ಜಾರ್ಖಂಡ್ ರೋಪ್ ವೇ ದುರಂತ; ರಕ್ಷಣಾ ತಂಡದೊಂದಿಗೆ ಮೋದಿ ಸಂವಾದ
ನವದೆಹಲಿ, ಏಪ್ರಿಲ್ 13; ಭಾರತದ ಪ್ರಧಾನಿ ನರೇಂದ್ರ ಮೋದಿ ಜಾರ್ಖಂಡ್‌ನಲ್ಲಿ ನಡೆದ ರೋಪ್ ವೇ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ವಾಯುಪಡೆ, ಸೇನೆ, ಸ್ಥಳೀಯ ಆಡಳಿತದ ಜೊತೆ ಸಂವಾದ ನಡೆಸಿದರು.
ಬುಧವಾರ ಸಂಜೆ ನರೇಂದ್ರ ಮೋದಿ ಭಾರತೀಯ ವಾಯುಪಡೆ, ಭಾರತೀಯ ಸೇನೆ, ಎನ್‌ಡಿಆರ್‌ಎಫ್, ಐಟಿಬಿಪಿ, ಸ್ಥಳೀಯ ಆಡಳಿತದ ಪ್ರತಿನಿಧಿಗಳ ಜೊತೆ ಮಾತಕತೆ ನಡೆಸಿದರು. ಎಲ್ಲರೂ ಜಾರ್ಖಂಡ್‌ನ ಅತಿ ಎತ್ತರದ ರೋಪ್ ವೇ ದುರಂತದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ರಕ್ಷಣಾ ತಂಡಗಳ ಕಾರ್ಯವನ್ನು ಶ್ಲಾಘಿಸಿದ ನರೇಂದ್ರ ಮೋದಿ, ಪ್ರತಿ ಬಿಕ್ಕಟ್ಟಿನಿಂದ ಜನರನ್ನು ಹೊರತರುವ ಶಕ್ತಿಯನ್ನು ನಮ್ಮ ಸೇನೆ, ವಾಯುಪಡೆ, ಎನ್‌ಡಿಆರ್‌ಎಫ್, ಐಟಿಬಿಪಿ ಹೊಂದಿದೆ. ಇಂತಹ ಸಮರ್ಥ ಪಡೆಗಳನ್ನು ಹೊಂದಿರುವುದಕ್ಕೆ ರಾಷ್ಟ್ರವು ಹೆಮ್ಮೆಪಡುತ್ತದೆ ಎಂದರು.

ತ್ರಿಕೂಟ್-ದಿಯೋಘರ್ ರೋಪ್ ವೇ ರಕ್ಷಣಾ ಕಾರ್ಯಾಚರಣೆಯಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ರಕ್ಷಣಾ ಪಡೆಗಳ ರಕ್ಷಣಾ ಕಾರ್ಯದ ಅನುಭವ ನಮ್ಮ ಭವಿಷ್ಯಕ್ಕೆ ಉಪಯುಕ್ತವಾಗಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದರು.
ಘಟನೆ ನಡೆದ ಬಳಿಕ ಮೂರು ದಿನಗಳ ಕಾಲ ನೀವು ಗಡಿಯಾರದಂತೆ 24 ತಾಸು ಕೆಲಸ ಮಾಡಿದ್ದೀರಿ. ಇಂತಹ ಸವಾಲಿನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಜನರ ಜೀವ ಕಾಪಾಡಿದ್ದೀರಿ ಎಂದರು.

