ಸಂದರ್ಶನದಲ್ಲಿ ಪ್ರಧಾನಿ ಮೋದಿ ಮಾತಿನ 10 ಮುಖ್ಯಾಂಶಗಳು
ನವದೆಹಲಿ, ಜನವರಿ 20: ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ನಂತರ ಮೊದಲ ಬಾರಿಗೆ ಚಾನೆಲ್ ವೊಂದಕ್ಕೆ ಸಂದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ, ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
ಜೀ ನ್ಯೂಸ್ ಚಾನೆಲ್, ಜ.19 ರಂದು ನಡೆಸಿದ ಸಂದರ್ಶನದಲ್ಲಿ ಆರ್ಥಿಕ ಬೆಳವಣಿಗೆ, ಚುನಾವಣೆಯ ಗೆಲುವು ಮತ್ತಿತರ ವಿಷಯಗಳ ಕುರಿತು ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಸುಲಲಿತವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ, ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡರು. ಅವರ ಸಂದರ್ಶನದ ಮುಖ್ಯಾಂಶದ ಆಯ್ದ ಭಾಗ ಇಲ್ಲಿದೆ.

ವಿಶ್ವ ಆರ್ಥಿಕ ಫೋರಂ ನಲ್ಲಿ ಭಾರತ
ಸ್ವಿಟ್ಜರ್ಲೆಂಡಿನ ಡೆವೋಸ್ ನ ವರ್ಡ್ ಎಕಾನಾಮಿಕ್ ಫೊರಂ, ವಿಶ್ವಕ್ಕೆ ಒಂದು ಉತ್ತಮ ಆರ್ಥಿಕ ವೇದಿಕೆ. ವಿಶ್ವದ ಅಗ್ರಗಣ್ಯ ಉದ್ಯಮಿಗಳು ಭಾಗವಹಿಸುವ ಸಭೆ ಅದು. ವಿಶ್ವದ ಆರ್ಥಿಕ ಭವಿಷ್ಯದ ಕುರಿತು ಚರ್ಚೆ ನಡೆಯುತ್ತದೆ. ಇಲ್ಲಿ ಭಾರತ ಆಕರ್ಷಣೆಯ ಕೇಂದ್ರ. ಏಕೆಂದರೆ ಭಾರತದ ಜಿಡಿಪಿಯಲ್ಲಿ ವೇಗವಾಗಿ ಬದಲಾವಣೆ ಆಗುತ್ತಿರುವುದು ಮತ್ತು ಇದನ್ನು ವಿಶ್ವ ಬ್ಯಾಂಕ್ ಮತ್ತು ಮೂಡೀಸ್ ನಂಥ ಸಂಸ್ಥೆಗಳೇ ಮೆಚ್ಚಿರುವುದು ಅದಕ್ಕೆ ಕಾರಣ. ಭಾರತ ವಿಶ್ವಮಟ್ಟದಲ್ಲಿ ತನ್ನ ಸಾಮರ್ಥ್ಯ ತೋರಿಸಲು ಇದು ಒಂದು ವೇದಿಕೆ

2018 ರ ಕೇಂದ್ರ ಬಜೆಟ್ ಅಜೆಂಡಾ
ನನ್ನ ಸರ್ಕಾರ ಬಜೆಟ್ ಕುರಿತು ಒಂದೇ ಒಂದು ಅಜೆಂಡಾವನ್ನಿಟ್ಟುಕೊಂಡಿದೆ. ಅದು ಅಭಿವೃದ್ಧಿ. ಮತ್ತು ಅದನ್ನೇ ನೀವೀಗ ನೋಡುತ್ತಿದ್ದೀರಿ.

ಸರ್ಕಾರದ ಸಾಧನೆ
ನಮ್ಮ ಸರ್ಕಾರದ ಸಾಧನೆಯನ್ನು ಕೇವಲ ಅಪನಗದೀಕರ ಮತ್ತು ಜಿಎಸ್ಟಿಯಿಂದ ಮಾನದಂಡ ಮಾಡುವುದು ತಪ್ಪು. ಬ್ಯಾಂಕುಗಳು ರಾಷ್ಟ್ರೀಕರಣಗೊಂಡ ಮೇಲೆ ಸುಮಾರು ಶೇ.30-40 ರಷ್ಟು ಜನರು ಬ್ಯಾಂಕಿಂಕ್ ವ್ಯವಸ್ಥೆಯಿಂದ ದೂರವುಳಿದಿದ್ದರು. ನಾವು ಅವರನ್ನೂ ಬ್ಯಾಂಕಿಂಗ್ ವ್ಯವಸ್ಥೆಯೊಳಗೆ ತಂದಿದ್ದೇವೆ. ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ಇವೆಲ್ಲ ಸಾಧನೆಯಲ್ಲವೇ?

