Tirumala Tirupati: ತಿರುಪತಿ ತಿಮ್ಮಪ್ಪನಿಗೆ 108 ಚಿನ್ನದ ಕಮಲ ಕಾಣಿಕೆ ನೀಡಿದ ಭಕ್ತ- ಎಷ್ಟು ಮೊತ್ತ, ಯಾವುದಕ್ಕೆ ಬಳಕೆ ತಿಳಿಯಿರಿ
ತಿರುಪತಿ, ಸೆಪ್ಟೆಂಬರ್ 06: ತಿರುಪತಿ ತಿಮ್ಮಪ್ಪ ಭಾರತದ ಅತ್ಯಂತ ಶ್ರೀಮಂತ ದೇವರು ಎಂಬುದರಲ್ಲಿ ಎರಡು ಮಾತಿಲ್ಲ. ತಿರುಮಲ ದೇವಸ್ಥಾನಕ್ಕೆ ಪ್ರತಿವರ್ಷ ನೂರಾರು ಕೋಟಿ ಕಾಣಿಕೆ ಹರಿದುಬರುತ್ತದೆ. ಭಕ್ತರು ಕೇವಲ ಹಣದ ರೂಪದಲ್ಲಿ ಅಷ್ಟೇ ಅಲ್ಲದೇ ಚಿನ್ನ, ಬೆಳ್ಳಿ ಹಾಗೂ ವಜ್ರಗಳ ರೂಪದಲ್ಲಿಯೂ ಕಾಣಿಕೆ ನೀಡುವುದು ರೂಢಿಯಾಗಿದೆ. ಈಗ ತಿರುಪತಿ ವೆಂಕಟೇಶ್ವರನಿಗೆ ಭಕ್ತರೊಬ್ಬರು 108 ಚಿನ್ನದ ಕಮಲಗಳನ್ನು ಕಾಣಿಕೆಯಾಗಿ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಡಪಾ ಜಿಲ್ಲೆಯ ರಾಜಾ ರೆಡ್ಡಿ ಎಂಬ ಭಕ್ತರೊಬ್ಬರು ಬುಧವಾರ ತಿರುಮಲ ತಿರುಪತಿ ದೇವಸ್ಥಾನದಲ್ಲಿ ವೆಂಕಟೇಶ್ವರನಿಗೆ 108 ಚಿನ್ನದ ಕಮಲಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಮಾತನಾಡಿರುವ ಲಲಿತಾ ಜ್ಯುವೆಲ್ಲರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮಾಲೀಕ ಕಿರಣ್ ಕುಮಾರ್, ಕಮಲಗಳನ್ನು ನಮ್ಮ ಕಂಪನಿಯೇ ತಯಾರಿಸಿದ್ದು, 2 ಕೋಟಿ ರೂಪಾಯಿ ವೆಚ್ಚದಲ್ಲಿ ಹೂಗಳನ್ನು ತಯಾರಿಸಲಾಗಿದೆ ಎಂದು ಬಹಿರಂಗಪಡಿಸಿದ್ದಾರೆ.
ಈ ಕಮಲಗಳನ್ನು ಅಷ್ಟದಳ ಪಾದ ಪದ್ಮಾರಾಧನೆಗೆ ಬಳಸುವ ಸಾಧ್ಯತೆ ಇದೆ. 1984 ರಲ್ಲಿ, ಗುಂಟೂರಿನ ಮುಸ್ಲಿಂ ಭಕ್ತರೊಬ್ಬರು ವೆಂಕಟೇಶ್ವರ ಸ್ವಾಮಿಗೆ 108 ಚಿನ್ನದ ಕಮಲಗಳನ್ನು ಅರ್ಪಿಸಿದ್ದರು. ಅಂದಿನಿಂದ, ಅವುಗಳನ್ನು ಪ್ರತಿ ಮಂಗಳವಾರದಂದು ವಿಶೇಷ ಅಷ್ಟದಳ ಪಾದ ಪದ್ಮಾರಾಧನೆ ಆಚರಣೆಗಳಿಗೆ ಬಳಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ.
ದೇವಾಲಯದಲ್ಲಿ ಪ್ರತಿ ಮಂಗಳವಾರದಂದು ಪಾದ ಪದ್ಮಾರಾಧನೆ ಸೇವೆಯನ್ನು ನಡೆಸಲಾಗುತ್ತದೆ. ಇದು ದೇವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಪೂಜಾರಿಗಳು ಭಗವಂತನ ದೇವದಾಸ ನಾಮಗಳನ್ನು ಪಠಿಸುತ್ತಾರೆ. ಭಗವಂತನ ಪ್ರತಿಯೊಂದು ನಾಮವನ್ನು ಜಪಿಸುವಾಗ, ದೇವರ ಪಾದಗಳಿಗೆ ಒಂದು ಚಿನ್ನದ ಕಮಲವನ್ನು ಅರ್ಪಿಸಲಾಗುತ್ತದೆ.

ಬ್ರಹ್ಮೋತ್ಸವದ ವೇಳೆ ವಿಐಪಿ ದರ್ಶನಕ್ಕೆ ಅವಕಾಶವಿಲ್ಲ
ತಿರುಮಲ ಬ್ರಹ್ಮೋತ್ಸವದ ವೇಳೆ ವಿಐಪಿ ದರ್ಶನಕ್ಕೆ ಶಿಫಾರಸು ಪತ್ರಗಳನ್ನು ಅನುಮತಿಸಲಾಗುವುದಿಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ.
ಬ್ರಹ್ಮೋತ್ಸವದ ಕೈಪಿಡಿಯನ್ನು ಬಿಡುಗಡೆ ಮಾಡಿದ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ, 'ಸಾಮಾನ್ಯ ಯಾತ್ರಾರ್ಥಿಗಳಿಗೆ ಉತ್ತಮ ದರ್ಶನ ಮತ್ತು ಎಲ್ಲಾ ಸೇವೆಗಳನ್ನು ಒದಗಿಸಲು ಟಿಟಿಡಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತದೆ' ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 18 ರಂದು ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಬ್ರಹ್ಮೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ವೆಂಕಟೇಶ್ವರ ದೇವರಿಗೆ ರೇಷ್ಮೆ ವಸ್ತ್ರವನ್ನು ಅರ್ಪಿಸಲಿದ್ದಾರೆ.
ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ಅವಳಿ ಬ್ರಹ್ಮೋತ್ಸವಗಳು ನಡೆಯಲಿವೆ. ಸಾಲಕಟ್ಲ ಬ್ರಹ್ಮೋತ್ಸವಗಳು ಸೆಪ್ಟೆಂಬರ್ 18 ಮತ್ತು 26 ರ ನಡುವೆ ನಡೆಯಲಿದ್ದು, ನವರಾತ್ರಿ ಬ್ರಹ್ಮೋತ್ಸವಗಳು ಅಕ್ಟೋಬರ್ 15 ರಿಂದ 23 ರ ನಡುವೆ ನಡೆಯಲಿವೆ.












Click it and Unblock the Notifications