ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ತಿಮ್ಮಪ್ಪನ ಗರ್ಭಗುಡಿ 6 ತಿಂಗಳು ಬಂದ್‌ಗೆ ನಿರ್ಧಾರ!? ಕಾರಣ ಏನು?

|
Google Oneindia Kannada News

ಹೈದರಾಬಾದ್, ಡಿಸೆಂಬರ್ 26: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ.

ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಸ್ಥಾನದ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ ಗೋಪುರ- ಆನಂದ ನಿಲಯಂಗೆ ಚಿನ್ನದ ಲೇಪನ ಮಾಡುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ 2023ರಲ್ಲಿ ಲೇಪನ ಕಾರ್ಯ ಮುಗಿಯುವವರೆಗೆ ಗರ್ಭಗುಡಿ ಮುಚ್ಚಲು ನಿರ್ಧರಿಸಲಾಗಿದೆ. ಇದು ಸುಮಾರು 6-8 ತಿಂಗಳ ಕಾಲಾವಧಿಯನ್ನು ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಹಾಗಾದರೆ, ಈ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಸಹಜ. ಇದಕ್ಕಾಗಿ, ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

TTD Temple Sanctum To Close As Board Decides To Replace Gold Plating

ಇದಕ್ಕೂ ಮುನ್ನ 1958 ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಆ ಸಮಯದಲ್ಲಿ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಬೇಕಾಗಿತ್ತು. ಕ್ರಿ.ಶ 839 ರಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಅವರು ಮೊದಲ ಬಾರಿಗೆ ಚಿನ್ನದ ಲೇಪನವನ್ನು ಮಾಡಿದ್ದರು. ಲಭ್ಯವಿರುವ ದಾಖಲೆಗಳ ಪ್ರಕಾರ, ಅಂದಿನಿಂದ, 1958 ರ ಪ್ರಯತ್ನವನ್ನು ಒಳಗೊಂಡಂತೆ, ಇಲ್ಲಿನ ಗೋಪುರದ ಚಿನ್ನದ ಲೇಪನವನ್ನು ಏಳು ಬಾರಿ ಬದಲಾಯಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ.

2018 ರಲ್ಲಿ ಟಿಟಿಡಿ ಪ್ರಕಟಿಸಿದ ತಮಿಳು ವಿದ್ವಾಂಸ ಎಂ ವರದರಾಜನ್ ಅವರು ಬರೆದ ಆನಂದ ನಿಲಯಂ ವಿಮಾನದ ಮಹತ್ವ ಎಂಬ ಲೇಖನದ ಪ್ರಕಾರ, ತಿರುಮಲ ದೇವಸ್ಥಾನದ ಗೋಪುರವು ಮೂರು ಅಂತಸ್ತಿನ ರಚನೆಯಾಗಿದ್ದು, ಅದರ ಚೌಕದ ತಳವು 27.4 ಅಡಿ ಮತ್ತು ಪರಿಧಿಯು 37.8 ಅಡಿ. ಎತ್ತರವಿದೆ. ವರದರಾಜನ್‌ ಪ್ರಕಾರ, ಮೊದಲ ಎರಡು ಹಂತಗಳು ಆಯತಾಕಾರದಲ್ಲಿವೆ ಮತ್ತು ಮೂರನೆಯ ಹಂತವು ವೃತ್ತಾಕಾರದಲ್ಲಿದೆ.

