Tirumala: ದೇಗುಲಕ್ಕೆ ಬರುವ ಭಕ್ತರ ಸುರಕ್ಷತೆಗಾಗಿ 500 ಸಿಸಿಟಿವಿ, ಡ್ರೋನ್ ಬಳಕೆಗೆ ನಿರ್ಧಾರ
ಬೆಂಗಳೂರು, ಆಗಸ್ಟ್ 16: ಆಂಧ್ರಪ್ರದೇಶದ ತಿರುಮಲ ತಿರುಪತಿ ಬೆಟ್ಟದಲ್ಲಿ ಇತ್ತೀಚೆಗೆ ಕಾಡು ಪ್ರಾಣಿಗಳ ಚಲನವಲನಗಳು ಹೆಚ್ಚಾಗಿವೆ. ಇತ್ತೀಚೆಗೆ ಆರು ವರ್ಷದ ಬಾಲಕಿ ಚಿರತೆಗೆ ಬಲಿಯಾದ ಬೆನ್ನಲ್ಲೆ ತಿರುಮಲ ತಿರುಪತಿ ದೇವಸ್ಥಾನವು (TTD) ಬೆಟ್ಟದ ಹತ್ತುವ ಸಮಯ ಬದಲಾವಣೆ ಮಾಡಿತ್ತು. ಇದೀಗ ಸಿಸಿಟಿವಿ ಅವಳವಡಿಕೆ, ಡ್ರೋನ್ ಬಳಕೆ ಸೇರಿದಂತೆ ಭಕ್ತರ ಸುರಕ್ಷತೆಗಾಗಿ ಹಲವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ತಿರುಪತಿ ಬಾಲಾಜಿಯ ದರ್ಶನಕ್ಕೆ ಅನೇಕ ಕಡೆಗಳಿಂದ ಲಕ್ಷಾಂತರ ಜನ ಬರುತ್ತಾರೆ. ಸಾವಿರಾರು ಜನರು ನಿತ್ಯ ಬೆಟ್ಟ ಹತ್ತುತ್ತಾರೆ. ಬೆಟ್ಟ ಹತ್ತುವ ಮಾರ್ಗದ ಮಧ್ಯೆ ಹುಲಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುತ್ತಿರುವುದು ಟಿಟಿಡಿಯನ್ನು ಚಿಂತೆಗೆ ತಳ್ಳಿದೆ. ಈ ಕುರಿತು ಸಭೆ ನಡೆಸಿ ಸುರಕ್ಷತೆ ದೃಷ್ಟಿಯಿಂದ ಒಂದಷ್ಟು ಕ್ರಮ ಕೈಗೊಳ್ಳಲು ಮುಂದಾಗಿದೆ.

ತಿರುಪತಿ ಹಾಗೂ ತಿರುಮಲ ಮಧ್ಯದ ಮಾರ್ಗದಲ್ಲಿ ಓಡಾಡುವವರ ಹಿತರಕ್ಷಣೆಗಾಗಿ 500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಕೆಗೆ ತೀರ್ಮಾನಿಸಲಾಗಿದೆ. ಭಕ್ತರು ಏಕಾಂಗಿಯಾಗಿ ತೆರಳದೇ ಜತೆಯಾಗಿ ಗುಂಪಾಗಿ ಬೆಟ್ಟ ಹತ್ತುವಂತೆ, ಓಡಾಡುವಂತೆ ಟಿಟಿಡಿ ಸೂಚನೆ ನೀಡಿದೆ.
ಬೇಲಿ ಹಾಕಿಸಲು ಟಿಟಿಡಿ ಸಿದ್ಧ
ಮಾರ್ಗದಲ್ಲಿ ಅಲ್ಲಲ್ಲಿ ಬೇಸ್ ಕ್ಯಾಂಪ್, ವೈದ್ಯಕೀಯ ಶಿಬಿರಗಳನ್ನು ಆರಂಭಿಸಲಾಗುವುದು. ಅಗತ್ಯವಿರುವ ಕಡೆಗಳಲ್ಲಿ ಹೆಚ್ಚು ಬೆಳಕು ನೀಡುವ ಫೋಕಸ್ ಲೈಟ್ ಅಳವಡಿಕೆ ಮಾಡಲಾಗುವುದು. ಅರಣ್ಯ ಇಲಾಖೆ ಒಪ್ಪಿದರೆ ರಸ್ತೆಗೆ ಕಾಡು ಪ್ರಾಣಿಗಳು ಬರದಂತೆ ಬೇಲಿ ಹಾಕಿಸಲು ನಾವು ಸಿದ್ದರಿದ್ದೇವೆ ಎಂದು ಟಿಟಿಡಿ ಅಧ್ಯಕ್ಷ ಕರುಣಾಕರ ರೆಡ್ಡಿ ತಿಳಿಸಿದರು.

