ತ್ರಿಪುರಾ ನಾಗರಿಕ ಚುನಾವಣೆ ಮುಂದೂಡಲು ಸುಪ್ರೀಂಕೋರ್ಟ್ ನಕಾರ
ನವದೆಹಲಿ, ನವೆಂಬರ್ 23: ತ್ರಿಪುರಾ ನಾಗರಿಕ ಚುನಾವಣೆಯನ್ನು ಮುಂದೂಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ತ್ರಿಪುರಾದಲ್ಲಿ ನಾಗರಿಕ ಚುನಾವಣೆಗೆ ಮುನ್ನ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ ನಡೆಯುತ್ತಿದೆ.
"ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ಖಚಿತಪಡಿಸಿಕೊಳ್ಳಲು ನೀವು ಏನು ಮಾಡುತ್ತಿದ್ದೀರಿ ಎಂದು ತಿಳಿಯಲು ನಾವು ಬಯಸುತ್ತೇವೆ. ಇಂದು ಮತ್ತು ಮತ ಎಣಿಕೆ ದಿನದ ನಡುವೆ ಯಾವುದೇ ಉದ್ವಿಗ್ನ ಘಟನೆಗಳು ನಡೆಯದಂತೆ ನೀವು ಯಾವ ರೀತಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ?,'' ಎಂದು ನ್ಯಾಯಾಧೀಶರು ತ್ರಿಪುರಾ ಸರ್ಕಾರವನ್ನು ಪ್ರಶ್ನಿಸಿದೆ. ಮತದಾನದ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಲು ತೆಗೆದುಕೊಳ್ಳುತ್ತಿರುವ ಭದ್ರತಾ ಕ್ರಮಗಳ ಬಗ್ಗೆ ವಿವರವಾದ ಹೇಳಿಕೆಯನ್ನು ತಯಾರಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ನೀಡಿದ್ದು ಚುನಾವಣೆ ಮುಂದೂಡಲು ಕೋರ್ಟ್ ನಿರಾಕರಿಸಿದೆ.
ಭಾನುವಾರ ಅಗರ್ತಲಾದ ಪೊಲೀಸ್ ಠಾಣೆಯೊಳಗೆ ಬಿಜೆಪಿ ಸದಸ್ಯರು ತಮ್ಮ ಪಕ್ಷದ ಕಾರ್ಯಕರ್ತರಿಗೆ ದೊಣ್ಣೆ ಮತ್ತು ಕಲ್ಲುಗಳಿಂದ ಹೊಡೆದಿದ್ದಾರೆ ಎಂದು ಟಿಎಂಸಿ ಆರೋಪಿಸಿದೆ. ರಾಜ್ಯ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರ ಸಭೆಗೆ ಅಡ್ಡಿಪಡಿಸಿದ ಟಿಎಂಸಿ ನಾಯಕಿ ಸಯೋನಿ ಘೋಷ್ ಅವರನ್ನು ಕೊಲೆ ಯತ್ನದ ಆರೋಪದ ಮೇಲೆ ಬಂಧಿಸಲಾಯಿತು. ಬೆಳಗ್ಗೆ ಪಕ್ಷದ ನಾಯಕಿ ಸಯೋನಿ ಘೋಷ್ ಅವರನ್ನು ವಿಚಾರಣೆಗೆಂದು ಕರೆದೊಯ್ಯಲಾಯಿತು. ಈ ವೇಳೆ ಟಿಎಂಸಿ ಸದಸ್ಯರು ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದರು. ಟಿಎಂಸಿ ಮಾಡಿರುವ ಆರೋಪವನ್ನು ಬಿಜೆಪಿ ನಿರಾಕರಿಸಿತ್ತು. ಅಗರ್ತಲಾದ ಭಗಬನ್ ಠಾಕೂರ್ ಚೌಮುನಿ ಪ್ರದೇಶದಲ್ಲಿರುವ ಟಿಎಂಸಿ ರಾಜ್ಯ ಘಟಕದ ಸ್ಟೀರಿಂಗ್ ಕಮಿಟಿ ಮುಖ್ಯಸ್ಥ ಸುಬಾಲ್ ಭೌಮಿಕ್ ನಿವಾಸದ ಮೇಲೆ ಭಾನುವಾರ ರಾತ್ರಿ ನಡೆದ ದಾಳಿಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ. ಮಾಧ್ಯಮಗಳ ಸದಸ್ಯರನ್ನು ಸಹ ಕಟ್ಟಿ ಹಾಕಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಪೊಲೀಸರು ಮತ್ತು ತ್ರಿಪುರಾ ರಾಜ್ಯ ರೈಫಲ್ಸ್ ಸಿಬ್ಬಂದಿಯನ್ನು ಪ್ರದೇಶದಲ್ಲಿ ನಿಯೋಜಿಸಲಾಗಿದೆ.