ಇನ್ನೂ ತಿರುಪತಿ ತಿಮ್ಮಪ್ಪ ಮತ್ತು ಇತರೆ ದೇಗುಲಗಳ ನಿರ್ವಹಣೆಗಾಗಿ ಟಿಟಿಡಿಯನ್ನು 1932ರಲ್ಲಿ ರಚನೆ ಮಾಡಲಾಗಿತ್ತು. ಶತಮಾನದ ಹಿಂದೆ ಮಾಡಿದ ಚಿನ್ನದ ಲೇಪನ ಸವೆದು ಹೋಗುತ್ತಿದೆ. ಗರ್ಭಗುಡಿಯ ಛಾವಣಿಯ ಭಾಗಗಳು ಶಿಥಿಲಾವಸ್ಥೆಯಲ್ಲಿವೆ. ಮೇಲ್ಚಾವಣಿಯನ್ನು ಸರಿಪಡಿಸಲು ಮತ್ತು ಲೋಹಲೇಪನವನ್ನು ಬದಲಿಸುವ ಕೆಲಸವನ್ನು ಟಿಟಿಡಿ ಮಾಡುತ್ತಿದೆ. ಮೊದಲ ಬಾರಿಗೆ ಈ ರೀತಿ ಛಾವಣಿಯ ರಿಪೇರಿ ಮತ್ತು ಚಿನ್ನದ ಲೇಪನದ ಕಾರ್ಯವನ್ನು 1950ರಲ್ಲಿ ಟಿಟಿಡಿ ಆರಂಭಿಸಿತ್ತು. ಗೋಪುರದ ಚಿನ್ನದ ಲೇಪನಕ್ಕಾಗಿ ಸುಮಾರು 12,000 ತೊಲ ಶುದ್ಧ ಚಿನ್ನ ಮತ್ತು 12 ಟನ್ ತಾಮ್ರವನ್ನು ಈ ಹಿಂದೆ ಬಳಸಲಾಗಿದೆ ಎಂದು ಟಿಟಿಡಿ ದಾಖಲೆಗಳಿಂದ ತಿಳಿದುಬಂದಿದೆ.

TTD Temple Sanctum To Close As Board Decides To Replace Gold Plating

ಆ ಸಮಯದಲ್ಲಿ ಗೋಪುರಕ್ಕೆ ಯಾವುದೇ ಹಾನಿಯಾಗದಂತೆ ವಿವಿಧ ತಂತ್ರಗಳನ್ನು ಬಳಸಲಾಯಿತು. ಶತಮಾನಗಳ ಹಿಂದೆ ಸರಿಪಡಿಸಲಾದ ಸವೆದ ಫಲಕಗಳನ್ನು ತೆಗೆದುಹಾಕಲು ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಸಾಕಷ್ಟು ಹೆಣಗಾಡಬೇಕಾಯಿತು. ನಂತರ ಚಿನ್ನದ ಪದರಗಳಿಂದ ಆವೃತವಾದ ತಾಮ್ರದ ಫಲಕಗಳನ್ನು ಸ್ಥಾಪಿಸಲಾಯಿತು ಎಂದು ಮಾಜಿ ಹಿರಿಯ ಟಿಟಿಡಿ ಅಧಿಕಾರಿ ನೆನಪಿಸಿಕೊಂಡಿದ್ದಾರೆ. ಹಾನಿಗೀಡಾದ ಗೋಪುರದ ಭಾಗಗಳಿಗೆ ಸಮಯದಲ್ಲಿ ಸಿಮೆಂಟ್‌ ಕೂಡ ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಆ ಸಮಯದಲ್ಲಿ ದೇವಾಲಯಕ್ಕೆ ಭಕ್ತರು ಭೇಟಿ ನೀಡುವ ಸಂಖ್ಯೆ ಕಡಿಮೆ ಇದ್ದಕಾರಣ ಎಂಟು ವರ್ಷಗಳ ಕಾಲ ಮುಖ್ಯ ದೇಗುಲಕ್ಕೆ ಬಾಗಿಲು ಹಾಕುವುದು ಸಾಧ್ಯವಿತ್ತು. ಆಗ ಪ್ರತಿನಿತ್ಯ ಭೇಟಿ ನೀಡುವ ಸಂಖ್ಯೆ ನೂರಾರು ಆಗಿತ್ತು. ಆ ಸಮಯದಲ್ಲಿ ಸಂಜೆ ಆರು ಗಂಟೆಯ ನಂತರ ದೇವರ ದರ್ಶನ ಪಡೆಯಲು ಅವಕಾಶ ಇರಲಿಲ್ಲ. ಆದರೆ, ಈಗ ಸಾವಿರಾರು ಭಕ್ತರು ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ದಿನಕ್ಕೆ 60,000-70,000 ಭಕ್ತರು ಈಗ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ಮತ್ತು ರಜಾ ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ. ಇಂತಹ ಭಕ್ತರ ದಟ್ಟಣೆಯನ್ನು ಪರ್ಯಾಯ ದೇಗುಲದಲ್ಲಿ ನಿಭಾಯಿಸಲು ಸಾಧ್ಯವೇ? ಎಂಬ ಪ್ರಶ್ನೆಯೂ ಉಂಟಾಗಿದೆ.

"ಚಿನ್ನದ ಲೇಪನದ ಕೆಳಗಿರುವ ವಿಮಾನಗೋಪುರದ ಪರಿಸ್ಥಿತಿ ಹೇಗಿದೆ ಎಂದು ಯಾರಿಗೂ ಗೊತ್ತಿಲ್ಲ. ಕಳೆದ ಆರು ದಶಕದಿಂದ ಈ ಗೋಪುರವು ಹನ್ನೆರಡು ಟನ್‌ಗೂ ಅಧಿಕ ಭಾರವನ್ನು ಹೊತ್ತಿದೆ. ಈ ಗೋಪುರವನ್ನು ಸದೃಢಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ. ಈ ಕೆಲಸಕ್ಕೆ ಎಷ್ಟು ಸಮಯ ಬೇಕಾಗಬಹುದು ಎನ್ನುವ ಬ್ಲೂಪ್ರಿಂಟ್‌ನೊಂದಿಗೆ ಟಿಟಿಡಿ ಅಧಿಕಾರಿಗಳು ಬರಬೇಕಿದೆʼʼ ಎಂದು ಆರ್‌ಟಿಐ ಕಾರ್ಯಕರ್ತ ಬಿಕೆಎಸ್‌ಆರ್‌ ಐಯ್ಯಂಗಾರ್‌ ಹೇಳಿದ್ದಾರೆ.

ಚಿನ್ನದ ಲೇಪನ ಮಾಡುವ ಸಮಯದಲ್ಲಿಯೇ ಮುಖ್ಯ ದೇಗುಲದಲ್ಲಿ ದರ್ಶನ ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಐಯ್ಯಂಗಾರ್‌ ಈ ರೀತಿ ಹೇಳಿದ್ದಾರೆ. ಎರಡು ಕಾರಣದಿಂದ ಇದು ಸಾಧ್ಯವಿಲ್ಲ. ಮೊದಲನೆಯದು, ದೇವರ ಶಕ್ತಿಯನ್ನು ಬಾಲಾಯಾಲಂಗೆ ಕೊಂಡೊಯ್ಯುವ ಕಾರಣ ಭಕ್ತರು ಮುಖ್ಯ ದೇಗುಲಕ್ಕೆ ಪ್ರವೇಶಿಸುವುದಕ್ಕೆ ಅರ್ಥವಿಲ್ಲ. ಆ ಸಮಯದಲ್ಲಿ ಮೂಲಮೂರ್ತಿಗೆ ಯಾವುದೇ ಪ್ರಮುಖ ಪೂಜೆಗಳು, ಧಾರ್ಮಿಕ ಕ್ರಿಯೆಗಳು ನಡೆಯುವುದಿಲ್ಲ. ಎರಡನೆಯದು, ರಿಪೇರಿ ಕೆಲಸ ನಡೆಯುವ ಸಮಯದಲ್ಲಿ ಸಾವಿರಾರು ಭಕ್ತರು ದೇಗುಲ ಪ್ರವೇಶಿಸುವುದು ಸುರಕ್ಷತೆಯ ದೃಷ್ಟಿಯಿಂದ ಸರಿಯಲ್ಲ ಎಂದಿದ್ದಾರೆ.

English summary
Tirumala temple sanctum to close as board decides to replace gold plating,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X