ಈ ಕಾರ್ಯಾಚರಣೆಗೆ ಇಡೀ ದೇಶವೇ ಮೆಚ್ಚುಗೆ ಸೂಚಿಸಿದೆ. ದುರಂತದಲ್ಲಿ ಸಿಲುಕಿದ್ದ ಕೆಲವರ ಪ್ರಾಣ ಉಳಿಸಲಾಗಲಿಲ್ಲ ಎಂಬುದು ಬೇಸರದ ವಿಚಾರವಾದರೂ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಮೋದಿ ಹೇಳಿದರು.
ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎನ್‌ಡಿಆರ್‌ಎಫ್, ವಾಯುಪಡೆ, ಸೇನೆ ಸೇರಿದಂತೆ ಎಲ್ಲಾ ಪ್ರತಿನಿಧಿಗಳನ್ನು ನಾನು ಅಭಿನಂದಿಸುತ್ತೇನೆ. ಅತ್ಯಂತ ತಾಳ್ಮೆಯಿಂದ ಅವರು ಕಷ್ಟಕರವಾದ ಕಾರ್ಯಾಚರಣೆ ನಿರ್ವಹಣೆ ಮಾಡಿದ್ದಾರೆ ಎಂದರು.
40 ಗಂಟೆಗಳ ಕಾರ್ಯಾಚರಣೆ; ಜಾರ್ಖಂಡ್‌ನ ತ್ರಿಕೂಟ್-ದಿಯೋಘರ್ ರೋಪ್ ವೇನಲ್ಲಿ ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಎರಡು ಕೇಬಲ್ ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದವು. ಇದರಿಂದಾಗಿ ಇಡೀ ರೋಪ್ ವೇ ಕಾರ್ಯಾಚರಣೆ ಸ್ಥಗಿತಗೊಂಡಿತು.
ಇದರಿಂದಾಗಿ ಸುಮಾರು 70 ಜನರು ರೋಪ್ ವೇ ಟ್ರಾಲಿಗಳಲ್ಲಿ ಸಿಲುಕಿದರು. ಇವರನ್ನು ರಕ್ಷಣೆ ಮಾಡಲು ಭಾರತೀಯ ವಾಯುಪಡೆ ಹೆಲಿಕಾಪ್ಟರ್ ಬಳಸಲಾಯಿತು. ಸೇನೆ ನೆರವು ಪಡೆಯಲಾಯಿತು. ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಸುಮಾರು 40 ಗಂಟೆ ಕಾರ್ಯಾಚರಣೆ ನಡೆಸಿದರು.
ಈ ಘಟನೆ ಬಳಿಕ ರಾಜ್ಯ ಸರ್ಕಾರ ತನ್ನನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ. ರೋಪ್ ವೇ ವ್ಯವಸ್ಥೆ ನಿರ್ವಹಣೆ ಮಾಡುತ್ತಿರುವ ದಾಮೋದರ್ ರೋಪ್‌ವೇ ಮತ್ತು ಇನ್ಫ್ರಾ ಲಿಮಿಟೆಡ್ (ಡಿಆರ್‌ಐಎಲ್) ಮೇಲೆ ಆರೋಪ ಮಾಡುತ್ತಿದೆ.
ಸಂಸ್ಥೆ ಪರವಾನಗಿ ಅವಧಿ ಪೂರ್ಣಗೊಂಡಿದ್ದರೂ ಅದು ಇನ್ನೂ ಕಾರ್ಯ ನಿರ್ವಹಣೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಜಾರ್ಖಂಡ್ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಪ್ಪಿಗೆ ಇಲ್ಲದೇ ರೋಪ್ ವೇ ಕಾರ್ಯ ನಿರ್ವಹಣೆ ಮಾಡುತ್ತಿರುವುದು ಹೇಗೆ? ಎಂಬ ಪ್ರಶ್ನೆ ಎದ್ದಿದೆ.
2019ರಲ್ಲಿ ಒಪ್ಪಂದ ಅವಧಿ ಮುಕ್ತಾಯಗೊಂಡಿತ್ತು. ಬಳಿಕ ಅದನ್ನು 5 ವರ್ಷಗಳ ಅವಧಿಗೆ ವಿಸ್ತರಣೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಈಗ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡುವ ವಿಚಾರದಲ್ಲಿಯೂ ಆರೋಪ ಪ್ರತ್ಯಾರೋಪಗಳನ್ನು ಮಾಡಲಾಗುತ್ತಿದೆ.
ಹೈಕೋರ್ಟ್ ಮಧ್ಯ ಪ್ರವೇಶ; ಈ ಘಟನೆಯನ್ನು ಜಾರ್ಖಂಡ್ ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ನ್ಯಾಯಾಲಯ ಸುಮೋಟೋ ಕೇಸು ದಾಖಲಿಸಿಕೊಂಡಿದೆ. ತನಿಖೆಗೆ ಆದೇಶ ನೀಡಿದ್ದು, ಏಪ್ರಿಲ್ 26ರಂದು ಮುಂದಿನ ವಿಚಾರಣೆ ನಡೆಸಲಿದೆ.
ತಾಂತ್ರಿಕ ಸಮಸ್ಯೆ ಇಂದ ಇಂತಹ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಿಖರವಾದ ಕಾರಣ ತನಿಖೆಯ ಬಳಿಕ ತಿಳಿದು ಬರಲಿದೆ.












Click it and Unblock the Notifications