ತ್ರಿಪುರಾದಲ್ಲಿನ ಹಿಂಸಾಚಾರ ಖಂಡಿಸಿ ಟಿಎಂಸಿ ಸಂಸದರ ನಿಯೋಗ ರಾಷ್ಟ್ರ ರಾಜಧಾನಿಯ ಗೃಹ ಸಚಿವಾಲಯದ (ಎಂಎಚ್‌ಎ) ಹೊರಗೆ ಧರಣಿ ಕುಳಿತಿದೆ. ಜೊತೆಗೆ ಸಂಸದರು ಗೃಹ ಸಚಿವರು ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಅಮಿತ್ ಶಾ ಅವರನ್ನು ಭೇಟಿ ಮಾಡಲು ಒತ್ತಾಯಿಸಿದ್ದಾರೆ. "ಗೃಹ ಸಚಿವರು ನಮ್ಮ ಮಾತನ್ನು ಕೇಳಬೇಕೆಂದು ನಾವು ಬಯಸುತ್ತೇವೆ. ತ್ರಿಪುರಾದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಶಾ ಮತ್ತು ಮೋದಿ ಇಬ್ಬರೂ ಉತ್ತರಿಸಬೇಕಾಗಿದೆ" ಎಂದು ಒತ್ತಾಯಿಸಿ ಟಿಎಂಸಿ ನಾಯಕ ಸುಖೇಂದು ಶೇಖರ್ ರೇ ಕಾರ್ಯಕರ್ತರೊಂದಿಗೆ ಧರಣಿ ಕುಳಿತಿದ್ದಾರೆ.
ಘಟನೆಯ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಾದ ಮಂಡಿಸಿದ ಟಿಎಂಸಿ ಕೌನ್ಸಿಲ್, ತ್ರಿಪುರಾದಲ್ಲಿ ನಡೆದಿದೆ ಎನ್ನಲಾದ ಹಲವಾರು ಹಿಂಸಾಚಾರದ ಘಟನೆಗಳ ದಿನಾಂಕ ಮತ್ತು ಸ್ಥಳವನ್ನು ಉಲ್ಲೇಖಿಸಿದ್ದು, "ಸ್ಕ್ರೀನ್ ಶಾಟ್‌ಗಳಲ್ಲಿ ಹಿಂಸಾಚಾರ ನಡೆಯುತ್ತಿರುವಾಗ ಪೊಲೀಸರು ಸ್ಥಳದಲ್ಲೇ ನಿಂತಿದ್ದರು. ಹಾಗಿದ್ದರೂ ಏನೂ ಮಾಡದೆ ಅಸಹಾಯಕತೆಯನ್ನು ಪ್ರದರ್ಶಿಸುತ್ತಿರುವುದನ್ನು ನೀವು ನೋಡಬಹುದು," ಎಂದು ಹೇಳಿದೆ. ತ್ರಿಪುರಾದಲ್ಲಿ ನಾಗರಿಕ ಸಂಸ್ಥೆಗಳ ಚುನಾವಣೆಗೆ ದಿನಾಂಕವನ್ನು ಮರು ನಿಗದಿಗೊಳಿಸಬೇಕು. ಇದರ ಜೊತೆಗೆ ವೀಕ್ಷಕರ ಸಮಿತಿಯನ್ನು ನೇಮಿಸಲು ಪರಿಗಣಿಸುವಂತೆ ಟಿಎಂಸಿ ಸುಪ್ರೀಂ ಕೋರ್ಟ್‌ಗೆ ಕೋರಿದೆ. ಟಿಎಂಸಿ ಪರ ವಕೀಲರು, ''ರಾಜಕೀಯ ಕಾರ್ಯಕರ್ತರನ್ನು ಹೊರಗೆ ತಳ್ಳಲಾಗುತ್ತಿದೆ, ಮಕ್ಕಳು ಮತ್ತು ಮಹಿಳೆಯರನ್ನು ಅವರ ಮನೆಯಿಂದ ಹೊರಗೆ ಎಳೆದು ಹಾಕಲಾಗಿದೆ, ವಾಹನಗಳನ್ನು ಧ್ವಂಸಗೊಳಿಸಲಾಗಿದೆ, ಇದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲ. 17 ಹಿಂಸಾಚಾರದ ಘಟನೆಗಳು ನಡೆದಿವೆ ಮತ್ತು ಒಬ್ಬನನ್ನು ಬಂಧಿಸಿಲ್ಲ. ಮತದಾರರಾದರೂ ಮತ ಹಾಕಲು ಬರುತ್ತಾರೆಯೇ? ಚುನಾವಣೆಗಳನ್ನು ಕೊನೆಯದಾಗಿ 2020ರಲ್ಲಿ ನಡೆಸಲಾಯಿತು. ಚುನಾವಣೆ ಮರು ನಿಗದಿಪಡಿಸಿದರೆ ಸ್ವರ್ಗವೇನೂ ಕುಸಿಯುವುದಿಲ್ಲ, ಎಂದು ಟಿಎಂಸಿ ವಾದ ಮಂಡಿಸಿತ್ತು.
ತ್ರಿಪುರಾ ಸರ್ಕಾರದ ಪರವಾಗಿ ವಾದ ಮಂಡಿಸಿದ ವಕೀಲ ಮಹೇಶ್ ಜೇಠ್ಮಲಾನಿ, "ಇದು ರಾಜಕೀಯವಾಗಿ ಯೋಜಿತ ಅರ್ಜಿಯಾಗಿದೆ. ಇಂದು ಪ್ರಚಾರದ ಕೊನೆಯ ದಿನವಾಗಿದೆ. ಇದ್ದಕ್ಕಿದ್ದಂತೆ, ಅವರು ಘಟನೆಗಳ [ಹಿಂಸಾಚಾರದ] ಸರಮಾಲೆಯೊಂದಿಗೆ ಬರುತ್ತಾರೆ. ಅವರು ಪ್ರಸ್ತಾಪಿಸಿದ ಪ್ರತಿಯೊಂದು ಘಟನೆಯಲ್ಲಿ, ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ನಾವು ಎಲ್ಲವನ್ನೂ ತನಿಖೆ ಮಾಡುತ್ತಿದ್ದೇವೆ. "ಸುಪ್ರೀಂ ಕೋರ್ಟ್ ನಮಗೆ ಅನುಸರಣೆ ವರದಿಯನ್ನು ಸಲ್ಲಿಸಲು ಕೇಳಿದೆ. ನಾಳೆ ನಾವು ಅದನ್ನು ಸಲ್ಲಿಸಲಿದ್ದೇವೆ," ಎಂದು ಹೇಳಿದರು.
ವಾದ ವಿವಾದವನ್ನು ಆಲಿಸಿದ ನಂತರ ಸುಪ್ರೀಂ ಕೋರ್ಟ್ ತ್ರಿಪುರಾ ನಾಗರಿಕ ಚುನಾವಣೆಯನ್ನು ಮುಂದೂಡಲು ನಿರಾಕರಿಸಿದೆ.












Click it and Unblock the Notifications