ಮಹಾಕುಂಭ ಮೇಳಕ್ಕೆ ತೆರಳಿದ್ದ 10 ಮಂದಿ ಭಕ್ತರು ಭೀಕರ ಅಪಘಾತದಲ್ಲಿ ಸಾವು
ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇಂದು ಮಹಾಕುಂಭ ಮೇಳಕ್ಕೆ ತೆರಳಿದ್ದ ಸುಮಾರು ಹತ್ತು ಮಂದಿ ಭಕ್ತರು ಭೀಕರ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಪ್ರಯಾಗ್‌ರಾಜ್‌ನಲ್ಲಿ ಕಾರೊಂದು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಾಕುಂಭಕ್ಕೆ ತೆರಳುತ್ತಿದ್ದ ಹತ್ತು ಮಂದಿ ಭಕ್ತರು ಸಾವನ್ನಪ್ಪಿದ್ದಾರೆ.
ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯ ಮೆಜಾ ಪ್ರದೇಶದಲ್ಲಿ ಬೊಲೆರೊ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 19 ಮಂದಿ ಗಾಯಗೊಂಡಿದ್ದಾರೆ. ಇವರು ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಿಂದ ಮಹಾಕುಂಭ ಮೇಳಕ್ಕೆ ಪ್ರಯಾಣಿಸುತ್ತಿದ್ದರು. ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಿಂದ ತೆರಳುತ್ತಿದ್ದ ಬಸ್‌ಗೆ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಬೊಲೆರೋ ಡಿಕ್ಕಿ ಹೊಡೆದಿದ ಪರಿಣಾಮ 10 ಮಂದಿ ಭಕ್ತರು ಮೃತಪಟ್ಟಿದ್ದಾರೆ.

ಭಕ್ತರೆಲ್ಲರೂ ಮಹಾಕುಂಭ ಮೇಳದ ನಿಮಿತ್ತ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವ ತವಕದಲ್ಲಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಅಪಘಾತದ ಬಗ್ಗೆ ಪ್ರತಿಕ್ರಿಯಿಸಿ, ಮೃತರಿಗೆ ಸಂತಾಪ ಸೂಚಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಿಶೇಷವಾಗಿ ಮಹಾ ಕುಂಭಮೇಳದ ಸಮಯದಲ್ಲಿ ಲಕ್ಷಾಂತರ ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಿರುವ ಹಿನ್ನೆಲೆ ರಾಜ್ಯ ಆಡಳಿತವು ರಸ್ತೆ ಸುರಕ್ಷತಾ ಕ್ರಮಗಳ ಮೇಲ್ವಿಚಾರಣೆ ಮಾಡುತ್ತಿದೆ.
"ಮಧ್ಯರಾತ್ರಿ ಪ್ರಯಾಗ್‌ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಛತ್ತೀಸ್‌ಗಢದಿಂದ ಮಹಾಕುಂಭಕ್ಕೆ ತೆರಳುತ್ತಿದ್ದ ಭಕ್ತರನ್ನು ಹೊತ್ತೊಯ್ಯುತ್ತಿದ್ದ ಕಾರು ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ವರೂಪ್ ರಾಣಿ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಪ್ರಯಾಗರಾಜ್ ಹೆಚ್ಚುವರಿ ಎಸ್‌ಪಿ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಕೂಡ ಇಂತದ್ದೇ ಘಟನೆ ನಡೆದಿತ್ತು. ಮಧ್ಯಪ್ರದೇಶದ ಜಬಲ್‌ಪುರ್ ಜಿಲ್ಲೆಯಲ್ಲಿ ಅವರು ಪ್ರಯಾಣಿಸುತ್ತಿದ್ದ ಮಿನಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಾಕುಂಭದಿಂದ ಹಿಂದಿರುಗುತ್ತಿದ್ದ ಆಂಧ್ರಪ್ರದೇಶದ ಏಳು ಯಾತ್ರಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು.
ಮಹಾ ಕುಂಭಮೇಳವು ಈ ಅನಾಹುತಗಳ ನಡುವವೆಯೂ ದಾಖಲೆ ನಿರ್ಮಿಸಿದೆ. ಅತಿದೊಡ್ಡ ಧಾರ್ಮಿಕ ಸಭೆಗಳಲ್ಲಿ ಒಂದಾದ ಮಹಾ ಕುಂಭಮೇಳವು ಜನವರಿ 13ರಂದು ಪ್ರಾರಂಭವಾಗಿದ್ದು, ಮಹಾ ಶಿವರಾತ್ರಿಯೊಂದಿಗೆ ಇದೇ ಫೆಬ್ರವರಿ 26ರಂದು ಸಂಪನ್ನಗೊಳ್ಳಲಿದೆ. ನಿನ್ನೆ ಸಂಜೆ 6 ಗಂಟೆವರೆಗೆ ಸುಮಾರು 9.2 ಮಿಲಿಯನ್ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಹಾಗೂ ಒಟ್ಟು 500 ಮಿಲಿಯನ್ ಭಕ್ತರನ್ನು ದಾಟಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.












Click it and Unblock the Notifications