Maharashtra Assembly Elections 2024: ಬಿಜೆಪಿಗೆ ಆತಂಕ ತಂದ ಎರಡು ರಾಜ್ಯದ ಫಲಿತಾಂಶ?
ಮುಂಬೈ, ಅಕ್ಟೋಬರ್ 06: ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ 2024 ನಡೆಯಲಿದೆ. 288 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಮತದಾನ ನಡೆಯುವ ನಿರೀಕ್ಷೆ ಇದೆ. ಚುನಾವಣೆಗೆ ರಾಜಕೀಯ ಪಕ್ಷಗಳು, ಚುನಾವಣಾ ಆಯೋಗ ತಯಾರಿಯನ್ನು ನಡೆಸಿದೆ. ಅಕ್ಟೋಬರ್ ಅಂತ್ಯದಲ್ಲಿ ಕೇಂದ್ರ ಚುನಾವಣಾ ಆಯೋಗ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಆದರೆ ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆಯ ಚುಣಾವಣೋತ್ತರ ಸಮೀಕ್ಷೆ ಬಿಜೆಪಿಗೆ ಆತಂಕವನ್ನು ತಂದಿದೆ.
ಶನಿವಾರ 90 ಸದಸ್ಯ ಬಲದ ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆಯ ಚುಣಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದೆ. ಮತ ಎಣಕೆ ಅಕ್ಟೋಬರ್ 8ರ ಮಂಗಳವಾರ ನಡೆಯಲಿದೆ. ಆದರೆ ಸಮೀಕ್ಷೆಯಲ್ಲಿಯೇ ಬಿಜೆಪಿ ಎರಡೂ ರಾಜ್ಯದಲ್ಲಿ ಅಧಿಕಾರ ಪಡೆಯುವುದಿಲ್ಲ ಎಂದು ಅಂದಾಜಿಸಿದೆ. ಇದು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮವನ್ನು ಬೀರಲಿದೆಯೇ? ಎಂಬುದು ಪ್ರಶ್ನೆ.

ಸದ್ಯ ಮಹಾರಾಷ್ಟ್ರದಲ್ಲಿ ಬಿಜೆಪಿ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಸಿಪಿ (ಅಜಿತ್ ಪವಾರ್ ಬಣ) ಸೇರಿರುವ 'ಮಹಾಯುತಿ' ಮೈತ್ರಿಕೂಟ ಅಧಿಕಾರದಲ್ಲಿದೆ. 2024ರ ವಿಧಾನಸಭೆ ಚುನಾವಣೆಯನ್ನು ಮೈತ್ರಿಕೂಟದ ಮೂಲಕವೇ ಎದುರಿಸಲಾಗುತ್ತಿದೆ. ಯಾವ ಪಕ್ಷಕ್ಕೆ ಎಷ್ಟು ಸೀಟು? ಎಂದು ಈಗಾಗಲೇ ಚರ್ಚೆಗಳು ಆರಂಭವಾಗಿವೆ.
ಮಹಾರಾಷ್ಟ್ರ ಚುನಾವಣೆಯಲ್ಲಿ 'ಮಹಾಯತಿ' ಮೈತ್ರಿಕೂಟಕ್ಕೆ ಎಂವಿಎ ಮೈತ್ರಿಕೂಟ ಎದುರಾಳಿ. ಕಾಂಗ್ರೆಸ್, ಶಿವಸೇನೆ (ಉದ್ಧವ್ ಠಾಕ್ರೆ ಬಣ), ಎನ್‌ಸಿಪಿ (ಶರದ್ ಪವಾರ್) ಪಕ್ಷಗಳನ್ನು ಒಳಗೊಂಡಿರುವ ಮೈತ್ರಿಕೂಟ ಇದು. ಈಗಾಗಲೇ ರಾಜ್ಯದ ಚುನಾವಣಾ ಪೂರ್ವ ಸಮೀಕ್ಷೆಗಳು 'ಎಂವಿಎ' ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಹೇಳಿವೆ.
ಬಿಜೆಪಿಗೆ ಮಹಾರಾಷ್ಟ್ರ ಮುಖ್ಯ: ಮಂಗಳವಾರ ಪ್ರಕಟವಾಗುವ ಹರಿಯಾಣ ಮತ್ತು ಜಮ್ಮು & ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಮುಂಬರುವ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರಲಿದೆಯೇ? ಎಂಬುದು ಪ್ರಶ್ನೆ. ಮಹಾರಾಷ್ಟ್ರ ಬಿಜೆಪಿ ಪಾಲಿಗೆ ಮುಖ್ಯವಾದ ರಾಜ್ಯ. ಚುನಾವಣೆಯಲ್ಲಿ 'ಮಹಾಯತಿ' ಮೈತ್ರಿಕೂಟಕ್ಕೆ ಉತ್ತಮ ಫಲಿತಾಂಶ ದೊರೆಯುವುದಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ.
2024ರ ಲೋಕಸಭೆ ಚುನಾವಣೆಯಲ್ಲಿಯೂ 'ಮಹಾಯತಿ' ಮೈತ್ರಿಕೂಟ ರಾಜ್ಯದಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆದ್ದಿಲ್ಲ. ರಾಜ್ಯದ 48 ಸೀಟುಗಳ ಪೈಕಿ 30 ಸೀಟುಗಳಲ್ಲಿ 'ಎಂವಿಎ' ಮೈತ್ರಿಕೂಟ ಜಯಗಳಿಸಿದೆ. 'ಮಹಾಯತಿ' ಮೈತ್ರಿಕೂಟ ಗೆದ್ದಿರುವುದು 17 ಸೀಟು, ಅದರಲ್ಲಿ ಬಿಜೆಪಿ ಗೆದ್ದಿರುವುದು ಕೇವಲ 9 ಸೀಟುಗಳು.
2019ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಎನ್‌ಡಿಎ ಮೈತ್ರಿಕೂಟ 48ರಲ್ಲಿ 43 ಸ್ಥಾನಗಳಲ್ಲಿ ಗೆದ್ದಿತ್ತು. ಮಹಾರಾಷ್ಟ್ರ, ಜಾರ್ಖಂಡ್ ಮತ್ತು ದೆಹಲಿ ರಾಜ್ಯಗಳ ಪೈಕಿ ಬಿಜೆಪಿ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದೆ. ಬಿಜೆಪಿ ಜನರ ನಿರೀಕ್ಷೆಗಳನ್ನು ತಲುಪಲು ವಿಫಲವಾಗಿದೆ. ಆದ್ದರಿಂದ ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆದಿದೆ. ಬಳಿಕ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಎಂದರೆ ಹರಿಯಾಣ ಮತ್ತು ಜಮ್ಮು & ಕಾಶ್ಮೀರದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆಗಸ್ಟ್ 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದ ಬಳಿಕ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ನಡೆದಿದೆ. ಆದರೆ ಈ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷೆ ಮಾಡಿದಷ್ಟು ಸೀಟುಗಳು ಸಿಕ್ಕಿಲ್ಲ.
ಆದ್ದರಿಂದ ಬಿಜೆಪಿ ಹರಿಯಾಣ ಮತ್ತು ಜಮ್ಮು & ಕಾಶ್ಮೀರ ಚುನಾವಣೆ ಫಲಿತಾಂಶದ ನಂತರ ಮಹಾರಾಷ್ಟ್ರ ಚುನಾವಣೆ ತಂತ್ರವನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ. ದೀಪಾವಳಿ ಬಳಿಕ ನಡೆಯಲಿರುವ ಮಹಾರಾಷ್ಟ್ರದ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications