Tripura Assembly Election: ಅಸ್ಸಾಂ ಸಿಎಂ ಆಹ್ವಾನದ ಬಳಿಕ ಬಿಜೆಪಿಯೊಂದಿಗೆ ಮಾತುಕತೆಗೆ ಸಿದ್ಧವಾದ ತಿಪ್ರಾ ಮೋಥಾ!
' ನಮ್ಮನ್ನು ಘನತೆ ಮತ್ತು ಗೌರವದಿಂದ ಕರೆದರೆ, ನಾವು ಅವರೊಂದಿಗೆ ಮಾತುಕತೆಗೆ ಕುಳಿತುಕೊಳ್ಳುತ್ತೇವೆ'
ಅಗರ್ತಲಾ, ಮಾರ್ಚ್ 05: ಇತ್ತೀಚಿನ ತ್ರಿಪುರಾ ಚುನಾವಣೆಯಲ್ಲಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಿಪ್ರಾ ಮೋಥಾ ಪಕ್ಷವು ರಾಜ್ಯಕ್ಕೆ ಸಾಂವಿಧಾನಿಕ ಪರಿಹಾರ ನೀಡುವ ದೃಷ್ಟಿಯಿಂದ ಬಿಜೆಪಿಯೊಂದಿಗೆ ಮಾತುಕತೆಗೆ ಸಿದ್ಧವಾಗಿದೆ ಎಂದು ಭಾನುವಾರ ಹೇಳಿದೆ. ತ್ರಿಪುರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ 33 ಸ್ಥಾನಗಳನ್ನು ಪಡೆದುಕೊಂಡು ಬಹುಮತ ಪಡೆದುಕೊಂಡಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾಜಿ ರಾಜವಂಶಸ್ಥ ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮಾ ನೇತೃತ್ವದ ಬುಡಕಟ್ಟು ಪ್ರಾಬಲ್ಯದ ಪಕ್ಷದೊಂದಿಗೆ ಮಾತುಕತೆಯನ್ನು ಪುನರಾರಂಭಿಸಲು ಮುಂದಾಗಿದ್ದರು. ಈ ಬೆಳವಣಿಗೆ ನಂತರ ತಿಪ್ರಾ ಮೋಥಾ ಪಕ್ಷ ಭಾನುವಾರ ಮಾತುಕತೆಯ್ನು ಮುಂದುವರೆಸುವ ಇಂಗಿತ ವ್ಯಕ್ತಪಡಿಸಿರುವುದಾಗಿ ಮಾಹಿತಿ ನೀಡಿದೆ.

"ಅವರು ನಮ್ಮೊಂದಿಗೆ ಮಾತುಕತೆ ನಡೆಸಲು ಸಿದ್ಧರಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಯನ್ನು ನಾನು ಕೇಳಿದ್ದೇನೆ. ಅವರು ನಮ್ಮನ್ನು ಘನತೆ ಮತ್ತು ಗೌರವದಿಂದ ಕರೆದರೆ, ನಾವು ಅವರೊಂದಿಗೆ ಮಾತುಕತೆಗೆ ಕುಳಿತುಕೊಳ್ಳುತ್ತೇವೆ. ಆದರೆ ಯಾವುದೇ ಹುದ್ದೆಯ ಆಧಾರದ ಮೇಲೆ ಅಲ್ಲ. ತ್ರಿಪುರಾದ ಸಾಂವಿಧಾನಿಕ ಪರಿಹಾರದ ಆಧಾರದ ಮೇಲೆ ಮಾತ್ರ ನಾವು ಅವರೊಂದಿಗೆ ಮಾತನಾಡುತ್ತೇವೆ" ಎಂದು ಪ್ರದ್ಯೋತ್ ಮಾಣಿಕ್ಯ ದೆಬ್ಬರ್ಮನ್ ಹೇಳಿದ್ದಾರೆ.
"ನಾವು ತ್ರಿಪುರಾದ ಮೂಲನಿವಾಸಿಗಳು, ನಮ್ಮ ಹಕ್ಕುಗಳನ್ನು ನಿರ್ಲಕ್ಷಿಸಿ ನೀವು ತ್ರಿಪುರಾವನ್ನು ಆಳಬಹುದು ಎಂದು ನೀವು ಭಾವಿಸಿದರೆ, ನೀವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತ್ರಿಪುರಾದ ಮೂಲನಿವಾಸಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ತಿಪ್ರಾ ಮೋಥಾವನ್ನು ರಚಿಸಲಾಗಿದೆ. ತ್ರಿಪುರಾದ ಜನರು ನಮಗೆ ಮತ ಹಾಕಿದ್ದಾರೆ ಮತ್ತು ನಮ್ಮ ಪಕ್ಷವು ರಾಜಿ ಮಾಡಿಕೊಳ್ಳುವ ಮೂಲಕ ಅವರನ್ನು ನಿರಾಸೆಗೊಳಿಸುವುದಿಲ್ಲ" ಎಂದು ತಿಳಿಸಿದ್ದಾರೆ.
"ನಾವು ನಮ್ಮ ಸಾಂವಿಧಾನಿಕ ಹಕ್ಕುಗಳಿಗಾಗಿ ಹೋರಾಡುವ ಮಣ್ಣಿನ ಮಕ್ಕಳು, ಅವರು ತ್ರಿಪುರಾದ ಸಾಂವಿಧಾನಿಕ ಪರಿಹಾರದ ಬಗ್ಗೆ ಲಿಖಿತ ಭರವಸೆಗೆ ಸಿದ್ಧರಿದ್ದರೆ, ನಾವು ಅವರೊಂದಿಗೆ ಮಾತುಕತೆಗೆ ಕುಳಿತುಕೊಳ್ಳಲು ಸಿದ್ಧರಿದ್ದೇವೆ. ತ್ರಿಪುರಾದ ಜನರು ನಮಗೆ ಮತ ಹಾಕಿದ್ದಾರೆ. ಕೇವಲ ಯಾವುದೋ ಸ್ಥಾನಗಳ ಆಧಾರದ ಮೇಲೆ ಅವರ ಹಕ್ಕುಗಳನ್ನು ನಾವು ನಿರ್ಲಕ್ಷಿಸುವುದಿಲ್ಲ" ಎಂದು ವಿವರಿಸಿದ್ದಾರೆ.

ತ್ರಿಪುರಾ ಚುನಾವಣಾ ಫಲಿತಾಂಶಗಳು ಹೊರಬಂದ ನಂತರ, ಈಶಾನ್ಯ ಬಿಜೆಪಿಯ ಪ್ರಮುಖ ನಾಯಕ ಹಿಮಂತ್ ಬಿಸ್ವಾ ಶರ್ಮಾ ಅವರು, ತಿಪ್ರಾ ಮೋಥಾ ಪಕ್ಷ (ಟಿಎಂಪಿ) ಎತ್ತಿರುವ ಸಮಸ್ಯೆಗಳನ್ನು ಕೇಂದ್ರ ಮತ್ತು ತ್ರಿಪುರಾದ ಹೊಸ ಬಿಜೆಪಿ ಸರ್ಕಾರವು ಚರ್ಚಿಸಬೇಕಾಗಿದೆ ಎಂದು ಹೇಳಿದ್ದರು. ಬಿಜೆಪಿ ಮತ್ತು ಟಿಎಂಪಿ ನಡುವಿನ ಮಾತುಕತೆ ಪುನರಾರಂಭವಾಗಬಹುದು. ಆದರೆ, ಅದು ಸಾಂವಿಧಾನಿಕ ಚೌಕಟ್ಟಿನ ಅಡಿಯಲ್ಲಿರಬೇಕೇ ಹೊರತು ತ್ರಿಪುರವನ್ನು ವಿಭಜಿಸುವ ಷರತ್ತಿನ ಮೇಲೆ ಅಲ್ಲ ಎಂದು ಹೇಳಿದ್ದರು.
60 ಸದಸ್ಯ ಬಲದ ತ್ರಿಪುರಾ ವಿಧಾನಸಭಾ ಸ್ಥಾನಗಳಲ್ಲಿ ಮೊದಲ ಬಾರಿಗೆ ಚುನವಣಾ ಕಣಕ್ಕೆ ಇಳಿದಿದ್ದ ಪ್ರಾ ಮೋಥಾ ಪಕ್ಷ 13 ಸ್ಥಾನಗಳನ್ನು ಗೆದ್ದುಕೊಂಡಿದೆ. ಚುನಾವಣೆಯಲ್ಲಿ ಬಿಜೆಪಿ 33 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಎಡ-ಕಾಂಗ್ರೆಸ್ ಮೈತ್ರಿಕೂಟ 14 ಸ್ಥಾನಗಳನ್ನು ಪಡೆದುಕೊಂಡಿದೆ. ತೃಣಮೂಲ ಕಾಂಗ್ರೆಸ್ ತನ್ನ ಖಾತೆ ತೆರೆಯಲು ವಿಫಲವಾಗಿದೆ.












Click it and Unblock the Notifications