ಟಿಆರ್‌ಪಿ ಹಗರಣ: ರಿಪಬ್ಲಿಕ್ ಟಿವಿಗೆ ಕ್ಲೀನ್ ಚಿಟ್ ಕೊಟ್ಟ ಜಾರಿ ನಿರ್ದೇಶನಾಲಯ
ಮುಂಬೈ, ಸೆಪ್ಟೆಟಂಬರ್ 23: ಮುಂಬೈ ಪೊಲೀಸರು ಪತ್ತೆ ಹಚ್ಚಿದ್ದ ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‌ಪಿ) ಹಗರಣದಲ್ಲಿ ಪತ್ರಕರ್ತ ಅರ್ನಬ್ ಗೋಸ್ವಾಮಿ ನೇತೃತ್ವದ ರಿಪಬ್ಲಿಕ್ ಟಿವಿಗೆ ಕ್ಲೀನ್ ಚಿಟ್ ನೀಡಲಾಗಿದೆ.
ಟಿಆರ್‌ಪಿ ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಸುದ್ದಿ ವಾಹಿನಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಮುಂಬೈ ನ್ಯಾಯಾಲಯಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಟಿಆರ್‌ಪಿ ಅಂಕಿ ಸಂಖ್ಯೆಗಳನ್ನು ತಿರುಚಿದ ಆರೋಪ ಎದುರಿಸುತ್ತಿದ್ದ ರಿಪಬ್ಲಿಕ್ ಟಿವಿ ಮತ್ತು ರಿಪಬ್ಲಿಕ್ ಭಾರತ್ ಸುದ್ದಿ ವಾಹಿನಿಗಳಿಗೆ ತನಿಖಾ ಸಂಸ್ಥೆ ಕ್ಲೀನ್‌ಚಿಟ್ ನೀಡಿದೆ. ಇದೇ ವೇಳೆ ಇನ್ನೆರಡು ಸುದ್ದಿ ವಾಹಿನಿಗಳಾದ ನ್ಯೂಸ್ ನೇಷನ್ ಮತ್ತು ಇಂಡಿಯಾ ಟುಡೇ ವಿರುದ್ಧದ ತನಿಖೆ ಪೂರ್ಣಗೊಂಡಿಲ್ಲ ಎಂದು ತಿಳಿಸಿದೆ.

ವಿಶೇಷ ನ್ಯಾಯಾಧೀಶರಿಂದ ಆರೋಪಪಟ್ಟಿ ಸ್ವೀಕಾರ
ಕಳೆದ ಸೆಪ್ಟೆಂಬರ್ 15, 2022ರಂದು ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್‌ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯವು ತನ್ನ ಪ್ರಾಸಿಕ್ಯೂಷನ್ ದೂರು ಸಲ್ಲಿಸಿತ್ತು. ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಬುಧವಾರ ಈ ಆರೋಪಪಟ್ಟಿ ಸ್ವೀಕರಿಸಿದರು. ಫಕ್ತ್ ಮರಾಠಿ, ಬಾಕ್ಸ್ ಸಿನಿಮಾ ಮತ್ತು ಮಹಾ ಮೂವೀಸ್‌ನ ನಿರ್ದೇಶಕರು, ಹಂಸಾ ರಿಸರ್ಚ್ ಗ್ರೂಪ್‌ಗೆ ಸಂಬಂಧಿಸಿದ ರಿಲೇಶನ್‌ಶಿಪ್ ಮ್ಯಾನೇಜರ್‌ಗಳು ಹಾಗೂ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (ಬಿಎಆರ್‌ಸಿ) ನೇಮಿಸಿಕೊಂಡಿದ್ದ ಗುತ್ತಿಗೆದಾರರು ಸೇರಿದಂತೆ 16 ಆರೋಪಿಗಳನ್ನು ಇಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಹೆಸರಿಸಿದೆ.

ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿರುದ್ಧ ಆರೋಪಪಟ್ಟಿ
ಪ್ರಕರಣಕ್ಕೆ ಸಂಬಂಧಿಸಿದಂತೆ ಇ ಡಿ ನವೆಂಭರ್ 2020ರಲ್ಲಿ ಜಾರಿ ಪ್ರಕರಣ ಮಾಹಿತಿ ವರದಿಯನ್ನು (ಇಸಿಐಆರ್) ದಾಖಲಿಸಿತ್ತು. ಮುಂಬೈ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಇ ಡಿ ಆಧರಿಸಿತ್ತು. ಮುಂಬೈ ಪೊಲೀಸರ ಅಪರಾಧ ವಿಭಾಗವು ರಿಪಬ್ಲಿಕ್ ಟಿವಿ ತನ್ನ ವೀಕ್ಷಕರ ಸಂಖ್ಯೆಯ ಕುರಿತಾದ ಮಾಹಿತಿಯನ್ನು ತಿರುಚುವ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ಆಪಾದಿಸಿತ್ತು. ಮುಂದೆ ಜೂನ್, 2021ರಲ್ಲಿ ವಾಹಿನಿಯ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತು.

ಮೊದಲ ಆರೋಪ ಪಟ್ಟಿಯಲ್ಲಿ ಮುಂಬೈ ಪೊಲೀಸರು ಹೇಳಿದ್ದೇನು?
''ಮೊದಲ ಚಾರ್ಜ್‌ಶೀಟ್ ಪ್ರಕಾರ ಈ ಪ್ರಕರಣದಲ್ಲಿ 22 ಆರೋಪಿಗಳಿದ್ದಾರೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 406, 409 (ಕ್ರಿಮಿನಲ್ ವಿಶ್ವಾಸದ್ರೋಹ) ಮತ್ತು 420 (ವಂಚನೆ) 465, 468 (ಫೋರ್ಜರಿ), 201, 204 (ಸಾಕ್ಷ್ಯ ನಾಶ), 212 (ಅಪರಾಧಿಗೆ ಆಶ್ರಯ), 120 ಬಿ (ಪಿತೂರಿ) ಅಡಿಯಲ್ಲಿ ಅಪರಾಧ ಎಸಗಿದ್ದಕ್ಕಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ,'' ಎಂದು ಮುಂಬೈ ಪೊಲೀಸರು ಹೇಳಿದ್ದರು. ಹನ್ಸ್ ಸಮೂಹದ ಕೆಲ ಉದ್ಯೋಗಿಗಳು ನಿರ್ದಿಷ್ಟ ಟಿವಿ ವಾಹಿನಿಗಳನ್ನು ವೀಕ್ಷಿಸಲು ಜನರಿಗೆ ಹಣ ನೀಡಿದ್ದರು. ಸ್ಯಾಂಪಲಿಂಗ್ ಮೀಟರಿಂಗ್ ಸೇವೆಗಳನ್ನು ತಿರುಚಲಾಗಿತ್ತು ಎಂಬುದು ಪತ್ತೆಯಾದ ಬಳಿಕ ಟಿಆರ್‌ಪಿ ಹಗರಣದ ಕುರಿತು ಅಪರಾಧ ವಿಭಾಗದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

ರಿಪಬ್ಲಿಕ್ ಟಿವಿ ವಿರುದ್ಧ ರೇಟಿಂಗ್ ತಿರುಚಿರುವ ಆರೋಪ
''ರಿಪಬ್ಲಿಕ್ ಟಿವಿ, ಬಾಕ್ಸ್ ಸಿನಿಮಾ, ಫಕ್ತ್ ಮರಾಠಿ ವಾಹಿನಿಗಳು ರೇಟಿಂಗ್ ತಿರುಚಲು ಬ್ರಾಡ್ ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC) ಮಾಜಿ ಸಿಇಒ ಪಾರ್ಥೋ ದಾಸ್ ಗುಪ್ತರಿಗೆ ಲಂಚ ನೀಡಿ, ತಮ್ಮ ಚಾನೆಲ್ ಟಿಆರ್‌ಪಿ ಹೆಚ್ಚಿಸಿಕೊಂಡಿದ್ದರು,'' ಎಂದು ಸಿಂಗ್ ವಿವರಿಸಿದ್ದರು. ನಂತರ BARC ಈ ಬಗ್ಗೆ ದೂರು ನೀಡಿತ್ತು. ಬಾರ್ಕ್ ಸಿಒಒ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.












Click it and Unblock the Notifications