ಭಕ್ತರ ಸುರಕ್ಷತೆಗಾಗಿ ಟಿಟಿಡಿ ಡ್ರೋನ್ ಬಳಸಲು ನಿರ್ಧರಿಸಿದೆ. ಅಲ್ಲದೇ ಗಾಳಿಗೋಪುರ, ಅಲಿಪಿರಿ ಮತ್ತು ಏಳನೇ ಮೈಲುಗಳಲ್ಲಿ ಎಚ್ಚರಿಕೆ ಫಲಕ ಅಳವಡಿಸಲಾಗುವುದು. ಇನ್ನೂ ಬೆಟ್ಟ ಹತ್ತುವಾಗ ಭಕ್ತರು ಮಾರ್ಗ ಮಧ್ಯೆ ಕಾಣುವ ಪ್ರಾಣಿಗಳಿಗೆ ತಿನ್ನಲು ಏನನ್ನೂ ನೀಡದಂತೆ ಮತ್ತು ಅಂಗಡಿ, ಮಳಿಗೆದಾರರು ಹೊರಕ್ಕೆ ತ್ಯಾಜ್ಯ ಚೆಲ್ಲದಂತೆ ತಾಕೀತು ಮಾಡಲಾಗಿದೆ. ಬೆಟ್ಟ ಹತ್ತುವ ಪ್ರತಿಯೊಬ್ಬರ ಕೈಗೆ ಕೋಲು (ದೊಣ್ಣೆ) ನೀಡಲಾಗುವುದು ಎಂದು ಟಿಟಿಡಿ ಮಾಹಿತಿ ನೀಡಿದೆ. ಹೀಗೆ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಭಕ್ತರ ಸುರಕ್ಷತೆ ಟಿಟಿಡಿ ಆದ್ಯತೆ ನೀಡಿದೆ.
ಬಾಲಕಿ ಸಾವಿನ ಬಳಿಕ ಸಮಯ ಬದಲಾವಣೆ: ಟಿಟಿಡಿ
ಅಲಿಪಿರಿ ಬಳಿ ಚಿರತೆಯೊಂದು ಆರು ವರ್ಷ ಬಾಲಕಿಯನ್ನು ಎಳೆದೊಯ್ದಿತ್ತು. ಈ ಘಟನೆಯಿಂದ ಭಕ್ತರಲ್ಲಿ ಭಯ ಶುರುವಾಗಿತ್ತು. ಸದ್ಯ ಆರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯಿಂದ ಎಚ್ಚೆತ್ತ ಟಿಟಿಡಿ ಮೊನ್ನೆಯಷ್ಟೇ ಕೆಲವು ಕ್ರಮಗಳನ್ನು ಜಾರಿಗೆ ಮಾಡಿತ್ತು.ಮಕ್ಕಳ ಜತೆ ಬೆಟ್ಟ ಹತ್ತುವ ಭಕ್ತರ ಸಮಯದಲ್ಲಿ ಬದಲಾವಣೆ ಮಾಡಿತ್ತು. ಬೆಳಗ್ಗೆ 05ಗಂಟೆಯಿಂದ ಮಧ್ಯಾಹ್ನ 02ಗಂಟೆವರೆಗೆ ಭಕ್ತರಿಗೆ ಬೆಟ್ಟ ಹತ್ತಲು ಅನುಮತಿ ನೀಡಲಾಗುವುದು. ಸಂಜೆ 6 ಗಂಟೆ ಬಳಿಕ ದ್ವಿಚಕ್ರ ವಾಹನ ಸವಾರರಿಗೆ ಪ್ರವೇಶ ನಿರಾಕರಿಸಲಾಯಿತು. ಇದರ ಬೆನ್ನಲ್ಲೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಟಿಟಿಡಿ ಇನ್ನಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.












Click it and Unblock the Notifications