ. ಅದರ ಭಾಗವಾಗಿ ಹೆಚ್ಚುವರಿ ಹಾಸ್ಟೆಲ್ ಬ್ಲಾಕ್‌ಗಳನ್ನು ನಿರ್ಮಿಸಿ ಸೀಟುಗಳನ್ನು 2,100 ರಿಂದ 2,370 ಕ್ಕೆ ಹೆಚ್ಚಿಸಲು ಸಭೆಯಲ್ಲಿ ತಿರ್ಮಾನಿಸಲಾಗಿದೆ. ಇದೆ ಕಾಲೇಜು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಮಧ್ಯಾಹ್ನ ಊಟ ಯೋಜನೆ ಆರಂಭಿಸುವ ಬಗ್ಗೆಯು ನಿರ್ಧರಿಸಲಾಗಿದೆ.
ಇಡೀ ತಿರುಮಲ ತಿರುಪತಿ ಬೆಟ್ಟವನ್ನು ಆಧ್ಯಾತ್ಮಿಕವಾಗಿ ಪ್ರಭಾವಗೊಳಿಸಲು ಇಲ್ಲಿನ ರಸ್ತೆಗಳು ಮತ್ತು ಪ್ರಮುಖ ಜಂಕ್ಷನ್‌ಗಳಿಗೆ ಆಧ್ಯಾತ್ಮಿಕ ಹಿನ್ನೆಲೆಯ ಹೆಸರುಗಳನ್ನು ನಾಮಕರಣ ಮಾಡಲು ಟಿಟಿಡಿ ನಿರ್ಧರಿಸಿದೆ. ಅದಕ್ಕಾಗಿ ಒಂದು ಸಮಿತಿ ರಚಿಸಲಾಗಿದೆ ಎಂದು ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ.












Click it and Unblock the Notifications