ಒಂದು ರಾಷ್ಟ್ರ ಒಂದು ಚುನಾವಣೆ
ಚುನಾವಣಾ ಪದ್ಧತಿಯಲ್ಲೂ ಸುಧಾರಣೆ ತರಲು ನಾವು ನೋಡುತ್ತಿದ್ದೇವೆ. ಏಕೆಂದರೆ ಒಂದು ವರ್ಷದಲ್ಲೆ ಬೇರೆ ಬೇರೆ ರಾಜ್ಯಗಳಲ್ಲಿ ಹಲವು ಸಂದರ್ಭಗಳಲ್ಲಿ ಚುನಾವಣೆ ನಡೆಯುತ್ತದೆ. ಇದಕ್ಕಾಗಿ ಮಿಲಿಟರಿ, ಪೊಲೀಸ್, ಸಿಬ್ಬಂದಿ ನಿಯೋಜನೆ, ಹಣದ ವೆಚ್ಚ ಇವೆಲ್ಲ ಯೋಚಿಸಿದರೆ ಇಡೀ ದೇಶದಲ್ಲಿ ಒಂದು ವಾರ ಅಥವಾ, ಕೆಲವು ನಿರ್ದಿಷ್ಟ ದಿನಗಳಲ್ಲಿ ಒಂದೇ ಬಾರಿ ಚುನಾವಣೆ ನಡೆಸಿದರೆ ಹೆಚ್ಚು ಖರ್ಚು ಇರುವುದಿಲ್ಲ. ಸಿಬ್ಬಂದಿಗಳಿಗೆ ಒತ್ತಡವೂ ಇರುವುದಿಲ್ಲ.ಈ ಬಗ್ಗೆ ನಾವು ಗಂಭೀರವಾಗಿ ಯೋಚಿಸುತ್ತಿದ್ದೇವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೂ ಒಂದರ ಹಿಂದೆ ಒಂದು ನಡೆಯಬೇಕಿದೆ.

ಜಿಎಸ್ಟಿ ಮತ್ತು ಅಪನಗದೀಕರಣ
ಜಿಎಸ್ಟಿ ಮತ್ತು ಅಪನಗದೀಕರಣಗಳು ಹಲವು ಜನರಲ್ಲಿ ಬೇಸರ ಮೂಡಿಸಿರಬಹುದು. ಆದರೆ ನಮ್ಮ ಉದ್ದೇಶ ಒಂದೇ. ಒಂದು ದೇಶ, ಒಂದು ತೆರಿಗೆ ಎಂಬುದು. ಈ ಎರಡೂ ಕ್ರಮಗಳ ಉಪಯೋಗವೇನು ಎಂಬುದು ಈಗ ತಿಳಿಯದಿರಬಹುದು. ಆದರೆ ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತೆಗೆದುಕೊಂಡ ದೂರದೃಷ್ಟಿಯ ಕ್ರಮಗಳು ಇವು.

ವಿದೇಶಿ ನೇರ ಬಂಡವಾಳ
ವಿದೇಶಿ ನೇರ ಬಂಡವಾಳದ ವಿಷಯಕ್ಕೆ ಬಂದರೆ ವಿದೇಶಗಳು ಎಂದಿಗೂ ಭಾರತವನ್ನು ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ ಯಾವಾಗ ನಾವು ಬಹುಮತದಿಂದ ಗೆದ್ದೆವೋ, ಆಗ ವಿಶ್ವಕ್ಕೆ ನಮ್ಮ ಮೇಲೆ ವಿಶ್ವಾಸ ಹುಟ್ಟಿತು. ಈಗ ವಿದೇಶಿಯರು ಭಾರತದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿದ್ದಾರೆ. ಸರ್ಕಾರದ ಪಾರದರ್ಶಕತೆ ಮತ್ತು ಪ್ರಜಾಪ್ರಭುತ್ವಕ್ಕೆ ನೀಡುತ್ತಿರುವ ಬೆಲೆಯ ಬಗ್ಗೆ ವಿಶ್ವಮಟ್ಟದಲ್ಲಿ ಗೌರವವಿದೆ.

ಉದ್ಯೋಗ ಸೃಷ್ಟಿ
ಒಂದು ವರ್ಷದಲ್ಲಿ 70 ಲಕ್ಷ ಪಿಎಫ್ ಖಾತೆಗಳನ್ನು ತೆರೆಯಲಾಗಿದೆ. ಇದರರ್ಥ ಉದ್ಯೋಗಾವಕಾಶ ಸೃಷ್ಟಿಯಾಗುತ್ತಿದೆ ಎಂದೇ ಅಲ್ಲವೇ? ಅಷ್ಟೇ ಅಲ್ಲ, ಸರ್ಕಾರ ಸಣ್ಣ ಕುದ್ಯಮಿಗಳಿಗೆ ಮತ್ತು ಅನೌಪಚಾರಿಕ ವಿಭಾಗಗಳಿಗೂ ಒತ್ತು ನೀಡುತ್ತಿದೆ.

ವಿಶ್ವನಾಯಕರೊಂದಿಗೆ
ವಿಶ್ವ ನಾಯಕರಾದ ಪುಟಿನ್, ಟ್ರಂಪ್ ಮುಂತಾದವರ ಜೊತೆ ನಾನು ನಿಲ್ಲುವಾಗ ನನಗೆ ಅರಿವಿದೆ, ನಾನು 1.15 ಶತಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದೇನೆ ಎಂಬುದು. ಪ್ರತಿಯೊಂದನ್ನೂ ಧನಾತ್ಮಕ ದೃಷ್ಟಿಕೋನದಿಂದ ನೋಡುವುದು ಮುಖ್ಯ. ನಾವು ವಿಶ್ವದೊಂದಿಗೆ ಬೆಸೆಯುವುದು ಈ ಹೊತ್ತಿನ ಅಗತ್ಯ.

ಭ್ರಷ್ಟಾಚಾರ
ಸರ್ಕಾರಿ ಅಧಿಕಾರಿಗಳ ಸಹಾಯದಿಂದಲೇ ಈ ಸರ್ಕಾರ ಇಷ್ಟೆಲ್ಲ ಸಾಧನೆ ಮಾಡಲು ಸಾಧ್ಯವಾಗಿರುವುದು. ಇವರೆಲ್ಲರೂ ಸರ್ಕಾರದ ಭಾಗಗಳು. ಯಾವಾಗ ಇವರ ನಾಯಕರು ಭ್ರಷ್ಟರಾಗಿರುವುದಿಲ್ಲವೋ, ಆಗ ಅವರೂ ದಕ್ಷತೆಯಿಂದ ಕೆಲಸ ಮಾಡುತ್ತಾರೆ

2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆಗೆ ನನ್ನ ಪ್ರಚಾರ ಶೈಲಿಯಲ್ಲಿ ಯಾವ ಬದಲಾವಣೆಯೂ ಇಲ್ಲ. ನಾನು ಗುಜರಾತ್ ಮುಖ್ಯಮಂತ್ರಿಯಾದಾಗಿನಿಂದ ಹೇಗೆ ಪ್ರಚಾರ ನಡೆಸುತ್ತಿದ್ದೇನೋ, ಈಗಲೂ ಹಾಗೆಯೇ ನಡೆಸುತ್ತಿದ್ದೇನೆ. ಈ ದೇಶದ ನೂರು ಕೋಟಿಗೂ ಹೆಚ್ಚು ಜನ ನನ್ನನ್ನು ಇಲ್ಲಿಗೆ ಕಳಿಸಿದ್ದಾರೆ. ನಾನು ಈಗ ಏನು ಮಾಡಬೇಕು ಎಂಬುದು ಮುಖ್ಯ. ಮುಂದಿನ ಚುನಾವಣೆಯ ಬಗ್ಗೆ ಯೋಚಿಸುವುದಕ್ಕೆ ಸಮಯವಿಲ್ಲ.












Click it and Unblock the Notifications